ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವನ ಕೊಲೆಗೆ ಸುಪಾರಿ: ಸೊಸೆ ಸೇರಿ ಮೂವರ ಬಂಧನ

ಆಸ್ತಿ ವಿಚಾರಕ್ಕೆ ಕೊಲೆ
Last Updated 17 ಏಪ್ರಿಲ್ 2021, 16:36 IST
ಅಕ್ಷರ ಗಾತ್ರ

ದಾವಣಗೆರೆ: ಚನ್ನಗಿರಿ ಠಾಣಾ ವ್ಯಾಪ್ತಿಯ ಶ್ರೀನಿವಾಸಪುರದಲ್ಲಿ ಆಸ್ತಿಯ ಸಲುವಾಗಿ ಸೊಸೆಯೇ ಸುಪಾರಿ ನೀಡಿ ಮಾವನ ಕೊಲೆ ಮಾಡಿಸಿದ್ದು, ಸೊಸೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ನಿವೃತ್ತ ಶಿಕ್ಷಕ ಚಿಕ್ಯಾನಾಯ್ಕ ಕೊಲೆಯಾದವರು. ಇವರ ಸೊಸೆ ವನಜಾಕ್ಷಿ, ಈಕೆಯ ಪ್ರಿಯಕರ ಮೇಸ್ತ್ರಿ ಹನುಮಂತ ಹಾಗೂ ನಾಗರಾಜ ಬಂಧಿತರು.

ಚಿಕ್ಕನಾಯ್ಕ ಅವರು ಪತ್ನಿ, ಮಕ್ಕಳು ಹಾಗೂ ಸೊಸೆಯೊಂದಿಗೆ ತೋಟ, ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದೊಡ್ಡ ಮಗ ಮನೋಜ್‌ಗೆ ಮನೆ ಕಟ್ಟಿಸಿಕೊಟ್ಟಿದ್ದು, ಎರಡನೇ ಮಗ ಸುರೇಶ್ ನಾಯ್ಕನಿಗೆ ಮನೆ ಕಟ್ಟಿಸಿಕೊಡಬೇಕು ಎಂದು ಚಿಕ್ಯಾನಾಯ್ಕ ತೀರ್ಮಾನಿಸಿದ್ದರು. ಮನೆ ಕಟ್ಟಿಸಿದರೆ ಯಾವುದೇ ಆಸ್ತಿ ಸಿಗುವುದಿಲ್ಲ ಎಂದು ವನಜಾಕ್ಷಿ ಕೊಲೆ ಮಾಡುವ ತೀರ್ಮಾನಕ್ಕೆ ಬಂದಳು.

ಮೇಸ್ತ್ರಿ ಹನುಮಂತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವನಜಾಕ್ಷಿ ಮಾವನನ್ನು ಕೊಲೆ ಮಾಡಿದರೆ ₹ 6 ಲಕ್ಷ ಕೊಡುವುದಾಗಿ ಹನುಮಂತನಿಗೆ ಸುಪಾರಿ ನೀಡಿದ್ದು, ₹ 1 ಲಕ್ಷವನ್ನು ಮುಂಗಡವಾಗಿ ನೀಡಿದ್ದಳು. ಹನುಮಂತ ತನ್ನ ಜೊತೆ ಕೆಲಸ ಮಾಡುತ್ತಿದ್ದ ನಾಗರಾಜನ ಸಹಾಯ ಪಡೆದು ಏಪ್ರಿಲ್ 4ರಂದು ಸೀರೆ ತುಣುಕಿನಿಂದ ಚಿಕ್ಯಾನಾಯ್ಕ ಅವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸಿದ್ದರು.

ಬಟ್ಟೆಯಿಂದ ಕುತ್ತಿಗೆಗೆ ಬಿಗಿದು ಸಾಯಿಸಿರುವುದು ಮೃತರ ಶವ ಪರೀಕ್ಷೆ ವೇಳೆ ದೃಢಪಟ್ಟಿದ್ದು, ಇದರ ಬೆನ್ನತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿಜ ಬಾಯ್ಬಿಟ್ಟಿದ್ದಾರೆ.

ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಕೆ.ಎಂ. ಸಂತೋಷ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪಿಎಸ್‌ಐ ಜಗದೀಶ್ (ಕಾನೂನು ಮತ್ತು ಸುವ್ಯವಸ್ಥೆ) ರೂಪ್ಲಿಬಾಯಿ (ಅಪರಾಧ), ಹೆಡ್‌ಕಾನ್‌ಸ್ಟೆಬಲ್ ರುದ್ರೇಶ್‌, ಮೊಹಮ್ಮದ್ ಖಾನ್, ಧರ್ಮಪ್ಪ ಎಸ್, ಶ್ರೀನಿವಾಸಮೂರ್ತಿ, ಪರಶುರಾಮ್, ಅರುಣ್‌ಕುಮಾರ್ ಹಾಗೂ ಜೀಪ್ ಚಾಲಕ ರೇವಣಸಿದ್ದಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಕರಣ ಭೇದಿಸಿದ ತಂಡಕ್ಕೆ ಎಸ್‌ಪಿ ಹನುಮಂತರಾಯ, ಎಎಸ್‌ಪಿ ಎಂ.ರಾಜೀವ್ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT