ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದೇ ನೌಕರರಿಂದ

ರಾಜ್ಯಮಟ್ಟದ ನೌಕರರ ಸಮ್ಮೇಳನ ಉದ್ಘಾಟಿಸಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ
Last Updated 8 ಫೆಬ್ರುವರಿ 2020, 16:20 IST
ಅಕ್ಷರ ಗಾತ್ರ

ಹರಿಹರ: ಗುಣಮಟ್ಟದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ರಾಜ್ಯವು ದೇಶದಲ್ಲೇ 6ನೇ ಸ್ಥಾನದಲ್ಲಿದೆ. ಇದಕ್ಕೆ ಸರ್ಕಾರಿ ನೌಕರರ ಶ್ರಮ ಕಾರಣ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದರು.

ಪರಿಶಿಷ್ಟ ಪಂಗಡದ ನೌಕರರ ಸಮಸ್ಯೆಗಳ ಬಗ್ಗೆ ರಾಜನಹಳ್ಳಿಯಲ್ಲಿ ನಡೆದ ಮಹರ್ಷಿ ವಾಲ್ಮಿಕಿ ಜಾತ್ರೆಯಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ನೌಕರರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯವನ್ನು ಸರಿದಾರಿಯಲ್ಲಿ ಒಯ್ಯುವ ಕೆಲಸವನ್ನು ವಾಲ್ಮೀಕಿ ಪೀಠ ಮಾಡುತ್ತಿದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಈ ಮಠ ಮಾಡುತ್ತಿದೆ. ಸ್ವಾಮೀಜಿಯವರ ಯೋಜನೆ, ಯೋಚನೆಗಳಿಗೆ ನೌಕರರು ಸಹಕಾರ, ಸಹಭಾಗಿತ್ವ ನೀಡಬೇಕು ಎಂದು ತಿಳಿಸಿದರು.

‘ನಮ್ಮ ಹಿತರಕ್ಷಣೆಗಾಗಿ, ಕ್ಷೇಮಾಭಿವೃದ್ಧಿ ಕಾಪಾಡಿಕೊಳ್ಳಲು, ಸರ್ಕಾರದ ಮುಂದೆ ನಮ್ಮ ಬೇಡಿಕೆ, ಸಮಸ್ಯೆಗಳನ್ನು ಇಡಲು ಸಂಘವನ್ನು ಮಾಡಿಕೊಳ್ಳಲಾಗಿದೆ. ಮುಂಬಡ್ತಿ, ಮೀಸಲಾತಿ, ಆರ್ಥಿಕ ಮತ್ತು ಸಾಮಾಜಿಕ ಸಬಲತೆ ನೀಡುವುದರಲ್ಲಿ ಆಗುತ್ತಿರುವ ತೊಂದರೆಯನ್ನು ನೀಗಿಸಲು ಹೋರಾಟ ಮಾಡಲಾಗುವುದು’ ಎಂದರು.

ಸರ್ಕಾರಿ ನೌಕರರಾಗಿ ಉದ್ಯೋಗಕ್ಕೆ ಸೇರುವಾಗಲೇ ಸಮಸ್ಯೆ, ಒತ್ತಡ, ಗೊಂದಲಗಳಿರುತ್ತವೆ. ಅದು ನಿರಂತರ ಮುಂದುವರಿದು ನಿವೃತ್ತರಾಗುವುದೂ ಅದೇ ಸಮಸ್ಯೆ, ಗೊಂದಲ, ಒತ್ತಡದಲ್ಲೇ ಆಗಿದೆ ಎಂದು ವಿಶ್ಲೇಷಿಸಿದರು.

ಸರ್ಕಾರಿ ನೌಕರರು ತಮ್ಮ ಜವಾಬ್ದಾರಿಯನ್ನು, ಗುಣಮಟ್ಟದ ಸೇವೆಯನ್ನು ನೀಡಬೇಕು. ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ನಮ್ಮ ಎಲ್ಲ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದರ ಜತೆಗೆ ಪಡೆಯುವ ವೇತನಕ್ಕೆ ಸರಿಯಾಗಿ ಕೆಲಸ ಮಾಡುತ್ತಿದ್ದೇವೆಯೇ ಎಂಬ ಆತ್ಮವಿಮರ್ಶೆಯನ್ನೂ ಮಾಡಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ನೌಕರರು ಸತ್ತರೆ ಶವ ಸಂಸ್ಕಾರಕ್ಕೆ ₹ 5000 ಕೊಡುತ್ತಿದ್ದರು. ಅದನ್ನು ಈಗ ₹ 15 ಸಾವಿರಕ್ಕೆ ಏರಿಸಲಾಗಿದೆ. ಅನಾಮಧೇಯ ಮೂಗರ್ಜಿ ಬಂದರೆ ಅವುಗಳನ್ನು ತನಿಖೆ ಮಾಡಬಾರದು ಎಂದು ಆದೇಶವಾಗಿದೆ. ಸರ್ಕಾರಿ ನೌಕರರ ಮೇಲೆ ಹಲ್ಲೆ, ಬೆದರಿಕೆಗಳಾಗದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಸ್ಯೆ ಪರಿಹರಿಸುವ ಸಭೆಗಳು ನಡೆಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ. ನೌಕರರು ಮತ್ತು ಅವರ ಅವಲಂಬಿತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆ ಈ ಬಾರಿಯ ಬಜೆಟಲ್ಲಿ ಘೋಷಣೆಯಾಗಲಿದೆ. ಇದೆಲ್ಲವೂ ಕಳೆದ ನಾಲ್ಕೈದು ತಿಂಗಳ ಸಾಧನೆ ಎಂದು ತಿಳಿಸಿದರು.

2006ರ ನಂತರ ಸೇರಿದ ನೌಕರರಿಗೆ ಎನ್‌ಪಿಎಸ್‌ನಿಂದಾಗಿ ಜೀವನದಲ್ಲಿ ಭದ್ರತೆ ಇಲ್ಲ. ಅನುದಾನಿತ ಶಾಲೆಯ ಶಿಕ್ಷಕರು, ನೌಕರರಿಗೆ ಜ್ಯೋತಿ ಸಂಜೀವಿನಿ ಇಲ್ಲ, ಆರೋಗ್ಯ ಭಾಗ್ಯ ಯೋಜನೆಗಳಿಲ್ಲ. ಇನ್ನೂ ಹಲವು ಸಮಸ್ಯೆಗಳಿವೆ. ಎಲ್ಲವನ್ನು ಸರಿಪಡಿಸಲು ಹಂತಹಂತವಾಗಿ ಹೋರಾಟ ಮಾಡಲಾಗುವುದು ಎಂದರು.

‘ಕೇಂದ್ರದ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವೆ ವೇತನದಲ್ಲಿ ಭಾರಿ ವ್ಯತ್ಯಾಸವಿದೆ. 2022ರ ಒಳಗೆ ಈ ಸಮಸ್ಯೆ ನಿವಾರಿಸಬೇಕು. ಮುಂಬಡ್ತಿ ಸಮಸ್ಯೆ ರಿಪಡಿಸಬೇಕು. ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ನಿಗದಿ ಮಾಡಬೇಕು. ಕೆಎಸ್‌ಆರ್‌ಟಿಸಿ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಇದಕ್ಕಾಗಿ ಹೋರಾಟ ನಡೆಸುವುದು ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಂಘಟನೆ ಮತ್ತು ಹೋರಾಟಗಾರರ ಸಮಾವೇಶದಲ್ಲಿಪರಿಶಿಷ್ಟ ವರ್ಗಗಳ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಚರ್ಚಿಸಲಾಯಿತು.

ಪ್ರಸನ್ನಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಪರಿಶಿಷ್ಟ ಪಂಗಡದ ಅಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹನುಮರಸಯ್ಯ, ರಂಗರಾಜು ವನದುರ್ಗ, ಆರ್‌.ಬಿ. ತಿಮ್ಮಾಪುರ್‌, ತೇಜಸ್ವಿ ಪಟೇಲ್‌, ಅರುಣ ಪೂಜಾರ್‌, ಜಿ.ಟಿ. ಚಂದ್ರಶೇಖರ್‌, ಯಲ್ಲಪ್ಪ ಜಾಲಿಬೆಂಚಿ, ಪ್ರಿ. ಟಿ.ಟಿ. ಬಸವನಗೌಡ, ನಾಗಸಿದ್ಧಾರ್ಥ ಹೊಲೆಯಾರ್‌ ಅವರೂ ಉಪಸ್ಥಿತರಿದ್ದರು.

ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ರಾಜಶೇಖರ್‌ ಎ. ಸ್ವಾಗತಿಸಿದರು. ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಂಕರ್‌ ಲ. ಜಾಲಿಹಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT