ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಾಯದ ಗಂಟೆ ಹರಿಹರದ ಈ ಪುರಾತನ ಸೇತುವೆ!

Published 10 ಆಗಸ್ಟ್ 2024, 6:51 IST
Last Updated 10 ಆಗಸ್ಟ್ 2024, 6:51 IST
ಅಕ್ಷರ ಗಾತ್ರ

ಹರಿಹರ: ಮೈಸೂರು ಮತ್ತು ಬಾಂಬೆ ರಾಜ್ಯಗಳ ಕೊಂಡಿಯಾಗಿದ್ದ, 138 ವರ್ಷಗಳ ಹಿಂದೆ ಇಲ್ಲಿನ ತುಂಗಭದ್ರಾ ನದಿ ಮೇಲೆ ನಿರ್ಮಿಸಿರುವ ಸೇತುವೆಯ ಆಧಾರ ಸ್ತಂಭಗಳುಶಿಥಿಲಗೊಳ್ಳುತ್ತಿದ್ದು, ಕಾಳಿನದಿಯಲ್ಲಿ ಕುಸಿದ ಸೇತುವೆಯ ಮಾದರಿಯಲ್ಲೇ ಕುಸಿದು ಬೀಳುವ ಸಾಧ್ಯತೆಗಳಿವೆ.

ಶತಮಾನದಿಂದ ತುಂಗಭದ್ರೆಯರನ್ನು ದಾಟಲು ಸಹಾಯಕವಾಗಿರುವ ಈ ಸೇತುವೆಯ ಆಧಾರ ಸ್ತಂಭಗಳ ಗಾರೆ ಉದುರುತ್ತಿದೆ. ಪರಿಣಾಮವಾಗಿ ಹಲವೆಡೆ ಸೈಜು ಕಲ್ಲುಗಳು ಕಿತ್ತು ಹೋಗಿವೆ. ಇದು ಮುಂದುವರಿದರೆ, ಮುಂದೆ ಸೇತುವೆ ಕಳಚಿ ಬೀಳುವ ಅಪಾಯವಿದೆ.

ಶತಮಾನದ ಸಂಪರ್ಕ: ಆಗಿನ ಮೈಸೂರು ರಾಜ್ಯದ ಕೊನೆಯ ಊರೆಂದರೆ ಹರಿಹರ. ಹರಿಹರದ ನದಿ ದಾಟಿದರೆ (ಈಗಿನ ರಾಣೆಬೆನ್ನೂರು ತಾಲ್ಲೂಕು ಪ್ರದೇಶ) ಆಗಿನ ಬಾಂಬೆ ರಾಜ್ಯದ ಪ್ರದೇಶ ಆರಂಭವಾಗುತ್ತದೆ. ಈ ಎರಡೂ ರಾಜ್ಯಗಳ ನಡುವೆ ವಾಹನ ಸಂಚಾರಕ್ಕೆ ಮೈಸೂರು ಸಂಸ್ಥಾನದಿಂದ 1886ರಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ಹೊಸ ಸೇತುವೆ ನಿರ್ಮಿಸುವ ಮುನ್ನ, ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಈ ಸೇತುವೆ ಇತ್ತು. ಈಗ ಈ ಹೆದ್ದಾರಿಯನ್ನು ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯನ್ನಾಗಿ

ಪರಿವರ್ತಿಸಲಾಗಿದೆ.

ವಿನ್ಯಾಸ: ಅರ್ಧ ಚಂದ್ರಾಕಾರಾದ 16 ಕಮಾನುಗಳಿರುವ, 9 ಮೀಟರ್ ಅಗಲದ, 316 ಮೀಟರ್ ಉದ್ದದ ಸೇತುವೆ ಇದಾಗಿದೆ. ಸೈಜು ಕಲ್ಲು ಹಾಗೂ ಗಾರೆಯಿಂದ ನಿರ್ಮಿಸಿದ ಈ ಸೇತುವೆಯ 2 ಕಮಾನುಗಳು ಶಿಥಿಲಗೊಂಡು ಕಳಚಿದ್ದರಿಂದ 1925ರಲ್ಲಿ ಅವುಗಳನ್ನು ಮರು ನಿರ್ಮಾಣ ಮಾಡಲಾಗಿತ್ತು.

ಅಲ್ಲಿಂದ 1995ರವರೆಗೂ ಈ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವಿತ್ತು. ಶಿಥಿಲಗೊಂಡಿದೆ ಎಂಬ ಕಾರಣಕ್ಕೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಯಿತು. ತಾಲ್ಲೂಕಿನ ಹಲಸಬಾಳು, ಕೊಡಿಯಾಲ ಹೊಸಪೇಟೆ ಮಧ್ಯೆ ನಿರ್ಮಿಸಿದ

ನೂತನ ಸೇತುವೆಯ ಮೂಲಕ ಭಾರಿ ವಾಹನಗಳ ಸಂಚಾರ ಆರಂಭಿಸಲಾಯಿತು.

ಈಗಲೂ ಸೇವೆ ನೀಡುತ್ತಿದೆ: ಈ ಸೇತುವೆ ಮೇಲೆ ಈಗಲೂ ಕಾರು, ಆಟೊ, ಬೈಕ್‌ನಂತಹ ಲಘು ವಾಹನಗಳ ಸಂಚಾರವಿದೆ. ಬೆಳಿಗ್ಗೆ–ಸಂಜೆ ವಾಯುವಿಹಾರ, ನದಿ ವೀಕ್ಷಣೆ ಮಾಡಲು ಇದು ಪ್ರಶಸ್ತವಾಗಿದೆ. ನಗರಕ್ಕೆ ನೀರು ಪೂರೈಸುವ ಪೈಪ್‌ಲೈನ್ ಈ ಸೇತುವೆಯನ್ನೇ ಆಶ್ರಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT