ಶನಿವಾರ, ಜನವರಿ 28, 2023
24 °C
ಎಸ್‌ಸಿ, ಎಸ್‌ಟಿ ಹಮಾಲರಿಗೆ ನಿರ್ಮಿಸಿರುವ ವಸತಿ ಗೃಹಗಳನ್ನು ಉದ್ಘಾಟಿಸಿದ ಸಚಿವ ಬೈರತಿ ಬಸವರಾಜ

ಸೂರಿಲ್ಲದವರಿಗೆ ಸೂರು ಕಲ್ಪಿಸುವುದು ಸರ್ಕಾರದ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಸೂರಿಲ್ಲದವರಿಗೆ ಸೂರು ಕಲ್ಪಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿ. ಕಷ್ಟಪಟ್ಟು ಜೀವನ ನಡೆಸುವ ಹಮಾಲರಿಗೆ ಸೂರು ಕಲ್ಪಿಸಿಕೊಡುತ್ತಿರುವುದು ಇದಕ್ಕೆ ಸಾಕ್ಷಿ’ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ತಾಲ್ಲೂಕಿನ ಎಚ್. ಗಿರಿಯಾಪುರ ಗ್ರಾಮದಲ್ಲಿ ಕೃಷಿ ಮಾರಾಟ ಇಲಾಖೆ, ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಮಾಲರಿಗೆ ನಿರ್ಮಿಸಿರುವ ವಸತಿ ಗೃಹಗಳನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ದಾವಣಗೆರೆ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಲೈಸೆನ್ಸ್ ಪಡೆದು ಕಾರ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಹಮಾಲರಿಗಾಗಿ ಎಚ್. ಗಿರಿಯಾಪುರ ಗ್ರಾಮದಲ್ಲಿ 12 ಎಕರೆ ಜಾಗದಲ್ಲಿ 122 ವಸತಿಗೃಹಗಳನ್ನು ನಿರ್ಮಿಸಿಕೊಟ್ಟಿದೆ. ವಸತಿಗೃಹಗಳಿಗೆ ರಾಂಪುರ ಹಳ್ಳದಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. ಸಂಪರ್ಕ ರಸ್ತೆ ಮತ್ತು ತಂತಿಬೇಲಿ ನಿರ್ಮಾನಕ್ಕೆ ಟೆಂಡರ್ ಕರೆದಿದ್ದು, ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದಾವಣಗೆರೆಯ ಕೆ.ಆರ್. ಮಾರುಕಟ್ಟೆಯಲ್ಲಿ ₹ 29 ಕೋಟಿ ವೆಚ್ಚದಲ್ಲಿ ಮುಚ್ಚು ಹರಾಜುಕಟ್ಟೆಯ ಪ್ರಿಕಾಸ್ಟಿಂಗ್ ಕಟ್ಟಡವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ನೆಲಮಹಡಿಯಲ್ಲಿ 138, ಮೊದಲನೇ ಮಹಡಿಯಲ್ಲಿ 116 ಸೇರಿದಂತೆ ಒಟ್ಟು 254 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಎರಡನೇ ಮಹಡಿಯಲ್ಲಿ 250 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯ, ಲಿಫ್ಟ್ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳಿರುವ ಮುಚ್ಚು ಹರಾಜುಕಟ್ಟೆ ಕೂಡ ಇಂದು ಲೋಕಾರ್ಪಣೆ  ಮಾಡಲಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ 10 ಮಂದಿ ಹಮಾಲರಿಗೆ ಸಾಂಕೇತಿಕವಾಗಿ ವಸತಿಗೃಹಗಳ ಹಂಚಿಕೆ ಪತ್ರ ವಿತರಿಸಲಾಯಿತು.

ಮಾಯಕೊಂಡ ಶಾಸಕ ಪ್ರೊ.ಎನ್. ಲಿಂಗಣ್ಣ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಕೃಷಿ ಮಾರಾಟ ಇಲಾಖೆ ಕಾರ್ಯದರ್ಶಿ ಎ.ಸಿ. ದೊರೈಸ್ವಾಮಿ, ಸಹಾಯಕ ನಿರ್ದೇಶಕ ಜಿ.ಪ್ರಭು ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.