ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮ್ಕೋಸ್: ₹ 11.26 ಕೋಟಿ ನಿವ್ವಳ ಲಾಭ

ವಾರ್ಷಿಕ ₹ 857 ಕೋಟಿ ಅಡಿಕೆ ವಹಿವಾಟು
Last Updated 24 ಸೆಪ್ಟೆಂಬರ್ 2022, 4:32 IST
ಅಕ್ಷರ ಗಾತ್ರ

ಚನ್ನಗಿರಿ: ‘ಅಡಿಕೆ ಬೆಳೆಗಾರರು, ರೈತರಿಂದ ಸ್ಥಾಪಿತಗೊಂಡ ತುಮ್ಕೋಸ್ 38 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡುವುದು ಸಂಘದ ಮುಖ್ಯ ಧ್ಯೇಯವಾಗಿದೆ. 2021-22 ನೇ ಸಾಲಿನಲ್ಲಿ ₹ 857 ಕೋಟಿ ಅಡಿಕೆ ವಹಿವಾಟು ನಡೆಸಿ, ₹ 11.26 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ತಿಳಿಸಿದರು.

ಪಟ್ಟಣದ ತುಮ್ಕೋಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘ಸಂಘವು ಕೇವಲ ಅಡಿಕೆ ವಹಿವಾಟನ್ನಷ್ಟೇ ಅಲ್ಲ, ರೈತರಿಗೆ ಸುಲಭ ದರದಲ್ಲಿ ರಸಗೊಬ್ಬರ, ಕೃಷಿಗೆ ಸಂಬಂಧಿಸಿದ ವಸ್ತುಗಳ ಮಾರಾಟ, ಪೆಟ್ರೋಲ್ ಬಂಕ್, ಪೇಂಟ್ ಇನ್ನಿತರ ವಸ್ತುಗಳ ಮಾರಾಟ, ಸೂಪರ್ ಮಾರುಕಟ್ಟೆಗಳನ್ನು ಮಾಡಲಾಗುತ್ತಿದೆ. ಈ ಸಾಲಿನಲ್ಲಿ 18,132 ಕ್ವಿಂಟಲ್ ಯೂರಿಯಾ, 15,000 ಕ್ವಿಂಟಲ್ ಡಿಎಪಿ ಹಾಗೂ 6,534 ಕ್ವಿಂಟಲ್ 10.26.26 ರಸಗೊಬ್ಬರ ಸೇರಿ ಒಟ್ಟು 40,666 ಕ್ವಿಂಟಲ್ ರಸಗೊಬ್ಬರವನ್ನು ಮಾರಾಟ ಮಾಡಲಾಗಿದೆ. ಸಂಘದ ಸದಸ್ಯರಿಗೆ ಇದುವರೆಗೆ ₹ 296 ಕೋಟಿ ಸಾಲ ವಿತರಣೆ ಮಾಡಿದ್ದು, ₹ 150 ಕೋಟಿ ಆಪದ್ಧನ ನಿಧಿಯನ್ನು ಕೂಡ ಇಡಲಾಗಿದೆ’ ಎಂದರು.

‘ದೇಶದಲ್ಲಿ ಕಾನೂನು ಬದ್ಧವಾಗಿ ಹೊರ ದೇಶಗಳಿಂದ 68,000 ಟನ್ ಅಡಿಕೆ ಆಮದು ಆಗುತ್ತಿದೆ. ಆಮದು ಅಡಿಕೆಯ ಮೇಲಿನ ಸುಂಕವನ್ನು
₹ 360ಕ್ಕೆ ಹೆಚ್ಚಿಸಲು ಹಾಗೂ ಜತೆಗೆ ಅಕ್ರಮವಾಗಿ ದೇಶಕ್ಕೆ ಬರುತ್ತಿರುವ ಅಡಿಕೆಯನ್ನು ನಿಯಂತ್ರಣ ಮಾಡಬೇಕು ಎಂದು ಕೇಂದ್ರದ ಕೃಷಿ ಸಚಿವ ಹಾಗೂ ಹಣಹಾಸು ಸಚಿವರಿಗೆ ಮನವಿಯನ್ನು ಮಾಡಲಾಗಿದೆ. ವೈಯಕ್ತಿಕ ವಿಮೆಯನ್ನು ₹ 3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ರೈತರಿಗೆ ಅಗತ್ಯವಾದ ಕೃಷಿ ಗುರುತಿನ ಚೀಟಿಗಳನ್ನು ಸಂಘದಿಂದಲೇ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಶಾಲೆ ಕಾಲೇಜುಗಳಿಗೆ ಹಾನಿಯಾಗಿದ್ದು, ತುಮ್ಕೋಸ್‌ನಿಂದ ₹ 35 ಲಕ್ಷ ವೆಚ್ಚದಲ್ಲಿ ಮಡಿಕೇರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ 2 ಬೋಧನಾ ಕೊಠಡಿಗಳನ್ನು ನಿರ್ಮಿಸಿ ಕೊಡಲಾಗಿದೆ’ ಎಂದು ತಿಳಿಸಿದರು.

ನಿರ್ದೇಶಕರಾದ ಎಚ್.ಎಸ್. ಶಿವಕುಮಾರ್, ಟಿ.ವಿ. ರಾಜು ಪಟೇಲ್, ಸಂತೋಷ್, ಎಂ.ಸಿ. ದೇವರಾಜ್, ಜಿ.ಸಿ. ಶಿವಕುಮಾರ್, ಜಿ.ಆರ್. ಶಿವಕುಮಾರ್, ಮಲ್ಲಪ್ಪ, ಎ.ಎಂ. ಚಂದ್ರಶೇಖರ್, ಆರ್. ಕೆಂಚಪ್ಪ, ಎನ್. ಗಂಗಾಧರ್, ರಮೇಶ್ ನಾಯ್ಕ, ದೇವೇಂದ್ರಪ್ಪ, ಆರ್. ಪಾರ್ವತಮ್ಮ ನಟರಾಜ್, ಜಿ.ಆರ್. ಪ್ರೇಮಾ ಲೋಕೇಶ್, ವ್ಯವಸ್ಥಾಪಕ ನಿರ್ದೇಶಕ ಎನ್.ಪಿ. ಮಧು ಇದ್ದರು. ಈ ಸಂದರ್ಭದಲ್ಲಿ ಅಡಿಕೆ ಸುಲಿಯುವ ಯಂತ್ರ ಹಾಗೂ ಡ್ರಯರ್ ಅವಿಷ್ಕಾರ ಮಾಡಿದ ಹೊನ್ನೆಮರದಹಳ್ಳಿ ಗ್ರಾಮದ ಬಿ.ಆರ್. ರಘು, ಪಿಯು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು
ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT