ಬುಧವಾರ, ನವೆಂಬರ್ 20, 2019
22 °C

ಸಿದ್ದರಾಮಯ್ಯಗೆ ಜಾತಿ ರಾಜಕಾರಣ ಮಾಡಿ ಬೆಳೆಯುವ ಆಸೆ: ಈಶ್ವರಪ್ಪ ಕಿಡಿ

Published:
Updated:
prajavani

ದಾವಣಗೆರೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡಿ ಬೆಳೆಯಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ. ಅದಕ್ಕಾಗಿಯೇ ಒಂದು ಜಾತಿಯ ವಿರುದ್ಧ ಅದೇ ಜಾತಿಯರವನ್ನು ಚುನಾವಣಾ ಕಣಕ್ಕೆ ಇಳಿಸಿ ಜಾತಿ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ ಬಿಜೆಪಿ ಜಿಲ್ಲಾ ಘಟಕದಿಂದ ಬುಧವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕುರುಬ ಸಮುದಾಯದ ಸಿ.ಎಚ್. ವಿಜಯಶಂಕರ್ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸಿದ್ದರು. ಆದರೆ ಅವರು ಸೋತು ವಾಪಸ್ ಬಿಜೆಪಿಗೆ ಬರುತ್ತಿದ್ದಾರೆ. ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ಅದೇ ಸಮುದಾಯದ ಭೈರತಿ ಸುರೇಶ್ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಜಾತಿ ವೋಟು ವಿಭಜಿಸುವುದು ಇದರ ಹಿಂದಿನ ಉದ್ದೇಶ. ಯಾರು ಏನೇ ಆಗಲಿ ಜಾತಿ ಕೆಡಿಸುವುದು ಅವರ ಉದ್ದೇಶ’ ಎಂದು ಟೀಕಿಸಿದರು.

‘ಜಾತಿ ಹಾಗೂ ಧರ್ಮವನ್ನು ಒಡೆದು ದೊಡ್ಡವರಾದವರು ಯಾರೂ ಇಲ್ಲ. ಟಿಪ್ಪು ಸುಲ್ತಾನ್ ಜಯಂತಿ ಆಚರಿಸಬೇಕು ಎಂದು ಯಾವ ಮುಸಲ್ಮಾನರೂ ಕೇಳಿರಲಿಲ್ಲ. ಆದರೆ ಟಿಪ್ಪು ಜಯಂತಿ ಆಚರಿಸಿ ಬೆಂಕಿ ಹಚ್ಚಿದರಲ್ಲ’ ಎಂದು ಹೇಳಿದ ಅವರು, ‘ರಾಷ್ಟ್ರೀಯ ವಿಚಾರವನ್ನು ಮುಂದಿಟ್ಟುಕೊಂಡವರಿಗೆ ರಾಜಕೀಯದಲ್ಲಿ ಭವಿಷ್ಯ ಇದೆಯೇ ಹೊರತು. ವ್ಯಕ್ತಿ, ಜಾತಿ, ಧರ್ಮದ ಮೇಲೆ ಪಕ್ಷ ಬೆಳೆಸಲು ಸಾಧ್ಯವಿಲ್ಲ’ ಎಂದರು.

ಬೆಂಬಲ ನೀಡಿದರೆ ಬೇಡ ಎನ್ನುವುದಿಲ್ಲ: ಈಶ್ವರಪ್ಪ

ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಕಟ್ಟಡದ ಉದ್ಘಾಟನೆ ವೇಳೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಬಿಜೆಪಿಗೆ ಸಂಪೂರ್ಣ ಬಹುಮತ ಇದೆ. ಅದೇ ರೀತಿ ಶಾಸಕರ ಬೆಂಬಲವು ಸಹ ಇದೆ. ಬಾಹ್ಯ ಬೆಂಬಲದ ಅವಶ್ಯಕತೆ ಇಲ್ಲ. ಕೇಂದ್ರದಲ್ಲಿ ಬಹುಮತ ವಿದ್ದರೂ ಅನೇಕ‌ ಪಕ್ಷಗಳು ಬೆಂಬಲ ನೀಡಿದವು. ಅದೇ ರೀತಿ ಇಲ್ಲಿ ಬೆಂಬ‌ಲ ನೀಡಿದರೆ ಬೇಡ ಎನ್ನುವುದಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ, ದೇವೇಗೌಡರು ಹೇಳಿದರು. 

ಕಾಂಗ್ರೆಸ್, ಜೆಡಿಎಸ್ ಮಿತೃತ್ವ ಉಳಿಯಲಿಲ್ಲ. ಅದರ ಫಲವನ್ನು ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ್ದಾರೆ. ಬಿಜೆಪಿಗೆ ಪೂರ್ಣ ಬಹುಮತ ಬರದಿದ್ದರೂ, ಬಿಜೆಪಿಯೇ ಆಡಳಿತ ನಡೆಸಬೇಕು ಎನ್ನುವ ವಾತಾವರಣ ಸೃಷ್ಟಿಯಾಗಿದೆ ಎಂದರು.

ಬಿಜೆಪಿಗೆ ಜೆಡಿಎಸ್ ಸೇರಿ ಹಲವು ಪಕ್ಷಗಳು ಸೇರುತ್ತಿವೆ. ಬಿಜೆಪಿ ಸದೃಢವಾಗಿ ಬೆಳೆಯುತ್ತಿದೆ. ಚುನಾವಣೆ ಈಗ ಆಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಚುನಾವಣೆ ಏನಾದ್ರು ಬಂದರೆ ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ ಎಂದರು.

ಪೇಜಾವರ ಶ್ರೀಗಳು ನಮ್ಮ‌ ಮನೆ ದೇವರು ಇದ್ದಂತೆ ಅವರನ್ನು ಭೇಟಿ ಮಾಡುವುದನ್ನು ಬಿಟ್ಟು ಬೇರೆ ಯಾರನ್ನು ಭೇಟಿ ಮಾಡಲಿ. ಇದನ್ನು‌ ಕೆಲ ಮಾಧ್ಯಮಗಳು ಬೇಕಂತಲೇ ಅಪಪ್ರಚಾರ ಮಾಡುತ್ತಿವೆ ಎಂದರು.

ಕಲ್ಯಾಣ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಅಹಿಂದ ಸಭೆ ನಡೆಸುತ್ತಿರುವ ಪ್ರಶ್ನೆಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗೋದು ತಿರುಕನ‌ ಕನಸು. ಅಹಿಂದ ಸಮಾವೇಶ ಮಾಡಿದರೂ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಭವಿಷ್ಯ ಇಲ್ಲ. ಕರ್ನಾಟಕದಲ್ಲಿ ಜಾತಿ ವಿಚಾರಗಳಿಗೆ ಜನ ಬೆಂಬಲ ಕೊಡುವುದಿಲ್ಲ. ಬೆಂಬಲ ಕೊಡುವುದು ರಾಷ್ಟ್ರೀಯ ವಿಚಾರಗಳಿಗೆ ಮಾತ್ರ ಎಂದರು.

ಪ್ರತಿಕ್ರಿಯಿಸಿ (+)