ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳನೀರು, ತಂಪು ಪಾನೀಯ, ಹಣ್ಣಿಗೆ ಬೇಡಿಕೆ

ಜಿಲ್ಲೆಯಲ್ಲಿ ಹೆಚ್ಚಿದ ಬಿಸಿಲ ಧಗೆ; ಬಾಯಾರಿಕೆ ನೀಗಿಸಿಕೊಳ್ಳಲು ಜನರ ಮೊರೆ
Last Updated 21 ಏಪ್ರಿಲ್ 2023, 9:00 IST
ಅಕ್ಷರ ಗಾತ್ರ

ಹರಿಹರ: ಬೇಸಿಗೆಯ ಬಿಸಿಲ ಧಗೆ ಹೆಚ್ಚಿದ್ದು, ಜನರು ತಂಪು ಪಾನೀಯಗಳಾದ ಎಳನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್, ಕಲ್ಲಂಗಡಿ, ಕರಬೂಜಗಳಂತಹ ನೀರಿನ ಅಂಶ ಹೆಚ್ಚು ಇರುವ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.

ತಂಪು ಪಾನೀಯ, ಹಣ್ಣುಗಳಿಗಿಂತ ಎಳನೀರಿಗೆ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ದಿನಕ್ಕೆ ಮುನ್ನೂರು ಎಳನೀರು ಮಾರುವವರು ಆರು ನೂರು, ಐನೂರು ಮಾರಾಟ ಮಾಡುತ್ತಿದ್ದವರು ಸಾವಿರದಷ್ಟು ಎಳನೀರು ಮಾರಾಟ
ಮಾಡುತ್ತಿದ್ದಾರೆ.

ಕೆಲವು ಅಂಗಡಿಗಳಿಗೆ ಎಳನೀರು ಸೂಕ್ತ ಸಮಯದಲ್ಲಿ ಸರಬರಾಜು ಆಗದ ಕಾರಣ ವ್ಯಾಪಾರವನ್ನು ಆ ದಿನ ಮೊಟಕುಗೊಳಿಸುವ ಪರಿಸ್ಥಿತಿ ಒದಗಿದೆ. ಇದಕ್ಕೆ ತೆಂಗಿನಮರ ಹತ್ತಿ ಕೊಯ್ಲು ಮಾಡುವವರ ಕೊರತೆ ಪ್ರಮುಖ ಕಾರಣವಾಗಿದೆ.

ಎಳನೀರು ನಿರ್ಜಲೀಕರಣದ ಅಪಾಯದಿಂದ ರಕ್ಷಣೆ ನೀಡುತ್ತದೆ. ಅಲ್ಲದೇ ಇದರಲ್ಲಿ ಯಾವುದೇ ರಸಾಯನಿಕ ಮಿಶ್ರಣಗಳು ಇರುವುದಿಲ್ಲ. ಬೇಸಿಗೆಗೆ ಹೇಳಿ ಮಾಡಿಸಿದ ಪೇಯವಿದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಜಿ.ಪಿ. ರೇಖಾ.

ಹೊಟ್ಟೆ ನೋವಿಗೆ ರಾಮಬಾಣ: ಊಟದ ಬದಲು ಎಳನೀರನ್ನು ಸೇವಿಸಿದರೆ ಹೊಟ್ಟೆಯಲ್ಲಿನ ನಂಜು, ಹುಣ್ಣು ಅಥವಾ ಅಜೀರ್ಣತೆ ಬಾಧೆಗೆ ಮುಕ್ತಿ ಸಿಗುತ್ತದೆ. ವಿಟಮಿನ್, ಮಿನರಲ್
ಮತ್ತು ಎಲೆಕ್ಟ್ರೋಲೈಟ್ಸ್ ಹೆಚ್ಚಾಗಿರುವುದರಿಂದ ಬಿರು ಬಿಸಿಲಿನಿಂದ ಬೆವರಿನ ಮೂಲಕ ಉಂಟಾಗುವ ದಣಿವನ್ನು ನಿವಾರಿಸಿ ಜೀವಕೋಶಗಳಿಗೆ ಹೊಸತನ ನೀಡುತ್ತದೆ ಎಂದು ಅವರು ವಿವರಿಸಿದರು.

ದೇಹದ ಎಲ್ಲಾ ಆಂತರಿಕ ಅಂಗಾಂಗಗಳಿಗೆ ರಕ್ತ ಪರಿಚಲನೆಯನ್ನು ವೃದ್ಧಿಸುತ್ತದೆ. ಪೊಟ್ಯಾಶಿಯಂ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಕಿಡ್ನಿಯ ಆರೋಗ್ಯ ಕಾಪಾಡುತ್ತದೆ. ಫ್ಯಾಟ್ ಇಲ್ಲದಿರುವುದರಿಂದ ಹಾಗೂ ಕಡಿಮೆ ಕ್ಯಾಲೊರಿ ಇರುವುದರಿಂದ ಹೆಚ್ಚುವರಿ ತೂಕ ಇಳಿಸಲೂ ಸಹಕಾರಿ ಎಂದು ಅವರು ಮಾಹಿತಿ ನೀಡಿದರು.

ಸನ್‌ಸ್ಟ್ರೋಕ್ ಅಪಾಯ: ಎಚ್ಚರವಿರಲಿ

ಬಿಸಿಲು ಈ ಬಾರಿ ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದೆ. ಬೆಳಿಗ್ಗೆ 11ರ ನಂತರ ಮಧ್ಯಾಹ್ನ 3ರವರೆಗೆ ಹೊರಾಂಗಣದಲ್ಲಿ ಓಡಾಡುವುದನ್ನು ಆದಷ್ಟು ತಪ್ಪಿಸಬೇಕು. ಅನಿವಾರ್ಯ ಇದ್ದವರು ಕೊಡೆ, ಟೋಪಿ ಬಳಸಬೇಕು. ನೀರು, ಮಜ್ಜಿಗೆ, ಎಳನೀರು, ಹಣ್ಣು ಹೆಚ್ಚಾಗಿ ಸೇವಿಸಬೇಕು. ಮಸಾಲೆಯುಕ್ತ, ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು. ಸೊಪ್ಪು, ತರಕಾರಿ, ಹಣ್ಣು, ಹಂಪಲು ನಮ್ಮ ಊಟದ ಮೆನುವಿನಲ್ಲಿ ಇರಬೇಕು. ನಿರ್ಲಕ್ಷ್ಯ ಮಾಡಿದರೆ ಸನ್‌ಸ್ಟ್ರೋಕ್ ಆಗುವ ಅಪಾಯ ಇರುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್. ಹನುಮನಾಯ್ಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT