ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸಾನದತ್ತ ಪ್ರಣವೇಶ್ವರ ದೇಗುಲ!

Last Updated 18 ಫೆಬ್ರುವರಿ 2012, 9:55 IST
ಅಕ್ಷರ ಗಾತ್ರ

ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಹತ್ತಿರ ಇರುವ ತಾಳಗುಂದ ಕನ್ನಡದ ಮೊಟ್ಟ ಮೊದಲ ವಿದ್ಯಾಕೇಂದ್ರ. ಇಲ್ಲಿ ನೆಲೆಸಿರುವ ಪ್ರಣವೇಶ್ವರ ದೇವಾಲಯದ ಆವರಣವೇ ಕನ್ನಡ ಪಾಠ-ಪ್ರವಚನಗಳ ಪ್ರಾಂಗಣ. ದೇವಸ್ಥಾನದ ಪಕ್ಕದಲ್ಲಿರುವ ಪ್ರಣವೇಶ್ವರ ಕೆರೆ ಕರ್ನಾಟಕದಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಕೆರೆ.
 
ಇಂದಿಗೂ ಪ್ರಣವೇಶ್ವರ ದೇವಾಲಯ ಮನಸ್ಸಿನ ಮೈಲಿಗೆ ತೊಳೆದು ನೆಮ್ಮದಿ ನೀಡಿದರೆ, ಕೆರೆ ದೇಹದ ಕೊಳೆ ತೆಗೆದು ಸ್ವಾಸ್ಥ್ಯ ಕಾಪಾಡುತ್ತಿದೆ.

ತಾಳಗುಂದ ಪರಾವಿದ್ಯೆ ಮತ್ತು ಅಪರಾವಿದ್ಯೆಯ ತಾಣವಾಗಿತ್ತು. ಪ್ರಣವೇಶ್ವರ ದೇವಾಲಯ ಸಾತಕರ್ಣಿಗಳ ಕಾಲದಿಂದ ಹೊಯ್ಸಳರ ನಂತರ ದಿನಗಳಲ್ಲಿಯೂ ಬಹಳ ಪ್ರಸಿದ್ಧಿ ಪಡೆದಿತ್ತು. ದೇವಾಲಯದ ಆಸ್ತಿ-ಪಾಸ್ತಿ ಹೇರಳವಾಗಿತ್ತು. ಮೇಧಾವಿ ಪಂಡಿತರನ್ನು, ಮಹಾದಾನಿ, ವೀರಭಟರನ್ನು ಹೊಂದಿತ್ತು. ಈ ದೇವಾಲಯವನ್ನು ಹಿರಣ್ಯಗರ್ಭಬ್ರಹ್ಮ ಸ್ಥಾಪಿಸಿದರೆ, ಕ್ರಿ.ಶ. 935ರ ಶಾಸನದಂತೆ ಪುಳಿಯಮ್ಮ ಹೆಗ್ಗಡೆ ಕೆರೆ ಕಟ್ಟಿಸಿ ದೇವರ ನೈವೇದ್ಯ, ನಂದಾದೀವಿಗೆ, ಗ್ರಂಥಾಧ್ಯಯನಕ್ಕೆ ದತ್ತಿ ಬಿಟ್ಟಿದರು ಎನ್ನಲಾಗಿದೆ.

ಈ ವಿದ್ಯಾಕೇಂದ್ರದಲ್ಲಿ ಮೂವತ್ತೆರಡು ಸಾವಿರ ವಿದ್ವಾಂಸರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದರು. ಎಂಟು ಜನ ವಿದ್ಯಾರ್ಥಿಗಳಿಗೆ ಒಬ್ಬ ಗುರುಗಳು ಬೋಧನೆ ಮಾಡುತ್ತಿದ್ದರು. ಸಂಸ್ಕೃತ, ಕನ್ನಡ ಸಹಿತ ಹಲವಾರು ವಿದ್ಯೆಗಳ ಪಾರಾಯಣ ನಡೆಯುತ್ತಿತ್ತು.


ಈ ರೀತಿ ತಾಳಗುಂದ ಪ್ರಣವೇಶ್ವರನ ಸನ್ನಿಧಾನದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿ, ಮುಂದೊದು ದಿನ ಪಲ್ಲವರಿಂದ ಅವಮಾನಕ್ಕೆಧೀಡಾಗುತ್ತಾನೆ. ಲೇಖನಿ ಹಿಡಿದಿದ್ದ ಕನ್ನಡಿಗನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ, ಪಲ್ಲವರ ವಿರುದ್ಧ ಕತ್ತಿ ಹಿಡಿದು ಹೋರಾಡಿ, ಪಲ್ಲವರ ಸೊಲ್ಲಡಗಿಸಿ ಕನ್ನಡದ ಮೊಟ್ಟ ಮೊದಲ ಸಾಮ್ರೋಜ್ಯವಾದ ಕಂದಂಬ ರಾಜ್ಯವನ್ನು ಸ್ಥಾಪಿಸುತ್ತಾನೆ. ಕನ್ನಡ ಸಾಮ್ರೋಜ್ಯದ ನಿರ್ಮಾಣಕ್ಕೆ ಪ್ರೇರಣೆ, ಸ್ಫೂರ್ತಿ ಚಿಲುಮೆ, ಮಯೂರ ಶರ್ಮನ ಆರಾಧ್ಯ ದೈವ ತಾಳಗುಂದದ ಪ್ರಣವೇಶ್ವರ. ಈ ದೇವಾಲಯ ಇಂದು ಕೇಳುವವರಿಲ್ಲದೇ ಅನಾಥವಾಗಿದೆ.

ಸುಮಾರು 45 ವರ್ಷಗಳ ಹಿಂದೆ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಕೆಳಗಡೆ ಅಗಾಧವಾದ ಚಿನ್ನದ ನಿಧಿಯಿದೆ ಎಂದೂ ಲಿಂಗವನ್ನು ತುಂಡರಸಿ ಕೆಳಗೆ ಕೆಡವಲಾಗಿತ್ತು. ಆದರೆ, ಹೊರಗೆ ತರಲಾರದೇ ಕಳ್ಳರು ಬಿಟ್ಟು ಓಡಿ ಹೋಗಿದ್ದರು. ಅದೇ ಲಿಂಗವನ್ನೇ ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ. ಈಗಲು ತುಂಡರಸಿರುವ ಲಿಂಗದ ಕಲ್ಲುಗಳು ಸಾಕ್ಷಿಯಾಗಿ ಅಲ್ಲಿ ಬಿದ್ದಿವೆ.

ಈ ಗರ್ಭಗುಡಿಯಲ್ಲಿರುವ ಪ್ರಣವೇಶ್ವರನ ಕೆಳಭಾಗದಲ್ಲಿ ಚಿನ್ನದ ನಿಧಿಯ ಜತೆ ಸಿದ್ಧಿರಸ, ಶಿಲಾರಸಗಳು ಇವೆ ಎಂದೂ ನಂಬಲಾಗಿದೆ.

ಸಿದ್ಧಿರಸ
ತಾಳಗುಂದದಲ್ಲಿ ಸಿದ್ಧೌಷದಾಲಯವಿತ್ತು ಎಂಬ ಪ್ರತೀತಿ ಇದೆ. ಮಾನವ ಸಿದ್ಧಿ ಪಡೆಯಬೇಕಾದರೆ ಬಹು ಕಠಿಣವಾದ ಹಾದಿಯಲ್ಲಿ ಸಾಗಬೇಕಿತ್ತು. ಆದರೆ, ಸಿದ್ಧಿ ರಸವನ್ನು ಸೇವನೆ ಮಾಡಿದರೆ, ಆ ಸಿದ್ಧಿ ಬಹಳ ಸುಲಭವಾಗಿ ದೊರಕುತ್ತದೆ ಎನ್ನುವ ನಂಬಿಕೆ ಹಲವರಲ್ಲಿ ಇದೆ.

ಶಿಲಾರಸ
ಶಿಲೆಗಳ ಮೇಲೆ ದ್ರವ ರೂಪದ ರಸವನ್ನು ಲೇಪನ ಮಾಡಿದರೆ, ಶಿಲೆಯು ಮೃದುವಾಗಿ ಶಿಲ್ಪಿಯ ಕಲ್ಪನೆಗೆ ತಕ್ಕಹಾಗೆ ರೂಪ ಪಡೆಯುತ್ತದೆ. ಆದ್ದರಿಂದಲೇ ಬೇಲೂರು, ಹಳೇಬೀಡು, ಪಟ್ಟದಕಲ್ಲು, ಬಳ್ಳಿಗಾವಿಯಂತಹ ಐತಿಹಾಸಿಕ ತಾಣದಲ್ಲಿ ನಾಜುಕಾದ ಶಿಲ್ಪಕಲೆ ಅರಳಿದೆ ಎನ್ನುತ್ತಾರೆ ಸ್ಥಳೀಯರಾದ ಚಂದ್ರಶೇಖರಪ್ಪ.

ಕನ್ನಡಿಗರ ಸ್ವಾಭಿಮಾನದ ಬಗ್ಗೆ ದಿನವಿಡೀ ಭಾಷಣ ಮಾಡುವ ನಮ್ಮ ಕನ್ನಡಪರ ಸಂಘಟನೆಗಳಿಗೆ ನಮ್ಮನಾಳುವ ಕನ್ನಡ ಭಾಷೆಯ ರಾಜ್ಯ ಸರ್ಕಾರಕ್ಕೆ ತಾಳಗುಂದ ಕಾಣದಿರುವುದು ವಿಪರ್ಯಾಸ. ಮಂತ್ರಿಗಳು, ಶಾಸಕರು ಓದಿದ ಶಾಲೆಗಳು ಲಕ್ಷಾಂತರ ರೂಪಾಯಿಗಳಲ್ಲಿ ಕಾಯಕಲ್ಪ ಕಾಣುತ್ತಿವೆ. ಆದರೆ, ಕನ್ನಡಿಗರ ಸ್ವಾಭಿಮಾನದ ಚಿಲುಮೆಯನ್ನು ಗಗನಕ್ಕೆ ಮುಟ್ಟಿಸಿದ ಮಯೂರ ವರ್ಮ ಅಭ್ಯಾಸ ಮಾಡಿದ ತಾಳಗುಂದದ ಪ್ರಣವೇಶ್ವರ ದೇವಾಲಯ ಮಾತ್ರ ಗಮನಕ್ಕೆ ಬಾರದೇ ಅವಸಾನದ ಅಂಚಿಗೆ ತಲುಪಿದೆ.

ಕ್ರಿ.ಶ. 450ರಲ್ಲಿ ಪ್ರಣವೇಶ್ವರ ದೇವಾಲಯದ ಮುಂದೆ ನೆಟ್ಟಿರುವ ಕಂಬದಲ್ಲಿನ ಶಾಸನವು ಮಯೂರ ವರ್ಮನ ಬಗ್ಗೆ ಬೆಳಕು ಚೆಲ್ಲುತ್ತದೆ. ಇಂತಹ ಐತಿಹಾಸಿಕ ತಾಣ ಬೆಳಕಿಗೆ ಬಾರದೇ ನಶಿಸುತ್ತಿದೆ. ಕನ್ನಡ ಕುಲದ ಮೊದಲ ಸಾಮ್ರೋಜ್ಯನಾಧೀಶ್ವನ ಹಿರಿಮೆಯನ್ನು ಜಗತ್ತಿಗೆ ಸಾರಬೇಕಾದ ಸರ್ಕಾರ ಸುಮ್ಮನೆ ಕುಳಿತಿದೆ.
 
ಕನ್ನಡಿಗರ ಸ್ವಾಭಿಮಾನದ ಕಿಚ್ಚು, ಹೊಸ ಸಾಮ್ರಜ್ಯವನ್ನೇ ಕಟ್ಟಿ ಬೆಳೆಸಿದ್ದರ ಬಗ್ಗೆ ಜಾಗೃತಿ ಮೂಡಿಸಬೇಕು. ಊರಿಗೆ ಒಂದು ಉತ್ಸವ ಮಾಡುವ ಸರ್ಕಾರ, ನವೆಂಬರ್ ಬಂದೋಡನೆ ಬೊಬ್ಬೆ ಹಾಕುವ ಕನ್ನಡ ಪರ ಹೋರಾಟಗಾರರು, ಚಿಂತಕರು, ಬುದ್ಧಿಜೀವಿಗಳು ಈ ಐತಿಹಾಸಿಕ ತಾಣ ಪೋಷಿಸಿ, ಬೆಳೆಸಬೇಕು ಎಂಬುದು ಇಲ್ಲಿನ ಜನರ ಒತ್ತಾಯ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರದಲ್ಲಿರುವ ಈ ಐತಿಹಾಸಿಕ ತಾಣ ಪ್ರವಾಸೋದ್ಯಮ ಇಲಾಖೆ ಕಣ್ಣಿಗೆ ಕಾಣದಾಗಿದೆ. ಮಠ-ಮಂದಿರಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಸರ್ಕಾರಕ್ಕೆ ಯಾವುದೇ ಮಠಕ್ಕೆ ಸೇರದ, ನಾಮಕಾವಸ್ಥೆಯಲ್ಲಿ ಪುರಾತತ್ವ ಇಲಾಖೆಯಡಿಯಿರುವ ತಾಳಗುಂದ ಪ್ರಣವೇಶ್ವರ ದೇವಾಲಯ ಹೇಗೆ ತಾನೆ ಕಾಣಲು ಸಾಧ್ಯವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT