ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ತಡೆಗಟ್ಟಲು ಮಕ್ಕಳಿಗೆ ಲಸಿಕೆ

5 ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಶಾಸಕ ರವೀಂದ್ರನಾಥ್
Last Updated 4 ಜನವರಿ 2022, 5:32 IST
ಅಕ್ಷರ ಗಾತ್ರ

ದಾವಣಗೆರೆ: ಒಮೈಕ್ರಾನ್‌ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿನ 15 ವರ್ಷ ದಾಟಿದ ಎಲ್ಲ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಸಲಹೆ ನೀಡಿದರು.

ಸೋಮವಾರ ನಗರದ ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 15ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೋವಿಡ್ ಮತ್ತು ಓಮೈಕ್ರಾನ್ ತಡೆಗಟ್ಟುವ ಉದ್ದೇಶದಿಂದಲೇ ಎಲ್ಲ ಕಿರಿಯ ವಯಸ್ಸಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಅಭಿಯಾನ ರೂಪಿಸಲಾಗಿದೆ. ಕೇರಳ, ಮಹಾರಾಷ್ಟ್ರ, ಗೋವಾದಲ್ಲಿ ಓಮೈಕ್ರಾನ್ ಹೆಚ್ಚುತ್ತಿದ್ದು, ಎಲ್ಲರೂ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಜಿಲ್ಲೆಯಲ್ಲಿ 15ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳು 88 ಸಾವಿರ ಮಂದಿ ಇದ್ದಾರೆ. ಸದ್ಯ 65 ಸಾವಿರ ಡೋಸ್ ಲಸಿಕೆ ಲಭ್ಯವಿದೆ. ತಾಲ್ಲೂಕು ಕೇಂದ್ರಗಳು ಒಳಗೊಂಡಂತೆ 503 ಕೇಂದ್ರಗಳಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಮೊದಲ ಡೋಸ್ ನೀಡಿದ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುವುದು’ ಎಂದರು.

‘ಲಸಿಕೆ ಪಡೆಯಲು ವಿದ್ಯಾರ್ಥಿಗಳು ಸ್ವ-ಪ್ರೇರಣೆಯಿಂದ ಮುಂದೆ ಬರಬೇಕು. ಯಾವುದೇ ವಿದ್ಯಾರ್ಥಿ ಅಥವಾ ಪೋಷಕರು ಈ ಬಗ್ಗೆ ಆತಂಕಪಡಬೇಕಾಗಿಲ್ಲ. ಲಸಿಕೆ ಬಹಳ ಸುರಕ್ಷಿತವಾಗಿದ್ದು, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈಗಾಗಲೇ ಮೊದಲ ಡೋಸ್ ಅನ್ನು ಶೇ 99ರಷ್ಟು ಹಾಗೂ ಎರಡನೇ ಡೋಸ್ ಅನ್ನು ಶೇ 80ರಷ್ಟು ಮಂದಿ ಪಡೆದಿದ್ದಾರೆ. ಶೇ 100ರಷ್ಟು ಲಸಿಕೆ ನೀಡುವುದರ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡುವುದರ ಜೊತೆಗೆ ಜನರನ್ನು ರಕ್ಷಿಸಲು ಜಿಲ್ಲಾಡಳಿತ ಕಟ್ಟಿಬದ್ಧವಾಗಿದೆ’ ಎಂದು ತಿಳಿಸಿದರು.

‘ಕೋವಿಡ್ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಇಳಿಮುಖವಾಗಿದೆ ಎಂಬ ಕಾರಣಕ್ಕೆ ಜನರು ಮಾಸ್ಕ್ ಮತ್ತು ಅಂತರದ ಬಗ್ಗೆ ಅಲಕ್ಷ್ಯ ಮಾಡಬಾರದು. ನಾಗರಿಕರು ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸಬೇಕು. ದಂಡ ವಿಧಿಸುತ್ತಾರೆಂಬ ಭಯಕ್ಕೆ ಧರಿಸುವ ಬದಲು ಸ್ವ ಇಚ್ಛೆಯಿಂದ ಜಾಗೃತಿ ವಹಿಸಬೇಕು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಮೇಯರ್ ಎಸ್‌.ಟಿ. ವೀರೇಶ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೆ.ಎಸ್‌. ಮೀನಾಕ್ಷಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವರಾಜು ಎಂ., ಮೋತಿ ವೀರಪ್ಪ ಕಾಲೇಜಿನ ಪ್ರಾಚಾರ್ಯ ಪಂಚಾಕ್ಷರಪ್ಪ ಎಸ್., ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇದ್ದರು.

ಶೇ 19.13ರಷ್ಟು ಲಸಿಕೆ

ದಾವಣಗೆರೆ: ಜಿಲ್ಲೆಯಲ್ಲಿ 15 ವರ್ಷ ದಾಟಿದ 88,843 ಮಕ್ಕಳಿದ್ದು ಅದರಲ್ಲಿ 17,000 ಮಕ್ಕಳಿಗೆ ಕೊವಾಕ್ಷಿನ್‌ ಮೊದಲ ಡೋಸ್‌ ಸೋಮವಾರ ನೀಡಲಾಗಿದೆ. ಶೇ 19.13 ಸಾಧನೆಯಾಗಿದೆ. ಉಳಿದವರಿಗೆ ಈ ವಾರದಲ್ಲಿ ನೀಡಲಾಗುವುದು ಎಂದು ಕೋವಿಡ್‌ ಲಸಿಕೆ ಉಸ್ತುವಾರಿ ಆಗಿರುವ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಕೆ.ಎಸ್‌. ಮೀನಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT