ಸೋಮವಾರ, ಮೇ 17, 2021
27 °C
6ನೇ ವೇತನ ಆಯೋಗ ಜಾರಿ ಮಾಡಿ ಇಲ್ಲವೇ ವಿಷ ಕೊಡಿ: ಪ್ರತಿಭಟನಕಾರರ ಆಗ್ರಹ

ಬೀದಿಗಳಿದ ಕೆಎಸ್‌ಆರ್‌ಟಿಸಿ ನೌಕರರ ಮನೆ ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್‌ ನೌಕರರ ಪ್ರತಿಭಟನೆ ಹೊಸ ತಿರುವು ಪ‍ಡೆದಿದೆ. ನೌಕರರ ಪತ್ನಿ, ಮಕ್ಕಳೆಲ್ಲ ಬೀದಿಗಳಿದಿದ್ದಾರೆ. ತಟ್ಟೆ, ಲೋಟ ಬಡಿದು ಪ್ರತಿಭಟನೆ ನಡೆಸಿದ್ದಾರೆ.

ಇಲ್ಲಿನ ಜಯದೇವ ಸರ್ಕಲ್‌ ಬಳಿ ಶಿವಯೋಗಾಶ್ರಮದ ಆವರಣದಲ್ಲಿ ಮಹಿಳೆಯರು, ಮಕ್ಕಳು ಧರಣಿ ಕುಳಿತಿದ್ದಾರೆ. ಯುಗಾದಿ ಹೊಸ ವರ್ಷದ ಹಬ್ಬ. ಈ ಹಬ್ಬವನ್ನು ಮನೆಮಂದಿ ಸಂತೋಷದಿಂದ ಕಳೆಯಬೇಕಿತ್ತು. ಆದರೆ ಸರಿಯಾಗಿ ವೇತನವಿಲ್ಲದ ಕಾರಣ ಬೀದಿಯಲ್ಲಿ ಕುಳಿತು ಆಚರಿಸುವಂತಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮವರು 6ನೇ ವೇತನ ಆಯೋಗ ಜಾರಿ ಮಾಡುವಂತೆ ಕೇಳಿರಲಿಲ್ಲ. ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಂದು ಒತ್ತಾಯಿಸಿ ನಾಲ್ಕೈದು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ. ನಿಮಗೆ 6ನೇ ವೇತನ ಆಯೋಗವನ್ನು ಜಾರಿ ಮಾಡಿ ಅದರಂತೆ ವೇತನ ನೀಡಲಾಗುವುದು. ಅದಕ್ಕಾಗಿ ಮೂರು ತಿಂಗಳು ಕಾಯಿರಿ ಎಂದು ಆಗ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಮತ್ಯಾಕೆ 6ನೇ ವೇತನ ಆಯೋಗ ಜಾರಿಗೊಳಿಸುತ್ತಿಲ್ಲ’ ಎಂದು ಮಹಿಳೆಯರು ಪ್ರಶ್ನಿಸಿದರು.

‘6ನೇ ವೇತನ ಆಯೋಗ ಜಾರಿ ಮಾಡಿ, ಇಲ್ಲವೇ ವಿಷ ಕೊಡಿ. ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

ಎಸಿ ಕಾರಲ್ಲಿ ಚಾಲಕನನ್ನು ಇಟ್ಟುಕೊಂಡು ಹೋಗುವ ಬದಲು ಮುಖ್ಯಮಂತ್ರಿ ಯಡಿಯೂರಪ್ಪ ಒಂದೇ ದಿನ ಬಂದು ಬಸ್ ಓಡಿಸಲಿ. ಆಗ ನಮ್ಮ ಗಂಡಂದಿರು ಪಡುವ ಕಷ್ಟ ಗೊತ್ತಾಗುತ್ತದೆ. ಬ್ಯಾಂಕಿಗೆ ಹೋದರೆ ಇವರು ನೀಡುವ ವೇತನಕ್ಕೆ ಸಾಲ ಕೂಡ ಸಿಗುತ್ತಿಲ್ಲ. ಹಬ್ಬ ಮಾಡಲು ರೇಷನ್‌ ಕೂಡ ಮನೆಯಲ್ಲಿ ಇಲ್ಲ ಎಂದು ಪ್ರತಿಭಟಕಾರರು ತಿಳಿಸಿದರು.

ಸಂಘಟನೆಗಳ ಬೆಂಬಲ: ಕೆಎಸ್‌ಆರ್‌ಟಿಸಿ ನೌಕರರು ಕಳೆದ ಐದು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಸಿಐಟಿಯು ರಾಜ್ಯದಾದ್ಯಂತ ಮುಷ್ಕರ ನಡೆಸುತ್ತಿದೆ. ಜಿಲ್ಲೆಯಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್‌. ಆನಂದರಾಜ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕೆಎಸ್‌ಆರ್‌ಟಿಸಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಬೇಕು. ಸರ್ಕಾರವು ಕಾನೂನು ಬದ್ಧ ಮುಷ್ಕರವನ್ನು ನಿಷೇಧ ಮಾಡಿರುವುದು ಸರಿಯಲ್ಲ. ಈಗಾಗಲೇ ಬಂಧಿಸಿರುವ ಮುಖಂಡರನ್ನು ಬಿಡುಗಡೆ ಮಾಡಬೇಕು. ನೌಕರರ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐಯ ಅನಂತರಾಜು, ಕಟ್ಟಡ ಕಾರ್ಮಿಕ ಸಂಘಟನೆಯ ಗುಡ್ಡಪ್ಪ, ತಿಮ್ಮಣ್ಣ ಹೊನ್ನೂರು, ಜಯನಾಯಕ್‌, ಹಾಸ್ಟೆಲ್‌ ಹೊರಗುತ್ತಿಗೆ ನೌಕರರ ಸಂಘದ ಸುರೇಶ್‌, ಔಷಧ ಮಾರಾಟ ಪ್ರತಿನಿಧಿಗಳ ಸಂಘದ ವೆಂಕಟೇಶ್‌ ಅವರೂ ಇದ್ದರು.

ವಾಗ್ವಾದ: ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಕಾರರನ್ನು ಮೆರವಣಿಗೆ ಮೂಲಕ ಕರೆದೊಯ್ಯಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಂದಾಯಿತು. ಈ ಸಂದರ್ಭದಲ್ಲಿ ಪ್ರತಿಭಟನೆ, ಮೆರವಣಿಗೆಗೆ ಅವಕಾಶವಿಲ್ಲ ಎಂದು ಕೆಟಿಜೆ ನಗರ ಠಾಣೆಯ ಪಿಎಸ್‌ಐ ವೀರೇಶ್‌ ತಡೆದರು. ಈ ಸಂದರ್ಭದಲ್ಲಿ ಪಿಎಸ್‌ಐ ವೀರೇಶ್‌ ಮತ್ತು ರೈತ ಸಂಘದ ಅಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ನಡುವೆ ವಾಗ್ವಾದ ನಡೆಯಿತು. ಕೊರೊನಾ ನಿಯಮಗಳನ್ನು ಮೀರಿ ಪ್ರತಿಭಟನೆ ನಡೆಸುವುದು ಸರಿಯಲ್ಲಿ ಎಂದು ಪಿಎಸ್‌ಐ ಹೇಳಿದರೆ, ಮಸ್ಕಿಯಲ್ಲಿ ನಡೆಯುತ್ತಿರುವ ಉಪ ಚುನಾವಣೆ ಪ್ರಚಾರದಲ್ಲಿ ಸಾವಿರಾರು ಮಂದಿ ಭಾಗವಹಿಸುವಾಗ ಕೊರೊನಾ ಬರುವುದಿಲ್ವ ಎಂದು ಚನ್ನಬಸಪ್ಪ ವಾದಿಸಿದರು. ಕೊನೆಗೆ ಮೆರವಣಿಗೆ ಕೈಬಿಡಲಾಯಿತು. ಜಿಲ್ಲಾಧಿಕಾರಿ ಪರವಾಗಿ ತಹಶೀಲ್ದಾರ್‌ ಬಂದು ಮನವಿ ಸ್ವೀಕರಿಸಿದರು.

ರೈತ ಸಂಘದ ಹುಚ್ಚವ್ವನಹಳ್ಳಿ ಗಣೇಶ್‌, ಕಾಳೇಶ್‌ ಯಲೋದಹಳ್ಳಿ, ಎಸ್‌.ಎಂ. ದೊರೆಸ್ವಾಮಿ, ಖಲೀಂ ಉಲ್ಲಾ, ಪ್ರಶಾಂತ್‌, ಚೇತನ್‌, ಶಾಂತರಾಜ್‌ ಅವರೂ ಇದ್ದರು.

ವೇತನ ನೀಡಲು ಮಕ್ಕಳ ಆಗ್ರಹ

‘ನಾವು ಏಳುವಾಗ ಅಪ್ಪ ಹೋಗಿರುತ್ತಾರೆ. ಮಲಗಿದ ಮೇಲೆ ಬರುತ್ತಾರೆ. ಈ ಬಾರಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಿಲ್ಲ. ಅವರಿಗೆ ಸರಿಯಾಗಿ ಸಂಬಳ ನೀಡಬೇಕು’ ಎಂದು ಅಮೃತಾ, ಪ್ರತಿಜ್ಞಾ, ಸಹನಾ ಮುಂತಾದ ಮಕ್ಕಳು ಆಗ್ರಹಿಸಿದರು.

25 ಬಸ್‌ಗಳ ಓಡಾಟ

‘ಸೋಮವಾರ 25 ಬಸ್‌ಗಳು ಮಾತ್ರ ಓಡಾಟ ನಡೆಸಿವೆ. ಎಲ್ಲ ಬಸ್‌ಗಳು ಸಂಚಾರ ನಡೆಸಿದರಷ್ಟೇ ನಮಗೆ ಬೆಲ್ಲ. ಇಲ್ಲದೇ ಇದ್ದರೆ ಈ ಯುಗಾದಿ ಬರೀ ಬೇವು ಆಗಲಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್‌ ಹೆಬ್ಬಾಳ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.