ಸೋಮವಾರ, ಆಗಸ್ಟ್ 2, 2021
23 °C
ವಾಹನ ಸವಾರರಲ್ಲಿ ಅರಿವು ಮೂಡಿಸಿದ ದುಬಾರಿ ದಂಡ

ಬೈಕ್‌ಗಳ ಹೊಗೆ ತಪಾಸಣೆಗೆ ನೂಕುನುಗ್ಗಲು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇಂದ್ರ ಸರ್ಕಾರವು ಮೋಟರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸಿರುವುದು ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವಲ್ಲಿ ಫಲ ನೀಡತೊಡಗಿದೆ. ಹೊಗೆ ತಪಾಸಣೆ (ಎಮಿಷನ್‌ ಟೆಸ್ಟ್‌) ಮಾಡುವ ಕೇಂದ್ರಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.

ಕುಡಿದು ಚಲಾವಣೆ, ಸಿಗ್ನಲ್‌ ಉಲ್ಲಂಘನೆ ಹೀಗೆ 29 ರೀತಿಯ ನಿಯಮ ಉಲ್ಲಂಘನೆಗಳನ್ನು ಪಟ್ಟಿ ಮಾಡಿ ಯಾವುದಕ್ಕೆ ಎಷ್ಟು ದಂಡ ಎಂದು ತಿಳಿಸಲಾಗಿದೆ. ಅದರಲ್ಲಿ ಕಪ್ಪು ಹೊಗೆ ಉಗುಳುವಿಕೆ ಕೂಡ ಒಂದು. ಗಣಕೀಕೃತ ಹೊಗೆ ತಪಾಸಣಾ ಕೇಂದ್ರದಲ್ಲಿ ಪರೀಕ್ಷೆ ಮಾಡಿ ಮಾಲಿನ್ಯಕಾರಕವಾಗಿಲ್ಲ ಎಂಬ ಪ್ರಮಾಣಪತ್ರವನ್ನು ಪಡೆದಿರಬೇಕು. ಪೊಲೀಸರು ವಾಹನ ತಪಾಸಣೆ ಮಾಡುವಾಗ ಈ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಪ್ರಮಾಣಪತ್ರ ಇಲ್ಲದಿದ್ದಲ್ಲಿ ₹ 1,000 ದಂಡ ಪಾವತಿಸಬೇಕಾಗುತ್ತದೆ.

‘ನಮ್ಮಲ್ಲಿ ಹೊಗೆ ತಪಾಸಣಾ ಕೇಂದ್ರ ಕೆಲವು ವರ್ಷಗಳಿಂದ ಇದೆ. ವೀಲ್‌ ಅಲೈನ್‌ಮೆಂಟ್‌ಗೆ ಬರುವ ಕಾರುಗಳ ಹೊಗೆ ತಪಾಸಣೆ ಮಾಡುತ್ತಿದ್ದೆವು. ಅದನ್ನು ಹೊರತು ಪಡಿಸಿದರೆ ದಿನಕ್ಕೆ ಒಂದು ಅಥವಾ ಎರಡು ಬೈಕ್‌ಗಳು ಬಂದರೆ ಅದೇ ಹೆಚ್ಚು ಎಂಬಂತಿತ್ತು. ಆದರೆ, ಎರಡು ದಿನಗಳಿಂದ ನೂರಾರು ಬೈಕ್‌ಗಳು ಬರುತ್ತಿವೆ’ ಎಂದು ಸಪ್ತಗಿರಿ ವೀಲ್‌ ಅಲೈನ್‌ಮೆಂಟ್‌ ಆ್ಯಂಡ್‌ ಟೈರ್‌ ಅಂಗಡಿ ಮಾಲೀಕ ಸಂತೋಷ್‌ ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂಜಿನ್‌ ಸರಿ ಇದ್ದರೆ ಮಾಲಿನ್ಯಕಾರಕ ಹೊಗೆ ಇರುವುದಿಲ್ಲ. ಆಗ ಹೊಗೆ ಪರೀಕ್ಷೆಯು ಒಂದು ನಿಮಿಷದಲ್ಲಿ ಮುಗಿಯುತ್ತದೆ. ಮಾಲಿನ್ಯಕಾರಕವಾಗಿದ್ದರೆ ಮಾತ್ರ ಪರೀಕ್ಷೆಗೆ ಎರಡು–ಮೂರು ನಿಮಿಷಗಳು ಬೇಕಾಗುತ್ತದೆ. ಇದು ಆನ್‌ಲೈನ್‌ ಮೂಲಕ ಆಗುವುದರಿಂದ ಸರ್ವರ್‌ ಬೇಕಾಗುತ್ತದೆ. ಈಗ ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಕಾರಣದಿಂದ ಎಲ್ಲ ಕಡೆ ಒಮ್ಮೆಲೆ ವಾಹನಗಳು ಅದರಲ್ಲಿಯೂ ದ್ವಿಚಕ್ರ ವಾಹನಗಳು ಹೊಗೆ ಪರೀಕ್ಷೆಗೆ ಬಂದಿರುವುದರಿಂದ ಸರ್ವರ್‌ ಸಮಸ್ಯೆ ಉಂಟಾಗಿದೆ’ ಎನ್ನುತ್ತಾರೆ ಅವರು.

‘ದಂಡ ಹೆಚ್ಚಿರುವುದರಿಂದ ಪಾರಾಗಲು ವಾಹನ ಹೊಂದಿರುವವರು ಹೊಗೆ ತಪಾಸಣೆಗೆ ಮುಂದಾಗಿದ್ದಾರೆ. ₹ 50, ₹ 100ರಲ್ಲಿ ಮುಗಿಯುವ ತಪಾಸಣೆಯನ್ನು ಮಾಡಿಸದೇ ಸುಮ್ಮನೆ ₹ 1,000 ದಂಡವನ್ನು ಏಕೆ ಕಟ್ಟಬೇಕು ಎಂದು ಅವರಿಗೂ ಗೊತ್ತಾಗಿದೆ. ಹೀಗಾಗಿ ಈಗ ತಪಾಸಣೆಗೆ ಮುಗಿಬಿದ್ದಿದ್ದಾರೆ. ಸ್ವಲ್ಪ ದಿನಗಳು ಕಳೆದರೆ ಸಮಯಕ್ಕೆ ಸರಿಯಾಗಿ ಎಲ್ಲ ರೀತಿಯ ದಾಖಲೆಗಳನ್ನು ಇಟ್ಟುಕೊಳ್ಳುವುದು ಅಭ್ಯಾಸವಾಗುತ್ತದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್‌.ಜೆ. ಬಣಕಾರ್‌ ಅಭಿಪ್ರಾಯಪಟ್ಟರು.

‘ದಂಡ ಹೆಚ್ಚು ಮಾಡಿರುವುದು ನಿಯಮ ಪಾಲನೆಗೆ ಒಳ್ಳೆಯದು. ಆದರೆ, ಒಮ್ಮೆಲೇ ಜಾರಿ ಮಾಡಿದ್ದರಿಂದ ಕಷ್ಟವಾಗಿದೆ. ಇಷ್ಟು ದಿನಗಳ ಒಳಗೆ ಹೊಗೆ ತಪಾಸಣೆ ಮಾಡಿ ಪ್ರಮಾಣಪತ್ರ ಪಡೆಯಬೇಕು ಎಂದು ಒಂದೆರಡು ವಾರ ಅವಕಾಶ ನೀಡಿದ್ದರೆ ಇಷ್ಟು ಒತ್ತಡ ಆಗುತ್ತಿರಲಿಲ್ಲ’ ಎನ್ನುತ್ತಾರೆ ಬೈಕ್‌ ಸವಾರ ನಿಟುವಳ್ಳಿಯ ಕಾಳಿಂಗರಾವ್‌.

ಅಧಿಕ ದಂಡ ವಿಧಿಸಲು ಆರಂಭಿಸಿರುವುದು ವಾಹನ ಚಾಲಕರಲ್ಲಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು