ಸೋಮವಾರ, ಡಿಸೆಂಬರ್ 9, 2019
17 °C
ಪಕ್ಷದೊಳಗಿನ ಹಂಚಿಕೆಯಂತೆ ಅವಿರೋಧವಾಗಿ ನಡೆದ ಆಯ್ಕೆ ಪ್ರಕ್ರಿಯೆ

ದಾವಣಗೆರೆ ಜಿ.ಪಂ. ಅಧ್ಯಕ್ಷರಾಗಿ ಯಶೋದಮ್ಮ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಯಶೋದಮ್ಮ ಮರುಳಪ್ಪ ಅವಿರೋಧವಾಗಿ ಆಯ್ಕೆಯಾದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಶೈಲಜಾ ಬಸವರಾಜ್‌ ಪಕ್ಷದೊಳಗಿನ ಒಪ್ಪಂದದಂತೆ 15 ದಿನಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರು ನ.11ಕ್ಕೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ ದಿನ ನಿಗದಿ ಮಾಡಿದ್ದರು.

ಸೋಮವಾರ ಮಧ್ಯಾಹ್ನ 12ರಿಂದ 1ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಚನ್ನಗಿರಿ ತಾಲ್ಲೂಕು ಹೊದಿಗೆರೆ ಕ್ಷೇತ್ರದ ಸದಸ್ಯೆ ಯಶೋದಮ್ಮ ಒಬ್ಬರೇ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದರು. ಒಂದು ನಾಮಪತ್ರಕ್ಕೆ ಕೆ.ವಿ. ಶಾಂತಕುಮಾರಿ ಹಾಗೂ ಇನ್ನೊಂದು ನಾಮಪತ್ರಕ್ಕೆ ಬಿ.ಎನ್‌. ವಾಗೀಶಸ್ವಾಮಿ ಸೂಚಕರಾಗಿದ್ದರು.

ಮಧ್ಯಾಹ್ನ 3ಕ್ಕೆ ಹರ್ಷ ಗುಪ್ತಾ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ, ಅದು ಕ್ರಮಬದ್ಧವಾಗಿರುವುದರಿಂದ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಏಳೇ ನಿಮಿಷಗಳಿಗೆ ಆಯ್ಕೆ ಪ್ರಕ್ರಿಯೆ ಮುಗಿದು ಹೋಯಿತು.

ಜಿಲ್ಲಾ ಪಂಚಾಯಿತಿಯ 29 ಸದಸ್ಯರಲ್ಲಿ 21 ಮಂದಿ ಹಾಜರಿದ್ದರು. 8 ಮಂದಿ ಗೈರಾಗಿದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ ಜಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್, ಅಧಿಕಾರಿಗಳು ಉಪಸ್ಥಿತರಿದ್ದರು.

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಸದಸ್ಯರು ಇತರೆ ಮುಖಂಡರು ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.

ಅಭಿವೃದ್ಧಿಗೆ ಆದ್ಯತೆ: ರೈತಪರವಾದ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಯಶೋದಮ್ಮ ಮರುಳಪ್ಪ ಹೇಳಿದರು.

ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

‘ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಉತ್ತಮ ರಸಗೊಬ್ಬರ, ಕೃಷಿಹೊಂಡಗಳ ನಿರ್ಮಾಣ, ಕೃಷಿ ಚಟುವಟಿಕೆಗೆ ಆದ್ಯತೆ ನೀಡಲಾಗುವುದು. ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಎಲ್ಲ ಸದಸ್ಯರನ್ನು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಮೊದಲ ಬಾರಿ ಆಯ್ಕೆಯಾಗಿದ್ದ ಯಶೋದಮ್ಮ

ಚಿಕ್ಕಮಗಳೂರು ಜಿಲ್ಲೆಯ ಕೊರಟಗೆರೆಯ ಯಶೋದಮ್ಮ ಮರುಳಪ್ಪರನ್ನು ಮದುವೆಯಾಗಿ ಚನ್ನಗಿರಿ ಹೊದಿಗೆರೆಗೆ ಬಂದವರು. ಎಪಿಎಂಸಿ ಅಧ್ಯಕ್ಷರಾಗಿ, ತುಮ್ಕೋಸ್‌ ಅಧ್ಯಕ್ಷರಾಗಿ ಸದ್ಯ ನಿರ್ದೇಶಕರಾಗಿ ನಿರಂತರ ರಾಜಕೀಯದಲ್ಲಿ ಮರುಳಪ್ಪ ತೊಡಗಿಸಿಕೊಂಡಿದ್ದು, ಪತಿಯ ರಾಜಕೀಯಕ್ಕೆ ನೆರಳಾಗಿ ಯಶೋದಮ್ಮ ರಾಜಕೀಯಕ್ಕೆ ಇಳಿದವರು. ಹೊದಿಗೆರೆ ಕ್ಷೇತ್ರ 2016ರಲ್ಲಿ ಮಹಿಳೆಗೆ ಮೀಸಲಾದಾಗ ಸ್ಪರ್ಧಿಸಿ ಗೆದ್ದಿದ್ದ ಯಶೊದಮ್ಮ ಈಗ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಎಸ್ಸೆಸ್ಸೆಲ್ಸಿ ಓದಿರುವ ಅವರು ಮಕ್ಕಳಿಬ್ಬರನ್ನು ಎಂಜಿನಿಯರಿಂಗ್‌ ಮಾಡಿಸಿದ್ದಾರೆ.

ಮೂರೂವರೆ ವರ್ಷ 5ನೇ ಅಧ್ಯಕ್ಷೆ

ಜಿಲ್ಲಾ ಪಂಚಾಯಿತಿಯ ಅವಧಿ ಮೂರೂವರೆ ವರ್ಷಗಳಷ್ಟೇ ಮುಗಿದಿದೆ. ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನವನ್ನು ಈಗಾಗಲೇ ನಾಲ್ಕು ಮಂದಿ ಅಲಂಕರಿಸಿದ್ದು, ಯಶೋದಮ್ಮ 5ನೇಯವರಾಗಿದ್ದಾರೆ.

2016ರ ಮೇ 3ರಿಂದ 2017ರ ಅಕ್ಟೋಬರ್‌ 18ರ ವರೆಗೆ ಅಂದರೆ ಒಂದೂವರೆ ವರ್ಷಗಳ ಕಾಲ ನ್ಯಾಮತಿ ಕ್ಷೇತ್ರದ ಉಮಾ ಎಂ.ಪಿ. ರಮೇಶ್‌ ಅಧ್ಯಕ್ಷರಾಗಿದ್ದರು. 2017ರ ಡಿ.13ರಿಂದ 2018ರ ಜುಲೈ 23ರವರೆಗೆ 8 ತಿಂಗಳಿಗೂ ಅಧಿಕ ಸಮಯ ಹೊನ್ನಬಾಗಿ ಕ್ಷೇತ್ರದ ಮಂಜುಳಾ ಟಿ.ವಿ.ರಾಜು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ತೆಲಗಿ ಕ್ಷೇತ್ರದ  ಜಯಶೀಲಾ ಕೆ.ಆರ್‌. 2018ರ ಆ.10ರಿಂದ 2019ರ ಜ.5ರವರೆಗೆ ಸುಮಾರು 5 ತಿಂಗಳು ಅಧ್ಯಕ್ಷರಾಗಿದ್ದರು. ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರಿದ್ದರಿಂದ ಅವರು ಬಳ್ಳಾರಿಗೆ ಸೇರಿದರು. ಬಳಿಕ 2019ರ ಮಾರ್ಚ್‌ನಿಂದ 8 ತಿಂಗಳ ಕಾಲ ಶೈಲಜಾ ಬಸವರಾಜ್‌ ಈ ಸ್ಥಾನ ಅಲಂಕರಿಸಿದ್ದರು.

ಈ ನಡುವೆ ಉಪಾಧ್ಯಕ್ಷರಾಗಿದ್ದ ಗೀತಾ ಗಂಗಾನಾಯ್ಕ, ಜೆ. ಸವಿತಾ ಕಲ್ಲೇಶಪ್ಪ, ಸುರೇಂದ್ರ ನಾಯ್ಕ್‌ ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಇನ್ನೂ 18 ತಿಂಗಳು ಅವಧಿ ಬಾಕಿ ಇದ್ದು, ಅಧ್ಯಕ್ಷ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಯಶೋದಮ್ಮ ಅವರ ಬಳಿಕ ಮತ್ತೆ ಕನಿಷ್ಠ ಇಬ್ಬರಿಗೆ ಅವಕಾಶ ಮಾಡಿ ಕೊಡಲು ಮಾತುಕತೆಗಳು ನಡೆದಿವೆ ಎಂದು ಅನಧಿಕೃತವಾಗಿ ಕೆಲವು ಸದಸ್ಯರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು