ಬುಧವಾರ, ಮೇ 25, 2022
29 °C
ವಿಶೇಷ ತರಬೇತಿ ಶಿಬಿರದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ

ಸಹಕಾರ ಸಂಘದಲ್ಲಿ ಪಾರದರ್ಶಕತೆ ಇರಲಿ: ಎನ್‌.ಎ. ಮುರುಗೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಯಾವುದೇ ಸಹಕಾರ ಸಂಘಗಳು ಯಶಸ್ವಿಯಾಗಿ ನಡೆಯಲು ಅಲ್ಲಿನ ಅಧ್ಯಕ್ಷರು, ಕಾರ್ಯದರ್ಶಿ, ವ್ಯವಸ್ಥಾಪಕರಲ್ಲಿ ಪಾರದರ್ಶಕತೆ, ನಿಷ್ಠುರತೆ, ಪ್ರಾಮಾಣಿಕತೆ ಇರಬೇಕು ಎಂದು ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎನ್‌.ಎ. ಮುರುಗೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ ದಾವಣಗೆರೆ ಹಾಗೂ ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ನಗರದ ಜನತಾ ಬಜಾರ್ ಸಭಾಂಗಣದಲ್ಲಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಹಕಾರ ಸಂಘದಲ್ಲಿನ ಆಡಳಿತ ಮಂಡಳಿ ಮತ್ತು ಕಾರ್ಯದರ್ಶಿಗಳ ನಿರ್ಲಕ್ಷ್ಯದಿಂದ ಸಾಲ ವಸೂಲಾತಿ ಆಗುತ್ತಿಲ್ಲ. ಇದರಿಂದ ಅವು ಮುಚ್ಚುವ ಹಂತಕ್ಕೆ ತಲುಪಿವೆ. ಕಾಲ ಕಾಲಕ್ಕೆ ಲೆಕ್ಕ ಪರಿಶೋಧನೆ ನಡೆಸಿ, ಪರಿವೀಕ್ಷಣೆ ಮಾಡಿಸಬೇಕು. ಸಾಲ ಪಡೆಯವ ವ್ಯಕ್ತಿಯಿಂದ ಭದ್ರತೆ ಪಡೆಯದೇ ಸಾಲ ನೀಡಬೇಡಿ’ ಎಂದು ಸಲಹೆ ನೀಡಿದರು.

ಸಂಘದ ಸದಸ್ಯರೊಂದಿಗೆ ಪ್ರೀತಿಯಿಂದ ಬೆರೆತರೆ ಮಾತ್ರ ವಹಿವಾಟು ಸುಗಮವಾಗಿ ನಡೆಯುತ್ತವೆ. ಸಾಲ ವಿಂಗಡಣೆ, ಸಾಲ ವಸೂಲಾತಿಯಲ್ಲಿ ನಿಷ್ಠುರತೆಯಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಸಂಘಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತದೆ ಎಂದರು.

ಸಹಕಾರ ಸಂಘಗಳ ಇಲಾಖೆಯ ಲೆಕ್ಕ ಪರಿಶೋಧನೆ ಇಲಾಖೆಯ ಉಪ ನಿರ್ದೇಶಕ ಕೆ. ಮಹೇಶ್ವರಪ್ಪ, ‘ದಾವಣಗೆರೆ ಜಿಲ್ಲೆಯಲ್ಲಿ 1176 ಕಾರ್ಯನಿರತ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ 10 ವೇತನದಾರರ ಪತ್ತಿನ ಸಹಕಾರ ಸಂಘಗಳು, 77 ಇತರೆ ಪತ್ತಿನ ಸಹಕಾರ ಸಂಘಗಳು ಇದ್ದು, ವೇತನದಾರರ 3 ಹಾಗೂ 44 ಸಂಘಗಳು ಮಾತ್ರ ವಾರ್ಷಿಕ ಲೆಕ್ಕ ಪರಿಶೋಧನೆ ಮಾಡಿಸಿವೆ. ಇನ್ನುಳಿದ ಸಹಕಾರ ಸಂಘಗಳು ಕೂಡಲೇ ಕಚೇರಿಯನ್ನು ಸಂಪರ್ಕಿಸಿ ಲೆಕ್ಕ ಪರಿಶೋಧನೆ ಮಾಡಿಸಬೇಕು’ ಎಂದು ಸೂಚಿಸಿದರು.

ಪತ್ತಿನ ಸಹಕಾರ ಸಂಘಗಳು ಸೂಕ್ಷ್ಮ ವಲಯ ಹಾಗೂ ಸೂಕ್ಷ್ಮ ವರ್ಗದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದಿಂದ ಯಾವುದೇ ಸಬ್ಸಿಡಿ, ಸಹಕಾರವಾಗಲಿ ಇಲ್ಲ. ಠೇವಣಿದಾರರ ಠೇವಣಿ ಮೇಲೆ ನಡೆಯುತ್ತಿವೆ. ಮರುಪಾವತಿ ಮಾಡುವ ಸದಸ್ಯರಿಗೆ ಮಾತ್ರ ಸಾಲ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್‍ನ ನಿದೇರ್ಶಕ ಸಿರಿಗೆರೆ ರಾಜಣ್ಣ, ‘ದಾವಣಗೆರೆ ಜಿಲ್ಲೆಯಲ್ಲಿ ಸಹಕಾರ ಸಂಘಗಳು ಹೆಚ್ಚಿನ ರೀತಿಯಲ್ಲಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಆದರೂ ಕೆಲವು ಸಂಘಗಳು ಮಾತ್ರ ಲಾಭದಲ್ಲಿ ನಡೆಯುತ್ತಿವೆ. ಇದಕ್ಕೆ ಆಡಳಿತ ಮಂಡಳಿಯ ವೈಫಲ್ಯವೋ ಅಥವಾ ಕಾರ್ಯದರ್ಶಿ ಹಾಗೂ ಸಿಬ್ಬಂದಿ ನಿರ್ಲಕ್ಷವೋ ಎಂಬುದನ್ನು ತಿಳಿದು ಸಹಕಾರ ಸಂಘಗಳನ್ನು ನಡೆಸಬೇಕಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಜಿ. ಶ್ರೀನಿವಾಸಮೂರ್ತಿ, ಎಸ್.ಜಿ. ಕುಲಕರ್ಣಿ, ಜಿ.ಎಸ್. ಸುರೇಂದ್ರ, ಶೇಖರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು