ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಮುಗಿದರೂ ಹಳಿಗೆ ಬಾರದ ಬದುಕು

ಟ್ಯಾಕ್ಸಿ, ಆಟೊ ಚಾಲಕರ ಬಾಳಲ್ಲಿ ಮೂಡದ ಆಶಾಕಿರಣ..
Last Updated 4 ಜನವರಿ 2021, 2:36 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊರೊನಾ ಕಾರಣ ಬದುಕೇ ಲಾಕ್‌ಡೌನ್ ಆಗಿತ್ತು. ಜೀವನ ನಿರ್ವಹಣೆ ಮಾಡಲಾಗದೆ, ಮಕ್ಕಳಿಗೆ ಹಾಲು ತರಲೂ ಹಣವಿಲ್ಲದೆ ಪರದಾಡಿದ ಸ್ಥಿತಿ ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ. ಇನ್ನೇನು ಲಾಕ್‌ಡೌನ್‌ ಮುಗಿದು ಬದುಕು ಹಳಿಗೆ ಬರುತ್ತದೆ ಎಂದುಕೊಂಡರೂ ಕನಸು ನನಸಾಗುತ್ತಲೇ ಇಲ್ಲ...’

ಇದು ನಗರದ ಬಹುತೇಕ ಟ್ಯಾಕ್ಸಿ ಚಾಲಕರು ಹಾಗೂ ಆಟೊ ಚಾಲಕರ ಮಾತು. ಕೋವಿಡ್‌ ಕಾರಣ ವಿಧಿಸಿದ್ದ ಲಾಕ್‌ಡೌನ್‌ ತೆರವಾಗಿದ್ದರೂ ಅವರ ಬದುಕಿನಲ್ಲಿ ಬೆಳಕು ಮೂಡಿಲ್ಲ. ಲಾಕ್‌ಡೌನ್‌ ಬಳಿಕ ಜೀವನ ಸುಧಾರಣೆ ಕಂಡಿಲ್ಲ.

ದಿನಕ್ಕೆ ₹ 200 ದುಡಿಮೆ ಸಿಕ್ಕರೆ ಹೆಚ್ಚು ಎಂಬಂತಹ ಸ್ಥಿತಿ ಬಹುತೇಕ ಆಟೊ ಹಾಗೂ ಟ್ಯಾಕ್ಸಿ ಚಾಲಕರದ್ದು. ಬೆಳಿಗ್ಗೆ 6ರಿಂದ ಸಂಜೆ 7ರವರೆಗೆ ದುಡಿದರೂ ₹ 200 ಸಿಗುವುದು ಕಷ್ಟವಾಗಿದೆ. ಕೆಲವು ವೇಳೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸುಮ್ಮನೆ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಇರುವ ಸಂದರ್ಭವೇ ಹೆಚ್ಚು ಎಂಬುದು ಆಟೊ, ಟ್ಯಾಕ್ಸಿ ಚಾಲಕರ ಅಳಲು.

ದಾವಣಗೆರೆ ನಗರದಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಆಟೊ ಚಾಲಕರು ಇದ್ದಾರೆ. ಅವರ ಅವಲಂಬಿತರು ಇನ್ನೂ ಹೆಚ್ಚಿದ್ದಾರೆ. 600ಕ್ಕೂ ಹೆಚ್ಚು ಟ್ಯಾಕ್ಸಿ ಚಾಲಕರು, ಮಾಲೀಕರು ಇದ್ದಾರೆ.

‘22 ವರ್ಷಗಳಿಂದ ಆಟೊ ಓಡಿಸುವ ಕಾಯಕ ಮಾಡಿಕೊಂಡಿದ್ದೇನೆ. ಕೊರೊನಾದಿಂದ ಬಂದಂತಹ ಸಂಕಷ್ಟದ ಸ್ಥಿತಿ ಎಂದೂ ಬಂದಿಲ್ಲ. ಜನ ಈಗಲೂ ಹೆಚ್ಚು ಹೊರಗೆ ಬರುತ್ತಿಲ್ಲ. ಹೀಗಾಗಿ ಬಾಡಿಗೆ ಇಲ್ಲ. ಒಂದು ತಿಂಗಳಿನಿಂದ ಪರಿಸ್ಥಿತಿ ಪರವಾಗಿಲ್ಲ ಎಂಬಂತಿದೆ’ ಎಂದರು ಆಟೊ ಚಾಲಕ ರಾಜು.

‘ಕೊರೊನಾ ಕಾಲದಲ್ಲಿ ತರಕಾರಿ ಮಾರುವುದು, ಕೂಲಿ,ಎಳನೀರು ವ್ಯಾಪಾರ ಸೇರಿ ಎಲ್ಲ ರೀತಿಯ ಕೆಲಸ ಮಾಡಿದ್ದೇವೆ. ನಮ್ಮನ್ನು ನಂಬಿ ಮನೆಯಲ್ಲಿ ಐದು ಜನ ಇದ್ದಾರೆ. ದಿನಕ್ಕೆ ₹ 300 ಸಿಕ್ಕರೆ ಹೆಚ್ಚು. ಅದರಲ್ಲೇ ಜೀವನ ನಿರ್ವಹಣೆ. ಮಕ್ಕಳ ಓದು ನಡೆಯಬೇಕು. ನಮ್ಮ ಪಾಡು ಪ್ರಾಣಿಗಳಿಗಿಂತ ಕಡೆಯಾಗಿದೆ. ಬೇರೆ ಕೆಲಸ ಗೊತ್ತಿಲ್ಲ. ಸರ್ಕಾರ ಕಾರ್ಮಿಕರಿಗೆ ನೀಡಿದ ಪರಿಹಾರ ಎಲ್ಲರಿಗೂ ಸಿಗಲಿಲ್ಲ. ಕೆಲವರಿಗೆ ಸಿಕ್ಕರೂ ಅದು ಲಾಕ್‌ಡೌನ್‌ ಕಾಲದಲ್ಲೇ ಖರ್ಚಾಯಿತು. ಆ ಹಣ ವಾಪಸ್‌ ನೀಡಲು ಸಿದ್ಧ. ಆದರೆ ನಮಗೆ ಕಲ್ಯಾಣ ಮಂಡಳಿ ಸ್ಥಾಪಿಸಿ’ ಎಂಬ ಅವರ ಒತ್ತಾಯಕ್ಕೆ ಗಿರೀಶ್‌, ವೀರಣ್ಣ, ಲಿಂಗರಾಜು ದನಿಗೂಡಿಸಿದರು.

‘ಬೆಂಗಳೂರಿನಲ್ಲಿ ಆಟೊ ಓಡಿಸಿಕೊಂಡು ಇದ್ದೆ. ಎರಡು ವರ್ಷಗಳ ಈಚೆಗೆ ದಾವಣಗೆರೆಗೆ ಬಂದಿದ್ದೇನೆ. ಇಲ್ಲಿ ಆಟೊ ಚಾಲಕರ ಬದುಕು ಸುಧಾರಿಸಿಲ್ಲ. ಬೆಂಗಳೂರಿನಂತೆ ನಗರವೂ ಬ್ಯುಸಿಯಾದರೆ ನಮ್ಮಂತಹವರು ಬದುಕು ಸಾಗಿಸಬಹುದು. ಬೆಳಿಗ್ಗೆಯಿಂದ ಸಂಜೆಯವರೆಗೆ ಜನರಿಗಾಗಿ ಕಾದು ಕಾದು ಆಟೊದ‌ಲ್ಲೇ ಕುಳಿತಕೊಂಡ ದಿನಗಳೇ ಹೆಚ್ಚು’ ಎಂದು ಬೇಸರಿಸಿದರು ಆಟೊ ಚಾಲಕ ಚಂದ್ರಶೇಖರ್‌.

‘ಲಾಕ್‌ಡೌನ್‌ಗೆ ಹೋಲಿಸಿದರೆ ದಿನಕ್ಕೆ ₹ 100 ಆದರೂ ಸಿಗುತ್ತದೆಯೆಂಬ ಅಲ್ಪ ತೃಪ್ತಿ ಇದೆ. ಅದು ಬಿಟ್ಟರೆ ಪರಿಸ್ಥಿತಿ ಸುಧಾರಿಸಿಲ್ಲ’ ಎಂದರು ಸರಸ್ವತಿ ನಗರದ ಆಟೊ ಚಾಲಕ ಕೃಷ್ಣ.

‘ಜನರು ಹೊರಗೆ ಬರುತ್ತಿಲ್ಲ. ಹೀಗಾಗಿ ಟ್ಯಾಕ್ಸಿಗಳಿಗೆ ಬಾಡಿಗೆ ಇಲ್ಲ. ಇಡೀ ದಿನ ಟ್ಯಾಕ್ಸಿ ನಿಲ್ದಾಣದಲ್ಲೇ ಇರುವಂತಾಗಿದೆ. ಮೊದಲು ಸ್ಥಿತಿವಂತರೊಬ್ಬರನ್ನು ಟ್ಯಾಕ್ಸಿಯಲ್ಲಿ ಅವರ ಹಳ್ಳಿಯ ತೋಟಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೆ. ಕೊರೊನಾ‌ ಕಾರಣ ಅವರ ಪುತ್ರ ‘ವರ್ಕ್‌ ಫ್ರಂ ಹೋಮ್’‌ ಮಾಡುತ್ತಿದ್ದಾರೆ. ಈಗ ಮಗ ತೋಟಕ್ಕೆ ಕರೆದೊಯ್ಯುತ್ತಾನೆ. ನೀನು ಬರುವುದು ಬೇಡ ಅಂದರು. ಬೆಳಿಗ್ಗೆ–ಸಂಜೆ ಸಿಗುತ್ತಿದ್ದ ಬಾಡಿಗೆ ಈಗ ಇಲ್ಲ. ಬೇತೂರಿನಿಂದ ಇಲ್ಲಿಗೆ ನಡೆದುಕೊಂಡೇ ಬಂದಿದ್ದೇನೆ’ ಎಂದು ಅಳಲು ತೋಡಿಕೊಂಡರು ಟ್ಯಾಕ್ಸಿ ಚಾಲಕ ಸುರೇಶ್‌ ಜಿ.

‘ಟ್ಯಾಕ್ಸಿ ಖರೀದಿ ಮಾಡಿದ ಸಾಲದ ಕಂತು ಕಟ್ಟಲೂ ಆಗುತ್ತಿಲ್ಲ. ಎಲ್ಲ ಸೇರಿ ₹ 16 ಸಾವಿರ ಇಎಂಐ ಕಟ್ಟಬೇಕು. 5 ದಿನಗಳು ಆಯಿತು ಒಂದೂ ಬಾಡಿಗೆ ಸಿಕ್ಕಿಲ್ಲ. ಹೀಗಾದರೆ ಸಾಲ ಕಟ್ಟುವುದು ಹೇಗೆ. ಜೀವನ ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಸಂಘಟನೆ ಬಲವಾಗದ ಕಾರಣ ಸರ್ಕಾರದ ಪರಿಹರವೂ ಸಿಕ್ಕಿಲ್ಲ’ ಎಂದು ಬೇಸರಿಸಿದರುವೀರೇಶಸ್ವಾಮಿ.

‘ಟ್ಯಾಕ್ಸಿ ಚಾಲಕರು ಬಿಟ್ಟು ಬೇರೆಯವರಿಗೆ ಕೊರೊನಾ ಕಾಲದ ಆಹಾರದ ಕಿಟ್‌, ಸರ್ಕಾರದ ಪರಿಹಾರ ಸಿಕ್ಕಿತು. ನಮಗೆ ಏನೂ ಸಿಕ್ಕಿಲ್ಲ. ಪರಿಹಾರಕ್ಕಿಂತ ಕಳೆದ ಜನವರಿಯಲ್ಲಿ ಬಾಡಿಗೆ ಸಿಕ್ಕಿದಂತೆ, ಸಂಭ್ರಮ ಪಡುತ್ತಿದ್ದ ಕಾಲ ಮತ್ತೆ ಬಂದರೆ ಸಾಕಾಗಿದೆ. ಪ್ರವಾಸಿ ತಾಣಗಳಿಗೆ ಜನರು ಹೋಗುವುದು ಹೆಚ್ಚಾಗಬೇಕು. ಬೆಂಗಳೂರು ಮೊದಲಿನಂತಾದರೆ ನಮಗೆ ಬಾಡಿಗೆ ಸಿಗುತ್ತದೆ’ ಎಂದು ಆಶಾವಾದ ವ್ಯಕ್ತಪಡಿಸಿದರು ಕೊಟ್ರೇಶ್‌.

‘ಆಟೊ ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಿ’
‘ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ನೀಡಿದ ಪರಿಹಾರ ಬಹುತೇಕ ಆಟೊ ಚಾಲಕರಿಗೆ ಸಿಗಲೇ ಇಲ್ಲ. ಬ್ಯಾಡ್ಜ್‌ ಇಲ್ಲದಿರುವುದು ಹಾಗೂ ಆಟೊ ಚಾಲಕರು ಎಂದು ಗುರುತಿಸಲು ಸರ್ಕಾರ ರೂಪಿಸಿರುವ ಗೊಂದಲದ ನಿಯಮಗಳು ಕಾರಣವಾಗಿವೆ. ಶೇ 80 ರಷ್ಟು ಚಾಲಕರಿಗೆ ಯಾವುದೇ ಪರಿಹಾರ ಸಿಗಲಿಲ್ಲ. ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಂತೆ ಆಟೊ ಚಾಲಕರಿಗೂ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ’ ಎನ್ನುತ್ತಾರೆ ದಲಿತ ಆಟೊ ಚಾಲಕರ ಸಂಘದ ಅಧ್ಯಕ್ಷ ರವಿಕುಮಾರ್‌ ಟಿ.

‘ಆಟೊದವರಿಗೂ ಇಎಸ್‌ಐ ಸೌಲಭ್ಯ ಕಲ್ಪಿಸಬೇಕು. ಅದಕ್ಕೆ ಡಿಎಲ್‌ ರಿನಿವಲ್ ಮಾಡುವ ಸಂದರ್ಭದಲ್ಲಿ ಚಾಲಕರಿಂದ ಶುಲ್ಕ ಕಟ್ಟಿಸಿಕೊಳ್ಳುವ ಸರ್ಕಾರ ಇಎಸ್‌ಐಗೆಂದು ಹೆಚ್ಚುವರಿ ಶುಲ್ಕ ಕಟ್ಟಿಸಿಕೊಳ್ಳಲಿ. ನಮಗೂ ಇಎಸ್‌ಐ ಸೌಲಭ್ಯ ಕಲ್ಪಿಸಲೇಬೇಕು’ ಎಂಬುದು ಅವರ ಆಗ್ರಹ.

‘ಚಾಲಕರಿಗೆ ಮನೆಗಳಿಲ್ಲ. ಬೆರಳೆಣಿಕೆಯ ಮಂದಿಗೆ ಮಾತ್ರ ನಿವೇಶನ ದೊರಕಿದೆ. ಉಳಿದವರು ಸಣ್ಣ ಮನೆಗಳಲ್ಲೇ ವಾಸವಾಗಿದ್ದಾರೆ. ನಮ್ಮನ್ನೂ ಇತರೆ ಕಾರ್ಮಿಕರಂತೆ ಪರಿಗಣಿಸಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

ಪರಿಹಾರ ಮರೀಚಿಕೆ
ಸರ್ಕಾರದ ಲಾಕ್‌ಡೌನ್‌ ಪರಿಹಾರಕ್ಕಾಗಿ ಜಿಲ್ಲೆಯಲ್ಲಿ ಸೇವಾಸಿಂಧುವಿನಲ್ಲಿ 5197 ಜನ ಆಟೊ ಹಾಗೂ ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲವರಿಗೆ ಮಾತ್ರ ಪರಿಹಾರ ಸಿಕ್ಕಿದೆ.

ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದವರಿಗೆ ಎಲ್ಲರಿಗೂ ಪರಿಹಾರ ನೀಡಲು ಆಗದು. ಅರ್ಜಿ ವಸ್ತುಸ್ಥಿತಿ ಆಧರಿಸಿ, ಸಮರ್ಪಕ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗಿದೆ. 3000ಕ್ಕೂ ಹೆಚ್ಚು ಜನರಿಗೆ ನಿಯಮ ಅನುಸಾರ ಪರಿಹಾರ ವಿತರಿಸಲಾಗಿದೆ ಎಂದು ಬೆಂಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.‌

ಸಂಕಷ್ಟದಲ್ಲಿ ತೆರಿಗೆ ಹೊರೆ
ಪ್ರೇಕ್ಷಣೀಯ ಸ್ಥಳಗಳಿಗೆ ಜನರು ಹೋಗುತ್ತಿಲ್ಲ. ಹೊರ ರಾಜ್ಯಗಳಿಗೆ ಬಾಡಿಗೆ ಸಿಗುತ್ತಿಲ್ಲ. ಶಬರಿಮಲೆಗೆ ಹೆಚ್ಚಿನ ಯಾತ್ರಾರ್ಥಿಗಳು ಹೋಗುವುದನ್ನು ಕೇರಳ ಸರ್ಕಾರ ನಿಷೇಧಿಸಿದ ಕಾರಣಬಾಡಿಗೆ ಇಲ್ಲ. ಇದರಿಂದ ಸಂಕಷ್ಟ ಎದುರಾಗಿದೆ.ಹೆಚ್ಚಿನವರಿಗೆ ಸರ್ಕಾರದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ದೂರುತ್ತಾರೆ ದಾವಣಗೆರೆ ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಡಿ. ದೀಕ್ಷಿತ್.

ಚಾಲಕರು, ಮಾಲೀಕರ ಬದುಕು ಕಷ್ಟವಾಗಿದೆ. ಕ್ಯಾಬ್‌ ಚಾಲಕರು ಎಂದು ಕಾರು ಓಡಿಸುವವರನ್ನು ಮಾತ್ರ ಸರ್ಕಾರ ಪರಿಗಣಿಸುತ್ತಿದೆ. ಬೆಂಗಳೂರನ್ನು ಕೇಂದ್ರೀಕರಿಸಿ ಎಲ್ಲ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರಿಂದ ಉಳಿದ ಜಿಲ್ಲೆಯವರಿಗೆ ತೊಂದರೆಯಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡರು.

‘20 ಸೀಟಿನವರೆಗಿನ ಟೂರಿಸ್ಟ್‌ ಬಸ್‌ಗಳ ಒಂದು ಸೀಟಿಗೆ ತ್ರೈಮಾಸಿಕ ತೆರಿಗೆ ₹ 700ನಿಗದಿಪಡಿಸಿದ್ದರೆ, 24 ಸೀಟ್‌ಗಳ ಬಸ್‌ನ ಪ್ರತಿ ಸೀಟಿಗೆ ₹ 1,665 ಕಟ್ಟಬೇಕಾಗಿದೆ. ನಾಲ್ಕೇನಾಲ್ಕು ಸೀಟು ಹೆಚ್ಚಿರುವ ಕಾರಣಕ್ಕೆ ಮೂರು ತಿಂಗಳಿಗೆ ₹ 26 ಸಾವಿರ ಅಧಿಕ ತೆರಿಗೆ ಕಟ್ಟಬೇಕಿದೆ. ತಮಿಳುನಾಡಿಗೆ ಹೋಗಲು ₹ 23 ಸಾವಿರ ತೆರಿಗೆ ಕಟ್ಟಬೇಕು. ಸರ್ಕಾರ ತೆರಿಗೆ ಕಡಿಮೆ ಮಾಡಲಿ’ ಎಂದು ಅವರು ಒತ್ತಾಯಿಸಿದರು.

ಡಿಸೇಲ್‌ ದರ ಹೆಚ್ಚಳವೂ ಟ್ಯಾಕ್ಸಿ ಮಾಲೀಕರ ಮೇಲೆ ಪರಿಣಾಮ ಬೀರಿದೆ. ದರ ಇಳಿದರೆ ಅನುಕೂಲ. ನಗರದಲ್ಲಿ ಟ್ಯಾಕ್ಸಿಗಳಿಗೆ ಸಮರ್ಪಕವಾದ ನಿಲ್ದಾಣವಿಲ್ಲ. ಬಿಸಿಲಿನಲ್ಲಿಯೇ ಇರಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದುಬೇಸರಿಸಿದರು.

ಸಿಗದ ಬಾಡಿಗೆ: ಜೀವನ ನಿರ್ವಹಣೆ ಸಂಕಷ್ಟ
ಹೊನ್ನಾಳಿ:
ಪಟ್ಟಣದಲ್ಲಿ ಆಟೊ ಹಾಗೂ ಟ್ಯಾಕ್ಸಿ ಚಾಲಕರ ಸ್ಥಿತಿ ಸುಧಾರಿಸಿಲ್ಲ. ಬಾಡಿಗೆ ಸಿಗದೆ ಚಾಲಕರು ಸಂಕಷ್ಟಪಡುವಂತಾಗಿದೆ.

‘ಪ್ರಯಾಣಿಕರ, ಪ್ರವಾಸಿಗರ ಟ್ಯಾಕ್ಸಿಗಳನ್ನು ಬಾಡಿಗೆಗೆ ಕೇಳಿಕೊಂಡು ಯಾರೂ ಬರುತ್ತಿರಲಿಲ್ಲ. ಸಂಚಾರ ವಿರಳವಾಗಿದೆ. ಹೀಗಿರುವಾಗ ನಮ್ಮನ್ನು ಬಾಡಿಗೆಗೆ ಕರೆಯುವುದಾದರೂ ಹೇಗೆ’ ಎನ್ನುತ್ತಾರೆ ಚಾಲಕ ಅತಾವುಲ್ಲಾ.

‘ಕೊರೊನಾಗೂ ಮುನ್ನ ಕನಿಷ್ಠ ಆದಾಯಕ್ಕೆ ತೊಂದರೆ ಇರಲಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಎರಡು–ಮೂರು ತಿಂಗಳು ಸಂಸಾರ ನಡೆಸುವುದೇ ದುಸ್ತರವಾಗಿತ್ತು. ಜಮೀನಿನಲ್ಲಿ ಕೂಲಿ ಕೆಲಸಕ್ಕೆ, ಬೀದಿ ಬೀದಿಯಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸಿದ್ದೇವೆ’ ಎಂದು ಅಳಲು ತೋಡಿಕೊಂಡರು.

ಲಾಕ್‌ಡೌನ್‌ ತೆರವಾಗಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ಸಾಲದ ಕಂತು ಕಟ್ಟಲೂ ಆಗುತ್ತಿಲ್ಲ. ಲಾಕ್‍ಡೌನ್‌ನಲ್ಲಿ ಹೊಸ ಟ್ಯಾಕ್ಸಿ, ಆಟೊಗಳನ್ನು ಯಾರೂ ಖರೀದಿಸಿಲ್ಲ. ಹೊನ್ನಾಳಿಗೆ ಕನಿಷ್ಠ ಏಳೆಂಟು ಕಿ.ಮೀ ದೂರದಿಂದ ಬರಬೇಕು. ಎಷ್ಟೋ ಸಾರಿ ಒಂದೇ ಒಂದು ಬಾಡಿಗೆಯೂ ಸಿಗದೇ ಕೈಯಿಂದ ಡೀಸೆಲ್ ಹಾಕಿಸಿಕೊಂಡು ಮನೆಗೆ ಹೋಗಿದ್ದೂ ಇದೆ ಎಂದು ಬೇಸರಿಸಿದರು ಬಸವರಾಜ್.

ಡೀಸೆಲ್ ದರ ಏರಿಕೆಯಾಗಿದ್ದರಿಂದ ಕಿ.ಮೀ. ದರ ಹೆಚ್ಚಿಸೋಣ ಎಂದರೆ ಪ್ರಯಾಣಿಕರು ಕೇಳುತ್ತಿಲ್ಲ.ನಗರದಲ್ಲಿ ಟ್ಯಾಕ್ಸಿ, ಆಟೊಗಳಿಗೆ ನಿಲ್ದಾಣವಿಲ್ಲ. ರಸ್ತೆ ಪಕ್ಕದಲ್ಲಿಯೇ ಈ ವಾಹನಗಳನ್ನು ನಿಲ್ಲಿಸಿಕೊಳ್ಳುವ ಅನಿವಾರ್ಯತೆ ಇದೆ ಎನ್ನುತ್ತಾರೆ ಇರ್ಷಾದ್.

ಬಾಡಿಗೆ ಸಿಗದೆ ಪರಿಸ್ಥಿತಿ ಕಷ್ಟವಾಗಿದೆ ಎಂದು ಆಟೊ ರಾಜ ಹೇಳಿದರೆ, ಹಳದಿ ಬೋರ್ಡ್‌ಗಳ ಗಾಡಿಗಳನ್ನೇ ಅಡ್ಡ ಹಾಕಿ ಪೊಲೀಸರು ಕಿರಿ ಕಿರಿ ಮಾಡುತ್ತಾರೆ ಎಂದು ದೂರಿದರು ನಾಗೇಶ್.

ಇದೂವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಯಾವುದೇ ಸಹಾಯಧನ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT