ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ

ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪ
Last Updated 24 ಡಿಸೆಂಬರ್ 2018, 16:02 IST
ಅಕ್ಷರ ಗಾತ್ರ

ಹೊನ್ನಾಳಿ: ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ದೂರಿದರು.

‘ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಿ ಅದರಿಂದಲಾದರೂ ಅಭಿವೃದ್ಧಿ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದೆ. ಆದರೆ ಅವರು ಡಿಸೆಂಬರ್ ಕೊನೆಯವರೆಗೂ ಕಾಯಿರಿ ಎಂದು ಭರವಸೆ ನೀಡಿದ್ದಾರೆ. ಕಾಯುತ್ತೇನೆ’ ಎಂದರು.

ಸೋಮವಾರ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕು ಪಂಚಾಯಿತಿ ವಸತಿ ಹಾಗೂ ನರೇಗಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಕೆಲವು ಸಂಘಟನೆಗಳು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಭಯಭೀತರಾಗಿದ್ದಾರೆ. ಯಾವುದೇ ಅಧಿಕಾರಿಗಳು ಯಾರಿಗೂ ಹಣ ಕೊಡಬಾರದು ಎಂದು ಸೂಚಿಸಿದರು.

‘ಕೆಲವು ಸಂಘಟನೆಗಳು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸುತ್ತವೆ. ಎಸಿಬಿಗೆ, ಲೋಕಾಯುಕ್ತಕ್ಕೆ ದೂರು ಕೊಡುತ್ತವೆ. ಮತ್ತೆ ಕೆಲವು ಸಂಘಟನೆಗಳು ಕಾರ್ಯಕ್ರಮ ಹಮ್ಮಿಕೊಳ್ಳುವ ನೆಪದಲ್ಲಿ ₹ 1 ಲಕ್ಷ, ₹ 2 ಲಕ್ಷಕ್ಕೆ ಬೇಡಿಕೆ ಇಡುತ್ತಾರೆ. ಕೊಡದಿದ್ದರೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿ ತೊಂದರೆ ಕೊಡುತ್ತಾರೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ನೀವು ಸರಿಯಾಗಿದ್ದರೆ ಯಾರೂ ನಿಮ್ಮ ಹತ್ತಿರ ಸುಳಿಯುವುದಿಲ್ಲ’ ಎಂದು ಎಚ್ಚರಿಸಿದರು.

‘ಇಲ್ಲಿ ಸತ್ಯ ಹರಿಶ್ಚಂದ್ರರು ಯಾರೂ ಇಲ್ಲ. ಕೆಲವೊಂದು ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ಲೋಪದೋಷಗಳು ಆಗುವುದು ಸಹಜ. ಅಧಿಕಾರಿಗಳು ಯಾರಿಗೂ ಹಣ ಕೊಡುವ ಮಟ್ಟಕ್ಕೆ ಇಳಿಯಬಾರದು. ನನ್ನ ಹೆಸರು ಹೇಳಿಕೊಂಡು ಯಾರಾದರೂ ಹಣ ವಸೂಲಿ ಮಾಡುತ್ತಿದ್ದರೆ ತಿಳಿಸಿ, ನನ್ನಿಂದ ಏನಾದರೂ ತಪ್ಪಾಗಿದ್ದರೆ ತಿಳಿಸಿ ತಿದ್ದಿಕೊಳ್ಳುತ್ತೇನೆ’ ಎಂದರು.

ಸಭೆಯಲ್ಲಿ ಸಾಸ್ವೆಹಳ್ಳಿ, ಯರಗನಾಳ್, ಲಿಂಗಾಪುರ, ತಿಮ್ಲಾಪುರ, ಎಚ್. ಕಡದಕಟ್ಟೆ, ಕ್ಯಾಸಿನಕೆರೆ, ಹತ್ತೂರು ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಪಂಚಾಯಿತಿಗಳಲ್ಲಿನ ಬಹುತೇಕ ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದರು.

ತಾಲ್ಲೂಕು ಪಂಚಾಯಿತಿ ಇಒ ಕೆ.ಸಿ. ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ರಾಘವೇಂದ್ರ, ತಾಲ್ಲೂಕಿನ ಪಿಡಿಒ, ಕಾರ್ಯದರ್ಶಿಗಳು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರಂಗನಾಥ್, ಸದಸ್ಯರಾದ ಅಬೀದ್ ಅಲಿಖಾನ್, ಸಿದ್ದಲಿಂಗಪ್ಪ, ವಿಜಯ್ ಕುಮಾರ್, ತಿಪ್ಪೇಶ್, ರೇಖಾ ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT