ಸೋಮವಾರ, ಏಪ್ರಿಲ್ 19, 2021
29 °C
ನೂತನ ಬಸ್‌ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಸಾರಿಗೆ ಸಿಬ್ಬಂದಿ ಬೀದಿಗೆ ಬೀಳಲು ಬಿಡಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೆಎಸ್‌ಆರ್‌ಟಿಸಿ ನಷ್ಟದಲ್ಲಿದೆ. ಎಲ್ಲಿ ಮುಚ್ಚಿ ಹೋಗುತ್ತದೋ ಎಂಬ ಭೀತಿ ಸಿಬ್ಬಂದಿಯಲ್ಲಿದೆ ಕೆಎಸ್‌ಆರ್‌ಟಿಸಿಯನ್ನು ಮತ್ತೆ ಲಾಭದತ್ತ ತರಲು ನನ್ನದೇ ಆದ ಕನಸುಗಳಿವೆ. ನಾಲ್ಕು ವಿಭಾಗಗಳನ್ನು ಕೂಡ ಲಾಭ ಗಳಿಸುವಂತೆ ಮಾಡುತ್ತೇನೆ. ಸಿಬ್ಬಂದಿಯನ್ನು ಬೀದಿಗೆ ಬೀಳಲು ಬಿಡುವುದಿಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಎಸ್‌. ಸವದಿ ಹೇಳಿದರು.

ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪುನರ್‌ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಹೈಸ್ಕೂಲ್‌ ಫೀಲ್ಡ್‌ನಲ್ಲಿ ತಾತ್ಕಾಲಿಕ ಬಸ್‌ ನಿಲ್ದಾಣ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೊರೊನಾ ಕಾಲದಲ್ಲಿ ಸುಮಾರು ₹ 2 ಸಾವಿರ ಕೋಟಿ ನಷ್ಟ ಉಂಟಾಯಿತು. ಹಿಂದಿನ ನಷ್ಟವೆಲ್ಲ ಸೇರಿ ₹ 4 ಸಾವಿರ ಕೋಟಿ ನಷ್ಟ ಉಂಟಾಗಿದೆ. ನಿಗಮ ಅಭಿವೃದ್ಧಿ ಕಡೆ ಸಾಗಲಿದೆ. ರಾಜ್ಯಕ್ಕೆ ಎಲೆಕ್ಟ್ರಿಕಲ್‌ ಬಸ್‌ಗಳು ಬಂದಾಗ ಅದನ್ನು ಓಡಿಸಲು, ನಿರ್ವಹಿಲಸಲು ನಮ್ಮ ಸಿಬ್ಬಂದಿ ತಯಾರಾಗಬೇಕು. ಅದಕ್ಕೆ ಹೊಳಲ್ಕೆರೆ ಸಹಿತ ರಾಜ್ಯದ ನಾಲ್ಕಾರು ಕಡೆಗಳಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಿ, ‘ರಾಜ್ಯಕ್ಕೇ ಮಾದರಿಯಾಗುವ ಬಸ್‌ನಿಲ್ದಾಣ ದಾವಣಗೆರೆಯಲ್ಲಿ ನಿರ್ಮಾಣವಾಗಬೇಕು. ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳದೇ ನಿಗದಿತ ಎರಡು ವರ್ಷಗಳಲ್ಲಿ ಬಸ್‌ನಿಲ್ದಾಣ ಕಾಮಗಾರಿಯನ್ನು ಗುತ್ತಿಗೆದಾರರು ಮುಗಿಸಬೇಕು’ ಎಂದು ಸಲಹೆ ನೀಡಿದರು.

ಸಂಸದರಾದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ನಗರವೇ ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್‌ ಆಗುವಾಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕೂಡ ಸ್ಮಾರ್ಟ್‌ ಆಗಬೇಕು ಎಂಬುದು ನಮ್ಮ ಯೋಚನೆ. ಅದಕ್ಕಾಗಿ ಸಾರಿಗೆ ಇಲಾಖೆಯಿಂದ ₹ 30 ಕೋಟಿ ಹಾಗೂ ಸ್ಮಾರ್ಟ್‌ಸಿಟಿ ಯೋಜನೆಯಡಿ ₹ 90 ಕೋಟಿ ಸೇರಿಸಿ ಈ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಶಾಸಕ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ.ಲಿಂಗಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ಸಾರಿಗೆ ಮಂಡಳಿ ನಿರ್ದೇಶಕರಾದ ರಾಜು, ಆರುಂಡಿ ನಾಗರಾಜ್, ರುದ್ರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಎಎಸ್‍ಪಿ ರಾಜೀವ್, ಮುಖ್ಯ ಎಂಜಿನಿಯರ್ ಜಗದೀಶ್ ಚಂದ್ರ ಅವರೂ ಇದ್ದರು.

ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಯೋಜನೆಯ ವಿವರ ನೀಡಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್‌.ಹೆಬ್ಬಾಳ್‌ ಸ್ವಾಗತಿಸಿದರು. ಮಂಜುನಾಥ್‌ ವಂದಿಸಿದರು.

‘ಇಂಧನ ಉಳಿಸಿದರೆ 11 ಗ್ರಾಂ ಚಿನ್ನ’
ಐದು ವರ್ಷ ಯಾವುದೇ ಅಪಘಾತ ಮತ್ತು ಅಪರಾಧ ನಡೆಸದೇ ಉತ್ತಮ ಕಾರ್ಯ ನಡೆಸಿದ 27 ಮಂದಿ ಚಾಲಕರು ಮತ್ತು ನಿರ್ವಾಹಕರನ್ನು ಇಂದು ಬೆಳ್ಳಿ ಪದಕ ನೀಡಿ ಗೌರವಿಸಲಾಗಿದೆ. ಇದೇ ರೀತಿ ಪ್ರತಿ ಲೀಟರ್‌ ಡೀಸೆಲ್‌ಗೆ ಅತಿ ಹೆಚ್ಚು ದೂರ ಬಸ್‌ ಓಡಿಸುವವರಿಗೆ ವಿಭಾಗಕ್ಕೆ ಒಬ್ಬರಂತೆ ₹ 11 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಸಚಿವ ಲಕ್ಷ್ಮಣ ಎಸ್‌. ಸವದಿ ತಿಳಿಸಿದರು.

ಬಸ್‌ ದರ 2014ರಿಂದ ಹೆಚ್ಚಳವಾಗಿದೆ. ಡೀಸೆಲ್‌, ಟೈರ್, ವೇತನ ಸಹಿತ ಎಲ್ಲವೂ ಹೆಚ್ಚಾಗಿ, ಆದಾಯ ಹೆಚ್ಚಾಗದೇ ಇದ್ದರೆ ನಷ್ಟವಾಗದೇ ಇರುವುದಿಲ್ಲ. ಅದಕ್ಕಾಗಿ ದರ ಹೆಚ್ಚಿಸುವ ಬಗ್ಗೆ ಚಿಂತನೆ ಇದೆ ಎಂದು ಹೇಳಿದರು.

‘ನಿಗದಿತ ಸಮಯದಲ್ಲಿ ಮುಗಿಸಿದರೆ ಒಂದು ತೊಲ ಬಂಗಾರ’
ನಿಗದಿತ ಎರಡು ವರ್ಷಗಳ ಒಳಗೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಕಾಮಗಾರಿ ಮುಗಿಸಿದರೆ ಒಂದು ತೊಲ ಬಂಗಾರ ನೀಡುವುದಾಗಿ ಶಾಸಕ ಎಸ್‌.ಎ. ರವೀಂದ್ರನಾಥ್‌ ಘೋಷಿಸಿದರು.

ಸ್ಮಾರ್ಟ್‌ಸಿಟಿ ಕೆಲಸಗಳು ಯಾವುವೂ ವೇಗವಾಗಿ ನಡೆಯುತ್ತಿಲ್ಲ. ರಸ್ತೆಗಳನ್ನು ಅಗೆದು ಹಾಕಿದ ಮೇಲೆ ವರ್ಷವಾದರೂ ಅತ್ತ ಸುಳಿಯುತ್ತಿಲ್ಲ. ಈ ಕಾಮಗಾರಿ ಹಾಗಾಗದಿರಲಿ ಎಂದು ಹಾರೈಸಿದರು.

ಚಿತ್ರದುರ್ಗದ ಉಸ್ತುವಾರಿ ಸಚಿವರ ಬಗ್ಗೆ ಅಸಮಾಧಾನ
ದಾವಣಗೆರೆಯ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ನಿರಂತರವಾಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಅವರು ಚಿತ್ರದುರ್ಗಕ್ಕೆ ಉಸ್ತುವಾರಿ ಸಚಿವರಾಗಿದ್ದರೆ ಒಳ್ಳೆಯದಿತ್ತು. ಯಾಕೆಂದರೆ ಚಿತ್ರದುರ್ಗದಲ್ಲಿ ಉಸ್ತುವಾರಿ ಸಚಿವರು ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದಂದು ಬಾವುಟ ಹಾರಿಸಲು ಮಾತ್ರ ಬಂದು ಹೋಗುತ್ತಿದ್ದಾರೆ ಎಂದು ಹೊಳಲ್ಕೆರೆಯ ಶಾಸಕೂ ಆಗಿರುವ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ. ಚಂದ್ರ‍ಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನೂತನ ಬಸ್‌ನಿಲ್ದಾಣದಲ್ಲಿ ಏನಿರುತ್ತವೆ?
6 ಎಕರೆ 13 ಗುಂಟೆಯಲ್ಲಿ ಬಸ್‌ನಿಲ್ದಾಣ ನಿರ್ಮಾಣಗೊಳ್ಳಲಿದೆ.

ಬೇಸ್‌ಮೆಂಟ್‌ ಫ್ಲೋರ್‌, ಗ್ರೌಂಡ್‌ಫ್ಲೋರ್‌, ಮಾಜಿಂಗ್‌ ಫ್ಲೋರ್‌, ಮೊದಲನೇ, ಎರಡನೇ, ಮೂರನೇ ಮಹಡಿ ಇರಲಿದೆ.

46 ಫ್ಲಾಟ್‌ಫಾರ್ಮ್‌ಗಳು ನಿರ್ಮಾಣಗೊಳ್ಳಲಿವೆ.

ಬಸ್‌ನಿಲ್ದಾಣಾಧಿಕಾರಿ ಕೊಠಡಿ, ಸಂಚಾರ ನಿಯಂತ್ರಕರ ಕೊಠಡಿ, ವಿಚಾರಣಾ ಕೊಠಡಿ, ಟಿಕೆಟ್‌ಬುಕ್ಕಿಂಗ್‌ ಕೊಠಡಿ, ಪಾಸ್‌ ವಿತರಣಾ ಕೊಠಡಿ ಇರಲಿದೆ.

ಮಹಿಳಾ ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿ, ಮಹಿಳೆಯರು, ಪುರುಷರು, ಅಂಗವಿಕಲರಿಗೆ ಶೌಚಾಲಯ ನಿರ್ಮಾಣಗೊಳ್ಳಲಿದೆ.

ಉಪಾಹಾರ ಗೃಹ, ಭದ್ರತಾ ಕೊಠಡಿ, ಶಾ‍ಪಿಂಗ್‌ ಮಾಲ್‌, ಸೋಲಾರ್‌ ಸೌಲಭ್ಯ, ಪಾರ್ಕಿಂಗ್‌ ವ್ಯವಸ್ಥೆ, ಎಲೆಕ್ಟ್ರಿಕಲ್‌ ವಾಹನ ಚಾರ್ಜಿಂಗ್‌ ಪಾಯಿಂಟ್‌ ಬರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.