ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಸಿಡಿಲು ಬಡಿದು ಇಬ್ಬರು ಯುವಕರ ಸಾವು

ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಅವಘಡ
Last Updated 27 ಮೇ 2019, 7:34 IST
ಅಕ್ಷರ ಗಾತ್ರ

ಹರಪನಹಳ್ಳಿ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಸೋಮವಾರ ಬೆಳಗಿನಜಾವ ಸಿಡಿಲು ಬಡಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಜಿಗಟೇರಿ ಗ್ರಾಮದ ಬಂಗಿ ಅರವಿಂದ (19) ಹಾಗೂ ಬಳ್ಳಾರಿ ಕಿರಣ (18) ಮೃತರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಚಿಗಟೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಬದು ನಿರ್ಮಾಣ ಕೆಲಸಕ್ಕೆ ತೆರಳಿಸಿದ್ದಾಗ ಸಿಡಿಲು ಬಡಿದಿದೆ. ಘಟನೆಯಲ್ಲಿ ಕಿರಣ ಅವರ ತಂದೆ ಈರಪ್ಪ (48) ಹಾಗೂ ಅರವಿಂದ ಅವರ ಸಹೋದರ ಉಪೇಂದ್ರ (22) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರವಿಂದ ತಂದೆ ಅಶೋಕ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ಕಿರಣ ಅವರ ಸಹೋದರಿ ಮಗ. ಬದು ನಿರ್ಮಾಣ ಕೆಲಸಕ್ಕೆ ಗ್ರಾಮದ 60ಕ್ಕೂ ಹೆಚ್ಚು ಜನ ಬೆಳ್ಳಿಗ್ಗೆ 5 ಗಂಟೆಗೆ ತೆರಳಿದ್ದರು. ಗುಡುಗು-ಮಿಂಚು ಸಮೇತ ಮಳೆ ಸುರಿಯಲಾರಂಭಿಸಿದಾಗ ಕೂಲಿಕಾರರು ರಸ್ತೆ ಬಳಿ ತೆರಳಿದ್ದರು. ಆದರೆ, ಕಿರಣ ಮತ್ತು ಅರವಿಂದ ಮರವೊಂದರ ಆಶ್ರಯ ಪಡೆದಿದ್ದರು. ‘ಮರದ ಕೆಳಗೆ ನಿಲ್ಲಬೇಡಿ, ರಸ್ತೆ ಕಡೆ ಹೋಗೋಣ’ ಎಂದು ಈರಪ್ಪ ಹಾಗೂ ಉಪೇಂದ್ರ ಅವರಿಬ್ಬರನ್ನು ಕರೆದುಕೊಂಡು ಬರಲು ಹೋದಾಗ ಸಿಡಿಲು ಅಪ್ಪಳಿಸಿದೆ.

ಸ್ಥಳಕ್ಕೆ ಶಾಸಕ ಜಿ. ಕರುಣಾಕರ ರೆಡ್ಡಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ‘ಸರ್ಕಾರದಿಂದ ತಕ್ಷಣವೇ ₹ 5 ಲಕ್ಷ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಗಾಯಗೊಂಡವರಿಗೂ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಮತಾ ಹೊಸಗೌಡರ, ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಮಂಜುನಾಥ ಉತ್ತಂಗಿ, ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಸಹಾಯಕ ಕೃಷಿ ನಿರ್ದೇಶಕ ನಾಗರಾಜ ಸಕ್ರೇಗೌಡರ, ಉಪ ತಹಶೀಲ್ದಾರ ಚಂದ್ರಶೇಖರ, ಚಿಗಟೇರಿ ಹೋಬಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುತ್ತಗಿ ಜಂಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT