ಗುರುವಾರ , ಅಕ್ಟೋಬರ್ 29, 2020
28 °C
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಕಳವಳ

ಲೆಕ್ಕಪತ್ರ ಸಮರ್ಪಕ ನಿರ್ವಹಣೆ ಇಲ್ಲ: ಸಿ.ಎಸ್. ಷಡಕ್ಷರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸರ್ಕಾರಿ ನೌಕರರ ತಾಲ್ಲೂಕು ಹಾಗೂ ಜಿಲ್ಲಾ ಸಂಘಗಳಲ್ಲಿ ಪಾರದರ್ಶಕತೆ ಇಲ್ಲ. ಲೆಕ್ಕ ಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ತಾಲ್ಲೂಕು ಸಂಘದ ಮೇಲೆ ಜಿಲ್ಲಾ ಸಂಘವು, ಜಿಲ್ಲಾ ಸಂಘದ ಮೇಲೆ ರಾಜ್ಯ ಸಂಘವು ನಿಯಂತ್ರಣ ಹೊಂದಿ ನಿಗಾ ವಹಿಸಬೇಕು. ಸಂಘಟನೆಯಲ್ಲಿ ಆರ್ಥಿಕ ಶಿಸ್ತು ಬರಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿಶೇಷ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವ್ಯಕ್ತಿ ದೊಡ್ಡವನಲ್ಲ ಸಂಘ ದೊಡ್ಡದು ಎಂಬ ದೇಯೋಧ್ಯೇಶ ನಮ್ಮದು. ಹಣಕಾಸು ದುರುಪಯೋಗ ಸೇರಿದಂತೆ ಇತರೆ ಆಪಾದನೆ, ತನಿಖೆ ಬಗ್ಗೆ ಚರ್ಚಿಸಲಾಗುವುದು. ಸಂಘದ 1 ರೂಪಾಯಿ ಕೂಡಾ ದುರ್ಬಳಕೆಯಾಗಲು ಬಿಡುವುದಿಲ್ಲ’ ಎಂದರು.

ನೂತನ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ, ಹಳೆಯ ಯೋಜನೆ ಜಾರಿ ಸಂಬಂಧ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು. ಕೇಂದ್ರ ಸರ್ಕಾರಿ ನೌಕರರ ಮಾದರಿಯ ವೇತನ, ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಿ, ತಾರತಮ್ಯ ಸರಿಪಡಿಸಬೇಕು. ಈ ಎರಡೂ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಹೋರಾಟ ರೂಪರೇಷೆ ಸಿದ್ಧಪಡಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೊರೊನಾ ಕಾಲದಲ್ಲಿ  ಸರ್ಕಾರ ನೌಕರರರು ಜೀವದ ಹಂಗು ತೊರೆದು ಜನ ಸೇವೆ ಮಾಡುತ್ತಿರುವುದು ಶ್ಲ್ಯಾಘನೀಯ. ಕೊರೊನಾ ಯಾವಾಗ ಮುಗಿಯುವುತ್ತದೆಯೋ ಎಂದು ಏಳು ತಿಂಗಳುಗಳಿಂದ ಕಾಯುತ್ತಿದ್ದೇವೆ. ಎಲ್ಲರೂ ಮಾಸ್ಕ್ ಧರಿಸಬೇಕು. ಅಂತರ, ಸ್ಯಾನಿಟೈಸರ್ ಬಳಕೆಗೆ ಹೆಚ್ಚು ಒತ್ತು ನೀಡಿಬೇಕು’ ಎಂದು ಕಿವಿ ಮಾತು ಹೇಳಿದರು. 

ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ್ ಸ್ವಾಗತಿಸಿದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ರಾಜ್ಯ ಸಂಘದ ಖಜಾಂಚಿ ಆರ್.ಶ್ರೀನಿವಾಸ್, ಗೌರವಾಧ್ಯಕ್ಷ ವಿ.ವಿ.ಶಿವರುದ್ರಯ್ಯ, ದಾವಣಗೆರೆ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ, ಮಲ್ಲಿಕಾರ್ಜುನ ಜಿ.ಬಳ್ಳಾರಿ, ಟಿ.ಶ್ರೀನಿವಾಸ್. ಅಪ್ಪಾಜಿಗೌಡ, ಎಚ್.ಎಸ್.ಹೇಮಲತಾ, ಕೆ.ಮಂಜುನಾಥ್, ಡಾ.ಡಿ.ಉಮೇಶ್ ಸೇರಿ ವಿವಿಧ ಜಿಲ್ಲೆಗಳ ಅಧ್ಯಕ್ಷರು ಇದ್ದರು.

ಸಂಘದ ಜಿಲ್ಲಾ ಶಾಖೆಯ ಪ್ರಥಮ ವರ್ಷದ ಪ್ರಗತಿ ಹಾದಿಯಲ್ಲಿ ಕೈ ಪಿಡಿ ಬಿಡುಗಡೆ ಮಾಡಲಾಯಿತು. ರಾಜ್ಯಾಧ್ಯಕ್ಷರ ಕುರಿತ ಜನನಾಯಕ ವೀಡಿಯೋ ಬಿಡುಗಡೆ ಮಾಡಲಾಯಿತು.  ಸಂಘದ ಯುಟ್ಯೂಬ್ ಚಾನಲ್ ಸಹ ಉದ್ಘಾಟಿಸಲಾಯಿತು.

ಜಿಲ್ಲಾಧಿಕಾರಿಗೆ ಕೊರೊನಾ ಯಾವಾಗ?

‘ಜಿಲ್ಲಾಧಿಕಾರಿಗಳಿಗೆ ಯಾವಾಗ ಪಾಸಿಟಿವ್ ಬರುತ್ತದೆ ಎಂದು ಅನೇಕರು ಕಾಯುತ್ತಿದ್ದಾರೆ. ಅನಗತ್ಯವಾಗಿ ವಸ್ತುಗಳನ್ನು ಮುಟ್ಟುವುದಿಲ್ಲ. ಮುಟ್ಟಿದರೂ ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಳ್ಳುತ್ತೇನೆ. ಮಾಸ್ಕ್ ಬಳಸುತ್ತೇನೆ. ಹಾಗಾಗಿ ಇಲ್ಲಿವರೆಗೆ ಕೊರೊನಾ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಒಂದು ಸಣ್ಣ ಮಾಸ್ಕ್ ಧರಿಸಲು ನಿಮ್ಮಿಂದಾಗುತ್ತಿಲ್ಲ. ಆದರೆ ವೈದ್ಯರು ಪಿಪಿಇ ಕಿಟ್ ಧರಿಸಿ 8 ಗಂಟೆ ಕೆಲಸ ಮಾಡುತ್ತಾರೆ ಎಂದು ಮಾಸ್ಕ್‌ ಧರಿಸದವರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ 200 ಮಂದಿ ಮಾತ್ರ ಇದ್ದಾರೆ ಎಂದು ಭಾವಿಸುತ್ತೇನೆ ಎಂದು ಸಭೆಯಲ್ಲಿ ಸಾವಿರಕ್ಕೆ ಹತ್ತಿರವಿದ್ದ ಜನಸಂದಣಿ ನೋಡಿ ಅಣಕವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.