ಎಂ.ಎಸ್‌.ಬಿ. ಕಾಲೇಜಿನಿಂದ ಮತದಾನ ಜಾಗೃತಿ

ಬುಧವಾರ, ಮಾರ್ಚ್ 20, 2019
31 °C

ಎಂ.ಎಸ್‌.ಬಿ. ಕಾಲೇಜಿನಿಂದ ಮತದಾನ ಜಾಗೃತಿ

Published:
Updated:
Prajavani

ದಾವಣಗೆರೆ: 17ನೇ ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಎಂ.ಎಸ್‌.ಬಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಜಾಥಾ ನಡೆಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ–1 ಹಾಗೂ 2ರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಪ್ರಾಂಶುಪಾಲ ಡಾ. ಕೆ. ಹನುಮಂತಪ್ಪ ಹಸಿರು ನಿಶಾನೆ ತೋರಿಸಿದರು.

‘ನಿಮ್ಮ ನಡೆ ಮತಗಟ್ಟೆ ಕಡೆ’, ‘ನಿಮ್ಮ ಮತ ನಿಮ್ಮ ಧ್ವನಿ’, ‘ನಿರ್ಭಯದಿಂದ ಮಾಡುವೆವು ಮತದಾನ, ಇಮ್ಮಡಿ ಮಾಡುವೆವು ದೇಶದ ಸಮ್ಮಾನ’, ‘ನಮ್ಮ ಮತ ನಮ್ಮ ಹಕ್ಕು’, ‘ಮದ್ಯಪಾನ ಬಿಡಿ, ಮತದಾನ ಮಾಡಿ’, ‘ನಮ್ಮ ಮತ ಅಮೂಲ್ಯ, ಕಟ್ಟಲಾರೆವು ಇದರ ಮೌಲ್ಯ’ ಎಂಬ ಘೋಷಣೆಗಳಿರುವ ನಾಮಫಲಕಗಳನ್ನು ಹಿಡಿದು ಸಾಗಿದ ವಿದ್ಯಾರ್ಥಿಗಳು ಹಲವು ಘೋಷಣೆಗಳನ್ನು ಕೂಗುತ್ತ ಮತದಾನದ ಮಹತ್ವವನ್ನು ಸಾರಿದರು.

ಕಾಲೇಜಿನಿಂದ ಹೊರಟ ಜಾಥಾ, ಎ.ವಿ.ಕೆ. ಕಾಲೇಜು ರಸ್ತೆ, ವಿದ್ಯಾರ್ಥಿ ಭವನ, ಅಂಬೇಡ್ಕರ್‌ ಸರ್ಕಲ್‌, ಜಯದೇವ ವೃತ್ತ, ಪಿ.ಬಿ. ರಸ್ತೆ ಮೂಲಕ ಮರಳಿ ಕಾಲೇಜಿಗೆ ಬಂತು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ಎಸ್‌. ಪರಮೇಶಿ, ‘ಯುವ ಮತದಾರರು ಮತದಾನದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಹಣ–ಹೆಂಡದ ಆಮಿಷಕ್ಕೆ ಒಳಗಾಗಿ ಜನ ಮತ ಚಲಾಯಿಸುತ್ತಿದ್ದಾರೆ. ಹೀಗಾಗಿ ಮತದಾನ ಮಹತ್ವದ ಕುರಿತು ಜಾಗತಿ ಮೂಡಿಸಲು ಜಾಥಾ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳು ತಮ್ಮ ಬೂತ್‌ ಮಟ್ಟದಲ್ಲೂ ಮತದಾನದ ಕುರಿತು ಜಾಗೃತಿ ಮೂಡಿಸಲಿದ್ದಾರೆ’ ಎಂದು ಹೇಳಿದರು.

ಕಾಲೇಜಿನ ಬಿ.ಎ. ತೃತೀಯ ವರ್ಷದ ವಿದ್ಯಾರ್ಥಿನಿ ಜಿ.ವಿ. ಅಕ್ಷತಾ, ‘ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರತಿ ಬಾರಿಯೂ ಚುನಾವಣೆಯಲ್ಲಿ ಶೇ 70ರ ಸುತ್ತಮುತ್ತ ಮಾತ್ರ ಮತದಾನವಾಗುತ್ತಿದೆ. ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಯಾವ ಅಭ್ಯರ್ಥಿಯೂ ಯೋಗ್ಯವಾಗಿಲ್ಲ ಎನಿಸಿದರೆ ‘ನೋಟಾ’ವನ್ನು ಆಯ್ಕೆ ಮಾಡಿಕೊಳ್ಳಬೇಕು. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬನೂ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಟಿ.ಆರ್‌. ರಂಗಸ್ವಾಮಿ, ಉಪನ್ಯಾಸಕರಾದ ಆರ್‌. ರಾಘವೇಂದ್ರ, ಎಸ್‌.ಎಚ್‌. ಶಿವಕುಮಾರ್‌, ಕುಮಾರಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !