ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಪಕ್ಷದ ಶಾಸಕನ ರಕ್ಷಣೆಗೆ ನಿಲ್ಲದ ಕಾಂಗ್ರೆಸ್: ಬಿ.ಸಿ.ಪಾಟೀಲ ಆರೋಪ

Last Updated 19 ಆಗಸ್ಟ್ 2020, 6:00 IST
ಅಕ್ಷರ ಗಾತ್ರ

ದಾವಣಗೆರೆ: ‘ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ದಲಿತ ಶಾಸಕನ ರಕ್ಷಣೆಗೆ ಕಾಂಗ್ರೆಸ್ ನಾಯಕರು ಮುಂದಾಗುತ್ತಿಲ್ಲ. ತಮ್ಮದೇ ಪಕ್ಷದ ಶಾಸಕರನ್ನು ಕಾಪಾಡಿಕೊಳ್ಳಲು ಆಗಿಲ್ಲ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಆರೋಪಿಸಿದರು.

ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆಯಲ್ಲಿ ರೈತರ ಬೆಳೆ ಸಮೀಕ್ಷೆ ಉತ್ಸವದ ಮೊಬೈಲ್ ಆ್ಯಪ್ ಬಳಕೆ ಪ್ರಾತ್ಯಕ್ಷಿಕೆಯ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಆರೋಪಿಗಳನ್ನು ಅಮಾಯಕರು ಎಂದು ಕಾಂಗ್ರೆಸ್‌ನವರು ಹೇಳಿಕೆ ನೀಡುತ್ತಿದ್ದಾರೆ. ಪೊಲೀಸ್ ಠಾಣೆಗೆ ಹಾಗೂ ಶಾಸಕರ ಮನೆಗೆ ಬೆಂಕಿ ಇಟ್ಟವರು ಅಮಾಯಕರಾ’ ಎಂದು ಪ್ರಶ್ನಿಸಿದರು.

‘ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ನಡೆದ ದಾಳಿ ಪೂರ್ವ ನಿಯೋಜಿತ. ಇದು ರಾಜಕೀಯಪ್ರೇರಿತ ದಾಳಿ. ಗಲಭೆ ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಇದುವರೆಗೂ ಯಾವೊಬ್ಬ ಕಾಂಗ್ರೆಸ್ ನಾಯಕರೂ ಹೇಳಿಲ್ಲ. ಇದರ ಹಿಂದೆ ಯಾವುದೋ ರಾಜಕೀಯ ಪಿತೂರಿ ಇದೆ’ ಎಂದು ಆರೋಪಿಸಿದರು.

ದೆಹಲಿಗೆ ಹೋದ ತಕ್ಷಣ ಡಿಸಿಎಂ ಹುದ್ದೆ ಕೇಳಲು ಎಂದು ಅರ್ಥೈಸುವುದೇ?

ಹೊನ್ನಾಳಿ: ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು ಎಂಬುದು ನನ್ನ ಒತ್ತಾಯ ಎಂದು ಬಿ.ಸಿ. ಪಾಟೀಲ್ ಹೇಳಿದರು.

ಮಂಗಳವಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನೆರೆಯಿಂದ ತತ್ತರಿಸಿರುವ ಬೆಳಗಾವಿಯಲ್ಲಿ ಪರಿಹಾರ ಕಾರ್ಯಗಳ ಉಸ್ತುವಾರಿ ನೋಡುವುದನ್ನು ಬಿಟ್ಟು ಡಿಸಿಎಂ ಹುದ್ದೆ ಕೇಳಲು ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿದ್ದಾರೆ, ಇದು ಸರಿಯೇ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿ.ಸಿ. ಪಾಟೀಲ್, ‘ರಮೇಶ್ ಜಾರಕಿಹೊಳಿ ಅನ್ಯ ಕಾರ್ಯ ನಿಮಿತ್ತ ದೆಹಲಿಗೆ ಹೋಗಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಲು ಹೋಗಿರಬಹುದು. ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಚರ್ಚಿಸಲು ನಾನೂ ದೆಹಲಿಗೆ ಹೋಗಬೇಕು ಅಂದುಕೊಂಡಿದ್ದೇನೆ. ಹಾಗಾಗಿ, ಅವರು ದೆಹಲಿಗೆ ಹೋದ ತಕ್ಷಣ ಡಿಸಿಎಂ ಹುದ್ದೆ ಕೇಳುವುದಕ್ಕೇ ಹೋಗಿದ್ದಾರೆ ಎಂದು ಅರ್ಥೈಸುವುದು ತಪ್ಪು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ದೆಹಲಿಗೆ ಹೋಗುತ್ತಾರೆ. ಅಂದಾಕ್ಷಣ ಅವರು ಪ್ರಧಾನಮಂತ್ರಿ ಆಗಲಿಕ್ಕೆ ದೆಹಲಿಗೆ ಹೋಗಿದ್ದಾರೆ ಎಂದು ಹೇಳಲು ಆಗುತ್ತದೆಯೇ’ಎಂದು ಮರು ಪ್ರಶ್ನೆ ಹಾಕಿದರು.

ಪ್ರವಾಹದಿಂದ ರಾಜ್ಯದಲ್ಲಿನ ಬೆಳೆ ಹಾನಿಗೆ ಸಂಬಂಧಿಸಿ ₹ 400 ಕೋಟಿಗಳಷ್ಟು ಪರಿಹಾರ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಶೀಘ್ರವೇ ಇನ್ನೊಮ್ಮೆ ಒತ್ತಡ ಹೇರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT