ಈದ್ಗಾದಲ್ಲಿ ಅವಕಾಶವಿಲ್ಲ; ಮನೆಯಲ್ಲೇ ಪ್ರಾರ್ಥಿಸಿ

ದಾವಣಗೆರೆ: ಕೋವಿಡ್ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಜುಲೈ 20 ಅಥವಾ 21ರಂದು ಬಕ್ರೀದ್ ಆಚರಿಸುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈದ್ಗಾದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಮನೆಗಳಲ್ಲಿಯೇ ಪ್ರಾರ್ಥನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಬಕ್ರೀದ್ ಆಚರಣೆಯ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.
‘ಕಳೆದ ವರ್ಷ ಕೋವಿಡ್ ಸೋಂಕು ನಮ್ಮೆಲ್ಲ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಸೇರಿ ಎಲ್ಲ ಬಗೆಯ ಸಾಂಪ್ರದಾಯಿಕ ಆಚರಣೆಗಳಿಗೆ ತಡೆಹಾಕಿದೆ. ಕೊರೊನಾ ಸೋಂಕು ಸದ್ಯ ನಿಯಂತ್ರಣದಲ್ಲಿದ್ದರೂ ಪ್ರಕರಣಗಳು ಬರುತ್ತಲೇ ಇವೆ. ಮರಣವೂ ಕಡಿಮೆಯಾಗಿಲ್ಲ. ಸೋಂಕು ಹೇಗೆ ಹರಡುತ್ತಿದೆ. ಸಾವು ಯಾವಾಗ ಸಂಭವಿಸುತ್ತದೆ ಎಂಬುದನ್ನು ಅಂದಾಜಿಸಲಾಗುತ್ತಿಲ್ಲ. ಇದರ ನಡುವೆ ಕೋವಿಡ್ 3ನೇ ಅಲೆ ಬರುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಲಾಕ್‍ಡೌನ್ ತೆರವುಗೊಳಿಸಿದ್ದರೂ ವಾಣಿಜ್ಯ ಸೇರಿ ಎಲ್ಲ ಚಟುವಟಿಕೆಗೆ ಷರತ್ತು ಬದ್ಧ ಅನುಮತಿಯನ್ನು ಮಾತ್ರ ನೀಡಲಾಗಿದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ, ಕ್ರೀಡೆ ಸೇರಿ ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ’ ಎಂದು ವಿವರಿಸಿದರು.
ರಾಜ್ಯ ವಕ್ಫ್ ಬೋರ್ಡ್ ಹೊರಡಿಸಿರುವ ಮಾರ್ಗಸೂಚಿಯನ್ವಯ ಬಕ್ರೀದ್ ಹಬ್ಬವನ್ನು ಮನೆಗಳಲ್ಲಿಯೇ ಆಚರಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು. ಕಾನೂನಿಗೆ ಗೌರವ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ‘ಕೋವಿಡ್‍ನಿಂದಾಗಿ ಕಳೆದ ವರ್ಷದಿಂದ ಈವರೆಗೆ ಸಾಕಷ್ಟು ಸಾವು, ನೋವು ಕಂಡಿದ್ದೇವೆ. ವ್ಯಾಪಾರಿಗಳು, ಕೂಲಿಕಾರ್ಮಿಕರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಎಲ್ಲರ ಸಹಕಾರದಿಂದಲೇ ಸದ್ಯ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ನೆರೆಯ ರಾಜ್ಯಗಳಲ್ಲಿ ಕೋವಿಡ್ 3ನೇ ಅಲೆ ಪ್ರಾರಂಭವಾಗಿದೆ. ಹೀಗಾಗಿ ನಾವೆಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯ. ಈ ಬಾರಿಯೂ ಬಕ್ರೀದ್ ಹಬ್ಬವನ್ನು ಎಲ್ಲರೂ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸೋಣ. ಎಲ್ಲ ಹಬ್ಬಗಳನ್ನು ಮುಂದೆ ವಿಜೃಂಭಣೆಯಿಂದ ಆಚರಿಸಲು ಅವಕಾಶಗಳಿವೆ’ ಎಂದರು.
ಮೇಯರ್ ಎಸ್.ಟಿ. ವೀರೇಶ್, ‘ಪಾಲಿಕೆ ವ್ಯಾಪ್ತಿಯಲ್ಲಿ ಗೋಶಾಲೆ, ಬಿಡಾಡಿ ದನಗಳು, ನಾಯಿ, ಹಂದಿಗಳ ಹಾವಳಿ ಪ್ರಮುಖ ಸಮಸ್ಯೆಯಾಗಿದೆ. ಈಗಾಗಲೇ ಹಂದಿ ಹಾವಳಿ ಹಾಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಯಲಿದೆ. ಚಿಕನ್ ಮಟನ್ ತ್ಯಾಜ್ಯ ವಿಲೇವಾರಿಯನ್ನು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ. ಶೀಘ್ರ ಟೆಂಡರ್ ಕರೆಯಲಾಗುವುದು’ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸಮಾಜಗಳ ಮುಖಂಡರಾದ ಕೋಳಿ ಇಬ್ರಾಹಿಂ, ಸಯ್ಯದ್ ಚಾರ್ಲಿ, ಶಂಕರನಾರಾಯಣ, ಸತೀಶ್ ಪೂಜಾರಿ, ಸರ್ದಾರ್, ಶ್ರೀಕಾಂತ್, ಸೋಮ್ಲಾಪುರ ಹನುಮಂತಪ್ಪ, ಮಲ್ಲೇಶ್, ಸಾದಿಕ್ ಪೈಲ್ವಾನ್, ಗೌಡ್ರ ಚನ್ನಬಸಪ್ಪ, ಶಾಂತಕುಮಾರ್, ಆವರಗೆರೆ ವಾಸು, ಫೈರೋಜ್ ಮಾತನಾಡಿದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್‍ಒ ಡಾ.ನಾಗರಾಜ್, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿವೈಎಸ್‍ಪಿ ಬಸವರಾಜ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.