ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟ: ಏಪ್ರಿಲ್ 13ರಂದು ಜಗಳೂರು ಬಂದ್

ಸಮಗ್ರ ನೀರಾವರಿ ಹಕ್ಕೊತ್ತಾಯ ಸಮಾವೇಶ; ಏಪ್ರಿಲ್ 13ರಂದು ಜಗಳೂರು ಬಂದ್
Published 28 ಮಾರ್ಚ್ 2024, 15:14 IST
Last Updated 28 ಮಾರ್ಚ್ 2024, 15:14 IST
ಅಕ್ಷರ ಗಾತ್ರ

ಜಗಳೂರು: ‘ಯಾವುದೇ ಸಂಘಟನೆಗಳು ನೀರಿಗಾಗಿ ಹೋರಾಟ ಕೈಗೊಳ್ಳುವ ಮುನ್ನ ಪ್ರಕೃತಿಯನ್ನು ಸಂರಕ್ಷಿಸಿ, ಸಮೃದ್ಧ ಪರಿಸರ ನಿರ್ಮಾಣ ಮಾಡಲು ಮುಂದಾಗಬೇಕು’ ಎಂದು ನೀಲಗುಂದ ಗುಡ್ಡದ ಜಂಗಮ ಪೀಠದ ಚನ್ನಬಸವ ಶಿವಯೋಗಿಗಳು ಹೇಳಿದರು.

ತಾಲ್ಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ದಾಸೋಹ ಸಂಸ್ಕೃತಿ ಉತ್ಸವ ನಿಮಿತ್ತ ಬುಧವಾರ ಸಮಗ್ರ ನೀರಾವರಿ ಹಕ್ಕೊತ್ತಾಯ ಸಮಾವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸ್ವಾಮೀಜಿಗಳಾದ ನಾವು ಸಹ ಜನಪರವಾಗಿ ಇರಬೇಕು. ಆಗ ಮಾತ್ರ ಹೋರಾಟಗಳಿಗೆ ಮೆರುಗು ನೀಡಿದಂತೆ ಆಗುತ್ತದೆ. ಯಾರೇ ಆಗಲಿ ಸಮಾಜಸೇವೆಯಲ್ಲಿ ತೊಡಗಿದಾಗ ನಿಂದನೆ, ಅಪಮಾನಗಳು ಸಹಜ. ಅವುಗಳಿಗೆ ಹಿಂಜರಿಯದೆ ಮುನ್ನುಗ್ಗಿದಾಗ ಮಾತ್ರ ಜಯ ಕಾಣಲು ಸಾಧ್ಯ. ಜನಸೇವೆ ಮಾಡುವವರನ್ನು ಎಚ್ಚರಿಕೆಯಿಂದ ಮತಪೆಟ್ಟಿಗೆಯ ಮೂಲಕ ಆಯ್ಕೆ ಮಾಡಿಕೊಳ್ಳಿ’ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

‘ದಾಸೋಹ ಸಂಸ್ಕೃತಿ ಉತ್ಸವ ಇನ್ನು ಮುಂದೆ ಪ್ರತಿ ವರ್ಷವೂ ನಡೆಯಲಿ. ಇದರಿಂದ ಅನೇಕ ಧಾರ್ಮಿಕ ಹಾಗೂ ಪ್ರಗತಿಪರ ವಿಚಾರಗಳು ಜನರಿಗೂ ತಲುಪುತ್ತವೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿ ಕ್ಷೇತ್ರದಲ್ಲಿ ಅನುದಾನವನ್ನು ತಂದಿದ್ದೇನೆ. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುವುದು ಬೇಸರ ಸಂಗತಿ. ಇತ್ತೀಚೆಗೆ ಹೋರಾಟ ಕಡಿಮೆಯಾಗುತ್ತಿದೆ. ಹೋರಾಟದಲ್ಲಿ ನಾನು ಸಹ ನಿಮ್ಮೊಂದಿಗೆ ಇರುತ್ತೇನೆ’ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು.

‘ಸಮಗ್ರ ನೀರಾವರಿಗಾಗಿ ಏಪ್ರಿಲ್ 13ರಂದು ಜಗಳೂರು ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲಾಗುವುದು. ಬಂದ್ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಇದು ಮೊದಲ ಹೆಜ್ಜೆಯಾಗಿದೆ’ ಎಂದು ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಹೇಳಿದರು.

ಉಪನ್ಯಾಸಕ ನಾಗಲಿಂಗಪ್ಪ, ಮುಸ್ಟೂರು ದಾಸೋಹ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಾನಾಮಡುಗು ಐಮಡಿ ಶರಣಾರ್ಯರು, ಚಿತ್ರದುರ್ಗ ಭದ್ರಾ ಮೇಲ್ದಂಡೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಎಂ.ಲಿಂಗಾರೆಡ್ಡಿ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಅರುಣ್ ಕುಮಾರ್ ಕುರುಡಿ, ದಲಿತ ಮುಖಂಡ ಬಿ.ಎಂ.ಹನುಮಂತಪ್ಪ, ದಾವಣಗೆರೆ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್, ಅವರಗೆರೆ ರುದ್ರಮುನಿ, ಮುಖಂಡ ಪಾಲೇನಹಳ್ಳಿ ಪ್ರಸನ್ನ ಕುಮಾರ್, ಆರ್. ಓಬಳೇಶ್ ಮಾತನಾಡಿದರು.

ರೈತ ಮುಖಂಡ ಬಸವರಾಜಪ್ಪ, ತಿಮ್ಮಾರೆಡ್ಡಿ, ಹನುಮಂತಾಪುರ ರಾಜಪ್ಪ, ಸಾಹಿತಿ ಸಂಗೇನಹಳ್ಳಿ ಅಶೋಕ್ ಕುಮಾರ್, ಸಿದ್ದಿಹಳ್ಳಿ ಪ್ರಕಾಶ್ ರೆಡ್ಡಿ, ವೀರಸ್ವಾಮಿ, ಡಿಎಸ್ಎಸ್ ತಾಲ್ಲೂಕು ಸಂಚಾಲಕ ಮಲೆಮಾಚಿಕೆರೆ ಸತೀಶ್, ಕರುನಾಡ ವೇದಿಕೆ ಅಧ್ಯಕ್ಷ ಮಹಾಲಿಂಗಪ್ಪ ಜೆ, ಎಚ್.ಎಂ.ಹೊಳೆ, ಎಸ್ಎಫ್ಐ ಜಿಲ್ಲಾ ಸಂಚಾಲಕ ಬಿ.ಎಂ.ಅನಂತರಾಜ್, ದಲಿತ ಮುಖಂಡ ಓಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT