ಕಾಯಕಧರ್ಮ ಸಮಾಜೋದ್ಧಾರಕ್ಕೆ ಪೂರಕ

7
ಭಾನುವಳ್ಳಿ ಧರ್ಮಸಭೆಯಲ್ಲಿ ಮುರುಘಾ ಶರಣರು

ಕಾಯಕಧರ್ಮ ಸಮಾಜೋದ್ಧಾರಕ್ಕೆ ಪೂರಕ

Published:
Updated:
Prajavani

ಮಲೇಬೆನ್ನೂರು: ದೈವಿ ಪ್ರಜ್ಞೆಗಿಂತ ಧರ್ಮ ಪ್ರಜ್ಞೆಯನ್ನು ಅಳವಡಿಸಿಕೊಂಡರೆ ದೈನಂದಿನ ಬದುಕು ಜತನಗೊಂಡು ಸಾರ್ಥಕವಾಗುತ್ತದೆ ಎಂದು ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರತಿಪಾದಿಸಿದರು.

ಸಮೀಪದ ಭಾನುವಳ್ಳಿ ಗ್ರಾಮದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಲಕ್ಷ್ಮೀನಾರಾಯಣಸ್ವಾಮಿ ಪುನರ್ ನಿರ್ಮಿತ ದೇವಸ್ಥಾನದ ಉದ್ಘಾಟನೆ ಹಾಗೂ ಸ್ವಾಮಿಯ ಗೋಪುರದ ಕಳಸಾರೋಹಣದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ದೇಹ ಚಲಿಸುವ ದೇವಾಲಯವಾಗಿ, ಮನಸ್ಸು ಮಾತನಾಡುವ ದೇವರಾದರೆ ಅಂತರಾತ್ಮದಲ್ಲಿ ದೈವೀ ಭಾವನೆ ಮೂಡುತ್ತದೆ. ದಾಸೋಹ ಎಂದರೆ ನಿಸ್ವಾರ್ಥ ಸಮಾಜ ಸೇವೆ. ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಸಮಾಜೋದ್ಧಾರ ಸಾಧ್ಯ. ಪ್ರಬಲರು ಅಬಲರ ಮೇಲೆ ದೈಹಿಕ, ಮಾನಸಿಕವಾಗಿ ಪ್ರಹಾರ ಮಾಡಬಾರದು ಎಂದರು.

ರೈತರು ಹೊಲ ಗದ್ದೆ, ಶ್ರಮಿಕ ವರ್ಗ ವಿವಿಧೆಡೆ ಕೆಲಸ ಮಾಡಿ, ದೇಶ ಕಟ್ಟಿದ್ದಾರೆ. ದುಡಿಮೆ ಮಾಡಿದರೆ ಎಂದೂ ಮೋಸವಿಲ್ಲ. ಸೋಮಾರಿಗೆ ಭವಿಷ್ಯವಿಲ್ಲ ಎಂದು ಉದಾಹರಣೆ ನೀಡಿದರು. ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು ನೂತನ ದೇವಾಲಯದ ಕಳಸಾರೋಹಣ ನೆರೆವೇರಿಸಿದರು.

ವಡ್ನಾಳ್ ಸಾವಿತ್ರಿ ಪೀಠದ ಅಷ್ಟೊತ್ತರ ಶಂಕರಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಿ ಎಂದರು.

ದೇವಾಲಯ, ದೇವತೆ ವಿಗ್ರಹ, ವಾಸ್ತು ವಿಜ್ಞಾನ, ನಿರ್ಮಾಣದ ಹಿಂದೆ ವಿಶ್ವಕರ್ಮ ಸಮುದಾಯದ ಶಿಲ್ಪಿಗಳ ವೈಜ್ಞಾನಿಕ, ಧಾರ್ಮಿಕ ಶ್ರಮವಿದೆ. ರೈತರು ರಾಜಕೀಯ ಪಕ್ಷಗಳ ಕಡೆ ಹೋದರೆ ಪಿತೃ ಪಕ್ಷ, ಕೃಷ್ಣ ಪಕ್ಷ ಖಾತ್ರಿ. ಆದ್ದರಿಂದ ರೈತರು ರಾಜಕೀಯದ ಕಡೆಗೆ ಹೋಗಬೇಡಿ’ ಎಂದು ಸಲಹೆ ನೀಡಿದರು.

ಎಸ್.ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಿ.ಪಿ. ಹರೀಶ್, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಕನಕ ಪೀಠದ ನಿರಂಜನಾನಂದಪುರಿ ಶ್ರೀ, ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಸ್ವಾಮೀಜಿ, ವೇಮನ ಪೀಠದ ವೇಮಾನಂದ ಸ್ವಾಮೀಜಿ, ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ, ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಚಿತ್ರದುರ್ಗ ಬಸವರಾಜ ಮಾಚಿದೇವ ಸ್ವಾಮೀಜಿ, ಚಿತ್ರದುರ್ಗ ಮಾದಾರಚನ್ನಯ್ಯ ಸ್ವಾಮೀಜಿ, ಛಲವಾದಿ ಪೀಠದ ಬಸವ ನಾಗಿದೇವ ಸ್ವಾಮೀಜಿ, ಮುಧೋಳ ಕುಂಬಾರ ಬಸವ ಗುಂಡಯ್ಯ ಸ್ವಾಮೀಜಿ, ಮಾಜಿ ಸಚಿವ ರುದ್ರಪ್ಪ ಲಮಾಣಿ ಶುಭ ಕೋರಿದರು.

ಶಿಲ್ಪಿ ರಾಮಾಂಜನೇಯ ಹಾಗೂ ದೇವಾಲಯ ನಿರ್ಮಾಣಕ್ಕೆ ನಿವೇಶನ ದಾನ ಮಾಡಿದವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ ರೆಡ್ಡಿ ದೇವಾಲಯ ನಿರ್ಮಾಣದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮುಖಂಡರಾದ ಪಿ.ಎಸ್. ಹನುಮಂತಪ್ಪ, ಎಪಿಎಂಸಿ ನಿರ್ದೇಶಕ ಮಂಜುನಾಥ್ ಪಟೇಲ್, ಮಲ್ಲಿಕಾರ್ಜುನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬಿದ್ ಅಲಿ, ಧಾರ್ಮಿಕ ಮುಖಂಡ ಕೆ.ಪಿ. ಸಿದ್ದಬಸಪ್ಪ. ಕಂದಾಯ ಇಲಾಖೆ ಸಿಬ್ಬಂದಿ, ಪಿಡಿಒ ರೇಣುಕಾ, ಕೊಂಡಜ್ಜಿ ನಿಖಿಲ್ , ಹುಲಿಗೇಶ್, ಹಾಲೇಶಪ್ಪ, ಪಟೇಲ್ , ಸಿಪಿಐ ಗುರುನಾಥ್, ಪಿಎಸ್ಐ ಮೇಘರಾಜ್ ಹಾಗೂ ಗ್ರಾಮಸ್ಥರು ಇದ್ದರು.

ಅನ್ನ ಸಂತರ್ಪಣೆ ಏರ್ಪಾಟು ಮಾಡಲಾಗಿತ್ತು. ಗ್ರಾಮದಲ್ಲಿ ಜಾತ್ರೆ ವಾತಾವರಣ ಮೂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !