ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ರಿಂದ ವೀರಶೈವ–ಲಿಂಗಾಯತ ಮಹಾಸಭಾ ಮಹಾ ಅಧಿವೇಶನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸಹಿತ ಹಲವರು ಭಾಗಿ
Last Updated 5 ಡಿಸೆಂಬರ್ 2022, 20:15 IST
ಅಕ್ಷರ ಗಾತ್ರ

ದಾವಣಗೆರೆ: ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನ ಡಿ. 24ರಿಂದ 26ರವರೆಗೆ ನಡೆಯಲಿದೆ. ಮೂರು ದಿನಗಳ ಈ ಅಧಿವೇಶನದಲ್ಲಿ ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೊನೇ ದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೂಡ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅವರು ಬರುವುದು ಇನ್ನೂ ನಿಶ್ಚಿತವಾಗಿಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1904ರಲ್ಲಿ ಹಾನಗಲ್‌ ಕುಮಾರೇಶ್ವರರು ಸ್ಥಾಪಿಸಿದ ಈ ಮಹಾಸಭಾ ಆರಂಭಗೊಂಡು 118 ವರ್ಷಗಳಾಗಿವೆ. ಇಲ್ಲಿವರೆಗೆ 22 ಮಹಾ ಅಧಿವೇಶನಗಳಾಗಿದ್ದು, ಈ ಬಾರಿ 23ನೇ ಮಹಾ ಅಧಿವೇಶನ ನಡೆಯಲಿದೆ. 1917ರಲ್ಲಿ ದಾವಣಗೆರೆಯಲ್ಲಿ ಅಧಿವೇಶನವಾಗಿತ್ತು. ಇದು ಎರಡನೇಯದ್ದು ಎಂದು ವಿವರಿಸಿದರು.

2011ರಲ್ಲಿ ಸುತ್ತೂರು ಮಠದಲ್ಲಿ ಮಹಾ ಅಧಿವೇಶನವಾಗಿತ್ತು. ಅದರ ನಂತರ ಅಧಿವೇಶನಗಳಾಗಿರಲಿಲ್ಲ. ಎಲ್ಲ ಮಠಾಧೀಶರನ್ನು, ರಾಜಕೀಯ ಮುಖಂಡರನ್ನು, ಸಾಹಿತಿಗಳನ್ನು ಆಹ್ವಾನಿಸಲಾಗಿದೆ. ಕೃಷಿ ಸಮಾವೇಶ, ಯುವಸಮಾವೇಶ, ಮಹಿಳಾ ಸಮಾವೇಶ, ಸದ್ಭಾವನಾ ಸಮಾವೇಶ, ಉದ್ದಿಮೆದಾರರ ಸಮಾವೇಶ, ಕವಿಗೋಷ್ಠಿ, ವಸ್ತುಪ್ರದರ್ಶನ ಹೀಗೆ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

‘ಎಲ್ಲ ಸ್ವಾಮೀಜಿಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತೇವೆ. ಯಾವುದೇ ಒಳಪಂಗಡ ಇರಬಾರದು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ವೀರಶೈವ ಲಿಂಗಾಯತರು ಬೇರೆ ಧರ್ಮಗಳಿಗೆ ಮತಾಂತರಗೊಳ್ಳುತ್ತಿರುವ ಬಗ್ಗೆಯೂ ಚರ್ಚೆಗಳಾಗಿವೆ. ಯಾಕೆ ಮತಾಂತರಗೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದು, ಇಲ್ಲಿಯೇ ಉಳಿಸಿಕೊಳ್ಳಲು ಮನವೊಲಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಹಿತ ಎಲ್ಲ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಗಳಾಗಲಿವೆ. ಮುರುಘಾಮಠದ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಮುಂಬರುವ ಚುನಾವಣೆಗೂ ಈ ಅಧಿವೇಶನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಅಥಣಿ ವೀರಣ್ಣ, ಕೆ. ತಿಪ್ಪಣ್ಣ, ಅಣಬೇರು ರಾಜಣ್ಣ, ಸಚ್ಚಿದಾನಂದ ಮೂರ್ತಿ, ರೇಣುಕಾ, ಪ್ರಭಾಕರ ಕೋರೆ, ಬಾಲ್ಕಿಯ ಶಿವಯೋಗೇಶ್ವರ ಸ್ವಾಮೀಜಿ, ದೇವರಮನಿ ಶಿವಕುಮಾರ್‌, ಮಧುಕುಮಾರ್‌ ಬಸವಾಪಟ್ಟಣ ಸಹಿತ ಅನೇಕರಿದ್ದರು.

ಗಡಿ ವಿವಾದ ಅನಗತ್ಯ: ಖಂಡ್ರೆ

ರಾಜಕೀಯ ಕಾರಣಕ್ಕಾಗಿ ಗಡಿ ವಿವಾದ ಮಾಡಲಾಗುತ್ತಿದೆ. ಕರ್ನಾಟಕದ ಒಂದಿಂಚು ಜಾಗವೂ ಆಚೀಚೆ ಆಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯ‌ಕ್ಷ ಈಶ್ವರ್‌ ಖಂಡ್ರೆ ತಿಳಿಸಿದರು.

ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ಭಾರತದ ಗಡಿಯಲ್ಲಿ ಚೀನಾದವರು ನುಸುಳುತ್ತಿದ್ದಾರೆ. ಅದನ್ನು ತಡೆಯುವುದು ಬಿಟ್ಟು ನಮ್ಮದೇ ನೆಲವನ್ನು ನಮ್ಮದು, ತಮ್ಮದು ಎಂದು ಕಿತ್ತಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಸುಪ್ರೀಂಕೋರ್ಟ್‌ ಇದಕ್ಕೆಲ್ಲ ಅವಕಾಶ ನೀಡಬಾರದು. ಸುಮ್ಮನೆ ಅರ್ಜಿ ಸಲ್ಲಿಸುವವರಿಗೆ ದಂಡ ಹಾಕಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT