ದಾವಣಗೆರೆಯ ಬಿಐಇಟಿ ಕಾಲೇಜು ಬಳಿ ಗುಟ್ಕಾ ಹಾಗೂ ಸಿಗರೇಟ್ ವ್ಯಾಪಾರ ನಡೆಸಲು ಹಾಕಲಾಗಿರುವ ಗೂಡಂಗಡಿ –ಪ್ರಜಾವಾಣಿ ಚಿತ್ರ
‘ಅಡ್ಡೆ’ ಮೇಲೆ ಶಿಕ್ಷಕಿ ದಾಳಿ: ಹರಿದಾಡಿದ್ದ ವಿಡಿಯೊ
ಶಾಲೆಯ ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಸ್ಕೂಲ್ ಬ್ಯಾಗ್ ಸಮೇತ ಬಂದು ಇಂಥ ಅಡ್ಡೆಯೊಂದರಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದ ಸ್ಥಳಕ್ಕೆ ತೆರಳಿದ್ದ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳನ್ನೂ ಆ ಅಡ್ಡೆಯ ಮಾಲೀಕನನ್ನೂ ತರಾಟೆಗೆ ತೆಗೆದುಕೊಂಡಿದ್ದ ಘಟನೆಯ ವಿಡಿಯೊ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನಿತ್ಯವೂ ಶಾಲೆಗೆ ಬಂದು ಒಂದೆರಡು ತರಗತಿಗಳಿಗೆ ಕುಳಿತು ಅರ್ಧಕ್ಕೇ ಹೊರಟು ಹೋಗುತ್ತಿದ್ದ ಕೆಲವು ವಿದ್ಯಾರ್ಥಿಗಳ ಬಗ್ಗೆ ಶಂಕೆಗೊಂಡು ಅವರ ಚಲನವಲನದ ಮೇಲೆ ನಿಗಾ ಇರಿಸಿದ್ದ ಮುಖ್ಯಶಿಕ್ಷಕಿ ಒಂದುದಿನ ಅವರನ್ನು ಉಪಾಯದಿಂದ ಹಿಂಬಾಲಿಸಿ ‘ದಾಳಿ’ಯ ರೂಪದಲ್ಲೇ ಒಳನುಗ್ಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಬುದ್ದಿ ಹೇಳಿದ್ದ ಆ ವಿಡಿಯೊ ಸಾಕಲಷ್ಟು ಸಂಚಲನ ಉಂಟುಮಾಡಿತ್ತು. ‘ಆ ಘಟನೆ ನಡೆದ ನಂತರವೂ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಸಂಬಂಧಪಟ್ಟವರು ಆ ಘಟನೆಯನ್ನು ಗಂಭೀರವಾಗಿ ಪರಿಗಣಿಸದ್ದರಿಂದ ಅಂಥ ಅಡ್ಡೆಗಳು ಯಥಾವತ್ ಮುಂದುವರಿದಿದ್ದು ಹದಿಹರೆಯದ ಹುಡುಗರು ಅಲ್ಲಿಗೆ ತೆರಳುವುದು ಮುಂದುವರಿದಿದೆ’ ಎಂದು ಪ್ರೌಢಶಾಲೆಯ ಶಿಕ್ಷಕಿಯೊಬ್ಬರು ನೊಂದು ನುಡಿದರು.