ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ನೇಯ ಪದವೀಧರ ವಿಧಾನ ಪರಿಷತ್‌ಗೆ ಮತದಾನ 28ಕ್ಕೆ

ಮೂರು ತಾಲ್ಲೂಕಿನ 29 ಬೂತ್‌ಗಳು ಸಜ್ಜು l ಮತಪಟ್ಟಿಯಲ್ಲಿ 20,962 ಪದವೀಧರ ಮತದಾರರು
Last Updated 28 ಅಕ್ಟೋಬರ್ 2020, 2:46 IST
ಅಕ್ಷರ ಗಾತ್ರ

ದಾವಣಗೆರೆ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಅ. 2ರಂದು ನಡೆಯಲಿದೆ. ದಾವಣಗೆರೆ, ಜಗಳೂರು ಮತ್ತು ಹರಿಹರ ತಾಲ್ಲೂಕುಗಳ 29 ಬೂತ್‌ಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. 15 ಮಂದಿ ಕಣದಲ್ಲಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ತಮುಕೂರು, ಚಿತ್ರದುರ್ಗ ಜಿಲ್ಲೆಗಳು ಮತ್ತು ದಾವಣಗೆರೆಯ ಮೂರು ತಾಲ್ಲೂಕುಗಳು ಇದರ ವ್ಯಾಪ್ತಿಗೆ ಬರುತ್ತವೆ. ಇಲ್ಲಿ 20,962 ಮತದಾರರಿದ್ದಾರೆ. ಅದರಲ್ಲಿ ಅರ್ಧಕ್ಕಿಂತ ಅಧಿಕ ಅಂದರೆ 12,858 ಮತದಾರರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಇದ್ದಾರೆ.

ನಾಲ್ಕು ಮಸ್ಟರಿಂಗ್ ಕೇಂದ್ರ: ದಾವಣಗೆರೆ ಮಹಾನಗರ ಪಾಲಿಕೆ, ದಾವಣಗೆರೆ ತಾಲ್ಲೂಕು ಕಚೇರಿ, ಹರಿಹರ ತಾಲ್ಲೂಕು ಕಚೇರಿ ಹಾಗೂ ಜಗಳೂರು ತಾಲ್ಲೂಕು ಕಚೇರಿಗಳನ್ನು ಜಿಲ್ಲೆಯಲ್ಲಿ ಮಸ್ಟರಿಂಗ್‌ ಕೇಂದ್ರಗಳನ್ನಾಗಿ ಮಾಡಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 17 ಬೂತ್‌ಗಳು ಬರಲಿದ್ದು, ಈ 17 ಬೂತ್‌ಗಳಿಗೆ ಪಾಲಿಕೆ ಕಚೇರಿ ಆವರಣದ ಮಸ್ಟರಿಂಗ್‌ ಕೇಂದ್ರದಿಂದ ಬ್ಯಾಲೆಟ್‌ ಬಾಕ್ಸ್‌ಗಳನ್ನು ಮಂಗಳವಾರ ಬೂತ್‌ ಅಧಿಕಾರಿಗಳು ಒಯ್ದರು.

ದಾವಣಗೆರೆ ಗ್ರಾಮಾಂತರದಲ್ಲಿ ಆನಗೋಡು, ಅಣಜಿ, ಮಾಯಕೊಂಡ ಮತ್ತು ಲೋಕಿಕೆರೆ ಬೂತ್‌ಗಳಿವೆ. ಇಲ್ಲಿಗೆ ತಾಲ್ಲೂಕು ಕಚೇರಿಯಿಂದ ಬ್ಯಾಲೆಟ್‌ ಬಾಕ್ಸ್‌ಗಳನ್ನು ನೀಡಲಾಯಿತು.

ಹರಿಹರದಲ್ಲಿ ಮೂರು, ಮಲೆಬೆನ್ನೂರಿನಲ್ಲಿ ಮೂರು ಹೀಗೆ ಒಟ್ಟು ಆರು ಬೂತ್‌ಗಳು ಹರಿಹರ ತಾಲ್ಲೂಕಿನಲ್ಲಿವೆ. ಜಗಳೂರಿನಲ್ಲಿ ಎರಡು, ಸೊಕ್ಕೆ ಮತ್ತು ಬಿಳಿಚೋಡಿನಲ್ಲಿ ಒಂದು ಹೀಗೆ ನಾಲ್ಕು ಬೂತ್‌ಗಳು ಜಗಳೂರು ತಾಲ್ಲೂಕಿನಲ್ಲಿವೆ.

ನವೆಂಬರ್‌ 2ರಂದು ಮತದಾನ ಎಣಿಕೆ ಕಾರ್ಯ ನಡೆಯಲಿದೆ. ನವೆಂಬರ್‌ ಐದಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

ಜಿಲ್ಲಾಧಿಕಾರಿ ಭೇಟಿ: ಮಹಾನಗರಪಾಲಿಕೆ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗೆ ಸಿದ್ಧತೆಯ ಸೂಚನೆಗಳನ್ನು ನೀಡಿದರು.

ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ತಹಶೀಲ್ದಾರ್‌ ಗಿರೀಶ್‌ ಅವರೂ ಇದ್ದರು.

ಕಣದಲ್ಲಿ ಇರುವವರು

ಚಿದಾನಂದ ಎಂ. ಗೌಡ (ಬಿಜೆಪಿ), ಆರ್‌. ಚೌಡರೆಡ್ಡಿ ತೂಪಲ್ಲಿ (ಜೆಡಿಎಸ್‌), ರಮೇಶ್‌ ಬಾಬು (ಕಾಂಗ್ರೆಸ್‌) ಈ ಮೂವರು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ.

ಜಿ.ಟಿ. ಪಟೇಲ್‌ (ಸರ್ವ ಜನತಾ ಪಾರ್ಟಿ), ಟಿ. ಶ್ರೀನಿವಾಸ (ಕರ್ನಾಟಕ ರಾಷ್ಟ್ರ ಸಮಿತಿ) ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ.

ಕರಬಸಪ್ಪ ಎಂ.ಪಿ., ಕುಮಾರಸ್ವಾಮಿ ಬಿ., ದಾಸ್‌ ಪಿ.ಆರ್‌., ಡಾ. ಹಾಲನೂರು ಎಸ್‌. ಲೇಪಾಕ್ಷ್‌, ಜಿ. ವೆಂಕಟಾಚಲಪತಿ, ಶಿವರಾಮಯ್ಯ, ಡಿ.ಟಿ. ಶ್ರೀನಿವಾಸ್‌, ಎಸ್‌. ಸತೀಶ್‌ ಗೌಡ, ಡಾ.ಕೆ.ಎಂ. ಸುರೇಶ್‌,ಎಚ್‌. ಹಾಲೇಶಪ್ಪ ಇಷ್ಟು ಮಂದಿ ‍ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT