ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೇಬೆನ್ನೂರು: ‘ಶಕ್ತಿ’ ಯೋಜನೆ ಫಲಾನುಭವಿಗಳ ಸಾಮೂಹಿಕ ಭೋಜನ

ರಾತ್ರಿ ಪ್ರಯಾಣದ ವೇಳೆ ರಸ್ತೆ ಬದಿಯಲ್ಲೇ ಊಟ
ಎಂ.ನಟರಾಜನ್‌
Published 21 ಜೂನ್ 2024, 7:17 IST
Last Updated 21 ಜೂನ್ 2024, 7:17 IST
ಅಕ್ಷರ ಗಾತ್ರ

ಮಲೇಬೆನ್ನೂರು: ಬಳ್ಳಾರಿ, ಹೊಸಪೇಟೆ, ರಾಯಚೂರು, ಕಲಬುರಗಿ, ದಾವಣಗೆರೆ ಮತ್ತಿತರ ಊರುಗಳಿಂದ ಹರಿಹರ, ಶಿವಮೊಗ್ಗ ಮಾರ್ಗವಾಗಿ ಧರ್ಮಸ್ಥಳ, ಮಂಗಳೂರು, ಉಡುಪಿ ಕಡೆಗೆ ರಾತ್ರಿ ತೆರಳುವ ಸಾರಿಗೆ ಸಂಸ್ಥೆಗಳ ಬಸ್‌ಗಳು ಮಾರ್ಗ ಮಧ್ಯೆ ಡಾಬಾಗಳೆದುರು ಊಟಕ್ಕೆ ನಿಲುಗಡೆ ಮಾಡಿದಾಗ ಮಹಿಳಾ ಪ್ರಯಾಣಿಕರು ರಸ್ತೆ ಬದಿಯಲ್ಲೇ ಕುಳಿತು ಸಾಮೂಹಿಕವಾಗಿ ಊಟ ಮಾಡುವ ಸ್ಥಿತಿ ಇದೆ.

ಮಲೇಬೆನ್ನೂರು– ಹರಿಹರ ನಡುವೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ರಾತ್ರಿ ವೇಳೆ ಊಟಕ್ಕೆ ವಿವಿಧ ಡಾಬಾಗಳೆದುರು ನಿಲುಗಡೆ ಮಾಡುತ್ತವೆ.

ಈಚಿನ ದಿಗಳಲ್ಲಿ ‘ಶಕ್ತಿ’ ಯೋಜನೆ ಪರಿಣಾಮ ಮಹಿಳಾ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಲ್ಲಿ ಕಂಡುಬರುತ್ತಾರೆ. ಧರ್ಮಸ್ಥಳ, ಉಡುಪಿ, ಶೃಂಗೇರಿ, ಹೊರನಾಡು, ಕುಕ್ಕೆ, ಕೊಡಚಾದ್ರಿ, ಕೊಲ್ಲೂರು ಮತ್ತಿತರ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಅವರು ಒಂದೆರಡು ದಿನಗಳಿಗಾಗುವಷ್ಟು ಆಹಾರದ ‘ಬುತ್ತಿ’ ಕಟ್ಟಿಕೊಂಡು ಬರುವುದು ವಾಡಿಕೆ.

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಡಾಬಾದಲ್ಲಿ ಬಸ್‌ ನಿಲುಗಡೆ ಮಾಡಿದಾಗ ರಸ್ತೆಬದಿಯಲ್ಲಿ ಅಪಾಯದ ಅರಿವಿಲ್ಲದೆ ಅವರು ಸಾಮೂಹಿಕವಾಗಿ ಊಟ ಮಾಡುವ ದೃಶ್ಯ ನಿತ್ಯವೂ ಕಂಡುಬರುತ್ತಿದೆ.

‘ರಾತ್ರಿ 9ರಿಂದ 11ರೊಳಗೆ 20ಕ್ಕೂ ಹೆಚ್ಚು ಬಸ್‌ಗಳು ಡಾಬಾ ಬಳಿ ಬಂದು ನಿಲ್ಲುತ್ತವೆ. ಅಲ್ಲೆಲ್ಲ ಊಟದ ದರವೂ ದುಬಾರಿ. ಉಳ್ಳವರು ಹೆಚ್ಚು ಹಣ ಕೊಟ್ಟು ಊಟ ಸವಿಯುತ್ತಾರೆ. ಅಲ್ಲದೇ ಉತ್ತರ ಭಾರತ ಶೈಲಿಯ, ಮಸಾಲೆಭರಿತ  ಊಟವೇ ಅಲ್ಲಿ ಸಿಗುತ್ತದೆ. ಸಾಮಾನ್ಯವಾದ, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜನರು ನಿತ್ಯ ಮಾಡುವ ಊಟ ಸಿಗುವುದಿಲ್ಲ’ ಎಂದು ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮಹಿಳಾ ಯಾತ್ರಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಡಾಬಾಗಳಲ್ಲಿ ಮೈದಾ ಹಿಟ್ಟು ಬಳಸಿ ಮಾಡುವ ತಂದೂರಿ ರೊಟ್ಟಿ, ಮಸಾಲೆ ಬಳಸಿದ ಅನ್ನ ತಿಂದರೆ ಆರೋಗ್ಯಕ್ಕೆ ಹಾನಿ, ದರವೂ ದುಬಾರಿ ಎಂಬ ಕಾರಣ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬಂದಿದ್ದೇವೆ’ ಎಂದು ಹಾವೇರಿಯಿಂದ ಬಂದಿದ್ದ ರೇಣುಕಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾತ್ರಿ 9 ಗಂಟೆ ಆಗುತ್ತಿದ್ದಂತೆಯೇ ದೂರದ ಪ್ರಯಾಣಿಕರಿಗಾಗಿ ಊಟಕ್ಕೆ ಬಸ್‌ ನಿಲ್ಲಿಸುತ್ತಾರೆ. ವ್ಯವಸ್ಥೆ ಇಲ್ಲದವರು ಡಾಬಾದೊಳಗೆ ಊಟ ಮಾಡಲಿ. ನಾವಂತೂ ಮನೆಯಿಂದಲೇ ಬುತ್ತಿ ತಂದಿರುತ್ತೇವೆ. ಕಂಡಕ್ಟರ್‌, ಡ್ರೈವರ್‌ ಹಾಗೂ ಕೆಲವು ಪ್ರಯಾಣಿಕರು ಊಟ ಮಾಡಿ ಬರುವುದರೊಳಗೇ ನಾವೂ ಊಟ ಮುಗಿಸುತ್ತೇವೆ. ನಮಗೇನೂ ತೊಂದರೆ ಆಗಿಲ್ಲ. ಮಳೆ ಬಂದರೆ ಬಸ್‌ನಲ್ಲೇ ಊಟ ಮಾಡುತ್ತೇವೆ’ ಎಂದು ಅವರು ಹೇಳಿದರು.

ಮಣ್ಣು, ದೂಳು ತಟ್ಟೆಯಲ್ಲಿ ಬೀಳುತ್ತದೆ. ಮಳೆ ಬರುವಾಗ ನೀರಿನ ಸಿಂಚನ, ಚಿಕ್ಕಪುಟ್ಟ ಕಲ್ಲಿನ ಸಿಡಿತದ ನಡುವೆ ರಸ್ತೆ ಬದಿಯಲ್ಲಿ ಕುಳಿತು ಊಟ ಮಾಡುವ ಪ್ರಯಾಣಿಕರಿಗೆ ಅಪಾಯ ಇದ್ದೇ ಇದೆ. ಆದರೂ ಅದನ್ನು ಲೆಕ್ಕಿಸದೇ ಪ್ರಯಾಣಿಕರು ಊಟಕ್ಕೆ ಕುಳಿತುಕೊಳ್ಳುತ್ತಾರೆ.

ಕೊಟ್ಟೂರು, ಕೂಡ್ಲಿಗಿ, ಜಮಖಂಡಿ, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ ಭಾಗದಿಂದಲೂ ಬರುವ ಬಹುತೇಕ ಬಸ್‌ಗಳು ಡಾಬಾಗಳಲ್ಲಿ ಊಟಕ್ಕೆ ಅರ್ಧಗಂಟೆಗೂ ಹೆಚ್ಚು ಕಾಲ ನಿಲುಗಡೆ ಮಾಡುತ್ತವೆ. ಊಟದ ವೇಳೆ ಈ ಬಸ್‌ ನಿಲುಗಡೆ ಮಾಡುವುದರಿಂದ ಹೊನ್ನಾಳಿ, ಮಲೇಬೆನ್ನೂರು, ಶಿವಮೊಗ್ಗ, ಶಿಕಾರಿಪುರ, ಸಾಗರಕ್ಕೆ ತೆರಳುವ ಪ್ರಯಾಣಿಕರಿಗೆ ವಿಳಂಬವೂ ಆಗುತ್ತಿದೆ.

‘ಮಲೇಬೆನ್ನೂರು ಬಸ್‌ ನಿಲ್ದಾಣದೊಳಗೆ ರಾತ್ರಿ ಬಸ್‌ ಸಂಚಾರ ವಿರಳ. ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಹೋಟೆಲ್‌ಗೆ ಊಟಕ್ಕೆ ನಿಲುಗಡೆ ಮಾಡಿದರೆ ವ್ಯಾಪಾರ ಆಗುತ್ತದೆ. ಸುರಕ್ಷತೆ, ಆರೋಗ್ಯದ ದೃಷ್ಟಿಯಿಂದ ಒಳಿತಾಗುತ್ತದೆ. ಪ್ರಯಾಣಿಕರಿಗೆ ಉತ್ತಮ ಶೌಚಾಲಯವಿದೆ. ಆದರೆ, ಸಾರಿಗೆ ಸಂಸ್ಥೆಗೆ ಈ ಹೋಟೆಲ್‌ ಬಳಸುವ ಮನಸ್ಸಿಲ್ಲ. ಡಾಬಾಗಳ ಬದಿ ನಿಲ್ಲಿಸಲು ಅನುಮತಿ ನೀಡಿದ್ದಾರೆ’ ಎಂದು ನಾಗರಾಜ್‌ ಪಾಳೇಗಾರ್‌ ಹೇಳುತ್ತಾರೆ.

ರಾಜ್ಯ ಸಾರಿಗೆ ಸಂಸ್ಥೆ ವಿವಿಧ ವಿಭಾಗಗಳ ಅಧಿಕಾರಿ ವೃಂದ ಪ್ರಯಾಣಿಕರ ಆರೋಗ್ಯ, ಸುರಕ್ಷತೆ ದೃಷ್ಟಿಯಿಂದ ರಾತ್ರಿ ವೇಳೆ ಡಾಬಾ ಬಳಿ ಬಸ್‌ ನಿಲ್ಲಿಸುವ ಬದಲು ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ಹಾಗೂ ಅಲ್ಲಿನ ಹೋಟೆಲ್‌, ಅಂಗಡಿ ಬಳಸುವಂತೆ ಕ್ರಮ ಜರುಗಿಸಬೇಕಿದೆ ಎಂದು ಪ್ರಯಾಣಿಕರು ಒತ್ತಾಯಿಸುತ್ತಾರೆ.

ಮಲೇಬೆನ್ನೂರು– ಹರಿಹರ ನಡುವೆ ಇರುವ ಡಾಬಾ ಆವರಣದಲ್ಲಿ ನೆಲದ ಮೇಲೆ ಕುಳಿತು ರಾತ್ರಿಯೂಟ ಸವಿಯುತ್ತಿರುವ ಮಹಿಳಾ ಪ್ರಯಾಣಿಕರ ಗುಂಪು
ಮಲೇಬೆನ್ನೂರು– ಹರಿಹರ ನಡುವೆ ಇರುವ ಡಾಬಾ ಆವರಣದಲ್ಲಿ ನೆಲದ ಮೇಲೆ ಕುಳಿತು ರಾತ್ರಿಯೂಟ ಸವಿಯುತ್ತಿರುವ ಮಹಿಳಾ ಪ್ರಯಾಣಿಕರ ಗುಂಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT