ದಾವಣಗೆರೆ: 19ಕ್ಕೆ ವಿಜಯದಶಮಿ ಭವ್ಯ ಶೋಭಾಯಾತ್ರೆ

7
ವಿಶ್ವ ಹಿಂದೂ ಪರಿಷತ್‌ನಿಂದ ದಸರಾ ಮಹೋತ್ಸವ 10ರಿಂದ

ದಾವಣಗೆರೆ: 19ಕ್ಕೆ ವಿಜಯದಶಮಿ ಭವ್ಯ ಶೋಭಾಯಾತ್ರೆ

Published:
Updated:

ದಾವಣಗೆರೆ: ವಿಶ್ವ ಹಿಂದೂ ಪರಿಷತ್‌ ದಾವಣಗೆರೆ ಘಟಕ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಅಕ್ಟೋಬರ್‌ 10ರಿಂದ 19ರವರೆಗೆ ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ವಿಜಯದಶಮಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಹೋತ್ಸವ ಸಮಿತಿ ಅಧ್ಯಕ್ಷ ದೇವರಮನಿ ಶಿವಕುಮಾರ್‌, ‘ಅ. 10ರಂದು ಬೆಳಿಗ್ಗೆ 10ಕ್ಕೆ ನಿಟುವಳ್ಳಿಯ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಪೂರ್ಣಕುಂಭಗಳ ಜತೆಗೆ ಬೀರಲಿಂಗೇಶ್ವರ ದೇವಸ್ಥಾನದ ಮೈದಾನಕ್ಕೆ ಮೆರವಣಿಗೆಯಲ್ಲಿ ದೇವಿ ಮೂರ್ತಿಯನ್ನು ತರಲಾಗುವುದು. ಬಳಿಕ ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ದೇವಿಯ ವಿಗ್ರಹದ ಘಟಸ್ಥಾಪನೆ ನೆರವೇರಿಸಲಿದ್ದಾರೆ. ಪ್ರತಿ ದಿನ ಸಂಜೆ ಮಹಿಳೆಯರಿಂದ ಲಲಿತಾ ಸಹಸ್ರನಾಮ ನಡೆಯಲಿದೆ’ ಎಂದು ತಿಳಿಸಿದರು.

ಅ. 13ರಂದು ಬೆಳಿಗ್ಗೆ 10.30ರಿಂದ ರಾಮ್‌ ಆ್ಯಂಡ್‌ ಕೋ ವೃತ್ತದಿಂದ ‘ಮಹಿಳಾ ಬೈಕ್‌ ಜಾಥಾ’ ಹಮ್ಮಿಕೊಳ್ಳಲಾಗುತ್ತಿದೆ. ಅ. 15ರಂದು ಬೆಳಿಗ್ಗೆ 10.30ರಿಂದ ನಗರದ ಹೈಸ್ಕೂಲ್‌ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಆಟೊ ರ‍್ಯಾಲಿ ನಡೆಸಲಾಗುವುದು. 16ರಂದು ಬೆಳಿಗ್ಗೆ 10.30ಕ್ಕೆ ರಾಮ್‌ ಆ‍್ಯಂಡ್‌ ಕೋ ವೃತ್ತದಿಂದ ಬೈಕ್‌ ಜಾಥಾ ಹಮ್ಮಿಕೊಳ್ಳಲಾಗಿದೆ. 18ರಂದು ಬೆಳಿಗ್ಗೆ 10ರಿಂದ ನಗರದ ದೇವತೆ ದುರ್ಗಾಂಬಿಕಾ ದೇವಸ್ಥಾನದಿಂದ ‘ದುರ್ಗಾ ದೌಡ್‌’ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಅ. 19ರಂದು ಬೆಳಿಗ್ಗೆ 11.30ರಿಂದ ನಗರದ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಿಂದ ಪೂರ್ಣಕುಂಭಗಳೊಂದಿಗೆ 37ನೇ ವರ್ಷದ ಬೃಹತ್‌ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಗರದ ವಿವಿಧೆಡೆ ಸಂಚರಿಸಿ ಶೋಭಾಯಾತ್ರೆಯು ರಾತ್ರಿ ಬೀರಲಿಂಗೇಶ್ವರ ದೇವಸ್ಥಾನದ ಮೈದಾನಕ್ಕೆ ಬರಲಿದೆ. ಅಲ್ಲಿ ಜಿಲ್ಲಾಧಿಕಾರಿ ಅಂಬು ಛೇದನ ನೆರವೇರಿಸಲಿದ್ದಾರೆ. ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತದ ಅಧ್ಯಕ್ಷರಾದ ವಿಜಯಲಕ್ಷ್ಮಿ ದೇಶಮಾನೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್‌. ರಾಜಶೇಖರ್‌, ‘ಮಹಾರಾಷ್ಟ್ರದಿಂದ 100 ಹೆಚ್ಚು ಕಲಾವಿದರು ಒಳಗೊಂಡ ಡೋಲ್‌ ಕಲಾವಿದರನ್ನು ಶೋಭಾಯಾತ್ರೆಗೆ ಕರೆಸುತ್ತಿದ್ದೇವೆ’ ಎಂದರು.

ವಿಎಚ್‌ಪಿ ಮುಖಂಡರಾದ ಎಸ್‌.ಟಿ. ವೀರೇಶ್‌, ವೈ. ಮಲ್ಲೇಶ್‌, ರವೀಂದ್ರ, ರಾಜನಹಳ್ಳಿ ಶಿವಕುಮಾರ್‌, ಸತೀಶ್‌ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !