ಶಿಕ್ಷಕರ ವೇತನ ಪರಿಷ್ಕರಣೆ ಆಗದಿರುವುದು ಅವಮಾನಕಾರಿ ಸಂಗತಿ

7
ಶೈಕ್ಷಣಿಕ ಕಾರ್ಯಾಗಾರದಲ್ಲಿ ಎಂ.ಎಲ್‌.ಸಿ ಭೋಜೇಗೌಡ ಕಳವಳ

ಶಿಕ್ಷಕರ ವೇತನ ಪರಿಷ್ಕರಣೆ ಆಗದಿರುವುದು ಅವಮಾನಕಾರಿ ಸಂಗತಿ

Published:
Updated:
Prajavani

ದಾವಣಗೆರೆ: ಒಂದು ವರ್ಷ ಸೇವೆ ಸಲ್ಲಿಸಿದ ಶಾಸಕರಿಗೂ ಪಿಂಚಣಿ ಕೊಡಲಾಗುತ್ತಿದೆ. ಆದರೆ, 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕರಿಗೆ ಪಿಂಚಣಿ ಸಿಗದಿರುವುದು ಅವಮಾನಕರ ಸಂಗತಿ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಹಾಗೂ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವೇತನವು ಸುದ್ದಿಯಾಗದೇ ₹ 2.50 ಲಕ್ಷ ಪರಿಷ್ಕರಣೆಯಾಗಿದೆ. ಐದು ವರ್ಷಗಳಲ್ಲಿ ಮೂರು ಬಾರಿ ಶಾಸಕರ ಗೌರವಧನ ಹೆಚ್ಚಿಸಲಾಗಿದೆ. ಆದರೆ, 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರು ವೇತನ ಪರಿಷ್ಕರಣೆ ಹಾಗೂ ಬಡ್ತಿ ಸೌಲಭ್ಯ ಪಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ವಾರಕ್ಕೆ ಒಂದು ಸಭೆ ನಡೆಸಿದರೆ ಶಾಸಕರ ಬ್ಯಾಂಕಿನ ಖಾತೆಗೆ ಭತ್ಯೆ ಸೇರಿ ₹ 40 ಸಾವಿರ ಜಮಾ ಆಗುತ್ತದೆ. ಕೆಲವರು ಸಾಮರ್ಥ್ಯಕ್ಕೆ ಅನುಗುಣವಾಗಿ ವಾರಕ್ಕೆ ಎರಡು– ಮೂರು ಸಭೆಗಳನ್ನೂ ಮಾಡುತ್ತಾರೆ. ಶಾಸಕರು, ವಿಧಾನ ಪರಿಷತ್‌ ಸದಸ್ಯರು ತಮ್ಮ ಪಾಸ್‌ಬುಕ್‌ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನೂ ತೆಗೆದು ನೋಡುವುದಿಲ್ಲ. ಆದರೆ, ವಿಧಾನ ಪರಿಷತ್‌ ಸದಸ್ಯರನ್ನು ಆಯ್ಕೆ ಮಾಡುವ ಶಿಕ್ಷಕರ ವೇತನ ಮಾತ್ರ ಪರಿಷ್ಕರಣೆ ಆಗುತ್ತಿಲ್ಲ. ಇದಕ್ಕೆ ರಾಜಕಾರಣಿಗಳು ಕಾರಣರಲ್ಲ; ಐ.ಎ.ಎಸ್‌ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಭೋಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಶಿಕ್ಷಕರು ರಾಷ್ಟ್ರಪತಿ ಆಗುವವರ ವ್ಯಕ್ತಿತ್ವವನ್ನೂ ನಿರ್ಮಾಣ ಮಾಡಿರುತ್ತಾರೆ. ಇವರಿಗೆ ಸಂವಿಧಾನ ಬದ್ಧವಾದ ಸೌಲಭ್ಯಗಳನ್ನು ಕೊಡದಿದ್ದರೆ ನಾವು  (ಎಂ.ಎಲ್‌.ಸಿ) ಯಾವ ಪುರುಷಾರ್ಥಕ್ಕೆ ಈ ಸ್ಥಾನದಲ್ಲಿ ಇರಬೇಕು? ಹೀಗಾಗಿ 14 ಎಂ.ಎಲ್.ಸಿಗಳೂ ಪಕ್ಷ ಭೇದ ಮರೆತು ವಿಧಾನ ಪರಿಷತ್ತಿನಲ್ಲಿ ಒಕ್ಕೊರಲಿನಿಂದ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ. ಸರ್ಕಾರದಿಂದ ಸೌಲಭ್ಯ ಕಲ್ಪಿಸಿಕೊಡಲು ಯತ್ನಿಸುತ್ತೇವೆ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !