ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡಗಂಟೆಗಳು ಬೆಳೆದು ರಸ್ತೆಯೇ ಮಾಯ

Last Updated 29 ಅಕ್ಟೋಬರ್ 2017, 6:44 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣದಿಂದ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗರಗ ಗ್ರಾಮದ ಗ್ರಾಮೀಣ ರಸ್ತೆಯ ಎರಡು ಬದಿಗಳಲ್ಲಿ ಗಿಂಡಗಂಟೆಗಳು ಬೆಳೆದು ನಿಂತಿದ್ದು, ರಸ್ತೆಯೇ ಕಾಣದಂತೆ ಮಾಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

2013–14ರಲ್ಲಿ ಈ ರಸ್ತೆಯನ್ನು ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ವಿಭಾಗದಿಂದ ₹ 90 ಲಕ್ಷ ವೆಚ್ಚದಲ್ಲಿ 3 ಕಿ.ಮೀ ದೂರದ ರಸ್ತೆಯನ್ನು ನಿರ್ಮಿಸಲಾಗಿತ್ತು. 12 ಅಡಿ ಅಗಲದ ರಸ್ತೆ ಇದಾಗಿದ್ದು, ಈಗ ರಸ್ತೆಯ ಎರಡು ಬದಿಗಳಲ್ಲಿ ರಸ್ತೆಯೇ ಕಾಣದಂತೆ ಗಿಡಗಂಟೆ ಹಾಗೂ ಮುಳ್ಳಿನ ಪೊದೆಗಳು ಬೆಳೆದು ನಿಂತಿರುವುದರಿಂದ ರಸ್ತೆ ಎಲ್ಲಿದೇ ಎಂದು ಹುಡುಕಾಟ ನಡೆಸಬೇಕಾಗಿದೆ. 12 ಅಡಿ ಅಗಲದ ರಸ್ತೆ ಈಗ ಕೇವಲ 5 ಅಡಿ ರಸ್ತೆಯಾಗಿ ಮಾರ್ಪಟ್ಟಿದೆ.

ಈ ರಸ್ತೆ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಗೆ ಹಾಗೂ ಪಟ್ಟಣದಿಂದ ಸಮೀಪ ಇರುವ ಗರಗ, ಗುಳ್ಳೇಹಳ್ಳಿ, ರಂಗಾಪುರ ತಾಂಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಗ್ರಾಮೀಣ ರಸ್ತೆಯಾಗಿದ್ದು, ಪ್ರತಿ ದಿನ ನೂರಾರು ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದವು. ಈಗ ರಸ್ತೆಯೇ ಮಾಯ ಆಗಿರುವುದರಿಂದ ಗ್ರಾಮೀಣ ಪ್ರದೇಶಗಳಿಗೆ ಹೋಗುವ ಜನರು ಸುತ್ತುಬಳಸಿ ಬೇರೆ ರಸ್ತೆಯಲ್ಲಿ ಸಂಚರಿಸುವಂತಾಗಿದೆ.

ಅಷ್ಟೇ ಅಲ್ಲದೇ ಪಟ್ಟಣದ ತ್ಯಾಜ್ಯ ವಸ್ತುಗಳನ್ನು ಈ ರಸ್ತೆಯ ಎರಡು ಬದಿಗಳಲ್ಲಿ ಹಾಕಲಾಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಕೆಟ್ಟ ದುರ್ನಾತದಿಂದಾಗಿ ಮೂಗು ಮುಚ್ಚಿಕೊಂಡು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ರಸ್ತೆಯ ಬದಿಯಲ್ಲಿ ಬೆಳೆದು ನಿಂತು ಸುಗಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿರುವ ಗಿಡಗಂಟೆಗಳನ್ನು ಕಡಿಸಿ ಅನುಕೂಲ ಮಾಡಿಕೊಡಲು ಮುಂದಾಗಬೇಕೆನ್ನುತ್ತಾರೆ ಗರಗ ಗ್ರಾಮದ ಜಗದೀಶ್, ಮಲ್ಲಿಕಾರ್ಜುನ್.

ಈ ರಸ್ತೆಯನ್ನು 2013–14 ನೇ ಸಾಲಿನಲ್ಲಿ ₹ 90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಮೇಲ್ಸೆತುವೆ ನಿರ್ಮಾಣ ಕಾಮಗಾರಿ ಕೈಗೊಂಡಿರುವುದರಿಂದ ಸುಮಾರು ಅರ್ಧ ಕಿ.ಮೀ ರಸ್ತೆಯನ್ನು ನಿರ್ಮಿಸದೇ ಬಿಡಲಾಗಿತ್ತು. ಆ ಕಾರಣದಿಂದ ಗಿಡಗಂಟೆಗಳು ಬೆಳದು ನಿಂತಿವೆ. ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯವಾದ ಕೂಡಲೇ ಈ ರಸ್ತೆ ದುರಸ್ತಿಯ ಬಗ್ಗೆ ಗಮನ ಹರಿಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ವಿಭಾಗದ ಎಇಇ ವಿಜಯಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT