ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಾಹುತಿ ದಾಳಿ: ಉಗ್ರರ ಬೆದರಿಕೆ

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಶ್ರೀನಗರ : ಹಿಜ್ಬುಲ್ ಮುಜಾಹಿದ್ದೀನ್‌ ಸಂಘಟನೆಯ 13 ಮಂದಿ ಉಗ್ರರು ಮತ್ತು ನಾಲ್ವರು ನಾಗರಿಕರ ಹತ್ಯೆಗೆ ಪ್ರತೀಕಾರಕಾರವಾಗಿ ಭದ್ರತಾಪಡೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಪಾಕಿಸ್ತಾನದ ಉಗ್ರ ಸಂಘಟನೆ ಜೈಷೆ ಮೊಹಮ್ಮದ್‌ ಸೋಮವಾರ ಹೇಳಿದೆ.

‘ಕಾಶ್ಮೀರಿ ಜನರ ಪ್ರತಿ ರಕ್ತದ ಹನಿಗೂ ಪ್ರತೀಕಾರ ತೀರಿಸುತ್ತೇವೆ. ಈ ಜಿಹಾದ್‌ ಮುಂದುವರಿಯಲಿದೆ’ ಎಂದು  ಉಗ್ರ ಸಂಘಟನೆಯ ವಕ್ತಾರರು ಹೇಳಿದ್ದನ್ನು ಉಲ್ಲೇಖಿಸಿ ಸ್ಥಳೀಯ ಸುದ್ದಿ ಸಂಸ್ಥೆ ಜಿಎನ್‌ಎಸ್‌ ವರದಿ ಮಾಡಿದೆ.

‘ಹಿಜ್ಬುಲ್ ಮುಜಾಹಿದ್ದೀನ್‌ ಒಂಟಿ ಎಂದು ಭಾವಿಸಬಾರದು. ಜೈಷ್‌ ಸಂಘಟನೆ ಅವರೊಂದಿಗೆ ಇದೆ. ನಾವು ಜೊತೆಯಾಗಿ ಭಾರತೀಯರ ದಬ್ಬಾಳಿಕೆಗೆ ಸೇಡು ತೀರಿಸುವೆವು’ ಎಂದು ಅವರು ಎಚ್ಚರಿಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಜೈಷ್‌ ಸಂಘಟನೆಯ ಉಪಸ್ಥಿತಿ ಕಡಿಮೆಯಾಗಿದ್ದರೂ, 2017 ರಲ್ಲಿ ಸೇನೆ ಸೇರಿದಂತೆ ಅನೇಕ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದೆ. ಸಂಸತ್‌ ಮೇಲಿನ ದಾಳಿಯ ಅಪರಾಧಿ ಅಫ್ಜಲ್‌ಗುರು ಮರಣದಂಡನೆಯನ್ನು ನೆಪ ಮಾಡಿಕೊಂಡು ಮತ್ತೆ ಕಾಶ್ಮೀರದೊಂದಿಗೆ ಸಂಪರ್ಕ ಸಾಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೈಷ್‌, ಲಷ್ಕರ್‌, ಹಿಜ್ಬುಲ್ ಸಂಘಟನೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಕಾಶ್ಮೀರದಲ್ಲಿ ಉಗ್ರಗಾಮಿತ್ವವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಪರಸ್ಪರ ಸಂಪತ್ತನ್ನು ಹಂಚಿಕೊಳ್ಳುತ್ತಿರುವ ಬಗ್ಗೆ ಪುರಾವೆ ಲಭಿಸಿದೆ ಎಂದು ಅವರು ಹೇಳಿದ್ದಾರೆ.

‘ಅಮಾನವೀಯ ಕ್ರೂರ ದಾಳಿ’
ಇಸ್ಲಾಮಾಬಾದ್:
ಭಾರತದ ಸೇನೆಯು ನಾಗರಿಕರ ಮೇಲೆ ಕ್ರೂರ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಪ್ರಧಾನಿ ಶಾಹಿದ್ ಅಬ್ಬಾಸಿ ಆರೋಪ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಭಾರತದ ಸೇನೆ 13ಉಗ್ರರನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಭಾನುವಾರ ರಾತ್ರಿ ಅಬ್ಬಾಸಿ ಈ ರೀತಿ ಆರೋಪಿಸಿದ್ದಾರೆ. ‘ಹತ್ಯೆಯನ್ನು ವಿರೋಧಿಸುವ ನಾಗರಿಕರ ಮೇಲೆ ಭಾರತದ ಸೇನೆಯು ಪೆಲೆಟ್ ಗನ್‌ಗಳನ್ನು ಅಮಾನವೀಯವಾಗಿ ಬಳಕೆ ಮಾಡಿದೆ’ ಎಂದಿದ್ದಾರೆ.

‘ನಂಬಿಕೆಯ ತಳಹದಿ ನಾಶ’
ಬೀಜಿಂಗ್ ವರದಿ:
ಗಡಿಯಲ್ಲಿ ಭಾರತ ಪ್ರಚೋದನಾತ್ಮಕವಾಗಿ ನಡೆದುಕೊಳ್ಳುವುದರಿಂದ ಉಭಯ ರಾಷ್ಟ್ರಗಳ ನಂಬಿಕೆಯ ತಳಹದಿಯೇ ನಾಶವಾಗುತ್ತದೆ ಮತ್ತು ದ್ವಿಪಕ್ಷೀಯ ಮಾತುಕತೆ ಕಡೆಗಣನೆಗೆ ಒಳಗಾಗುತ್ತಿದೆ ಎಂದು ಚೀನಾ ವಿಶ್ಲೇಷಕರು ಹೇಳಿದ್ದಾರೆ.

‘ಗಡಿ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ ಎಂಬುದೇ ಭಾರತದ ನಂಬಿಕೆ. ಅದಕ್ಕಾಗಿಯೇ ಗಡಿಯಲ್ಲಿ ನಿರಂತರವಾಗಿ ಸೇನೆ ನಿಯೋಜನೆ ಮಾಡುತ್ತಿದೆ’ ಎಂದು ಶಾಂಘೈ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ಏಷ್ಯಾ–ಪೆಸಿಫಿಕ್ ಸ್ಟಡೀಸ್ ಕೇಂದ್ರದ ನಿರ್ದೇಶಕ ಝಾವೊ ಗೆಂಚೆಂಗ್ ಹೇಳಿದ್ದಾಗಿ ‘ಗ್ಲೋಬಲ್ ಟೈಮ್ಸ್’ ಭಾನುವಾರ ವರದಿ ಮಾಡಿದೆ.

‘ರಾಜತಾಂತ್ರಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಿನಿಮಯವೂ ಸೇರಿದಂತೆ ಎಲ್ಲಾ ಕ್ಷೇತ್ರಗಳ ಬಾಂಧವ್ಯದ ಮೇಲೂ ಭಾರತದ ನಡೆಯು ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT