ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಗರದಲ್ಲಿ ಸುಲಿಗೆಗೆ ಇಳಿದ ಟ್ಯಾಂಕರ್ ಮಾಲೀಕರು

ನಗರದಲ್ಲಿ ನೀರಿಗೆ ಕೃತಕ ಅಭಾವ ಸೃಷ್ಟಿ, ಪಾಲಿಕೆಗೇ ಸೆಡ್ಡು ಹೊಡೆದ ದಂಧೆ
Last Updated 3 ಮೇ 2017, 5:17 IST
ಅಕ್ಷರ ಗಾತ್ರ

ದಾವಣಗೆರೆ: ದೇವನಗರಿಯ ಜೀವನಾಡಿಗಳಾದ ಕುಂದವಾಡ, ಟಿವಿ ಸ್ಟೇಷನ್‌ ಕೆರೆಗಳ ಒಡಲು ಒಣಗಿದೆ. ನಲ್ಲಿಯಲ್ಲಿ ನೀರು ತೊಟ್ಟಿಕ್ಕಿ ವಾರಗಳೇ ಕಳೆದಿವೆ. ನಗರದ ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಇಂಥ ವಿಷಮ ಪರಿಸ್ಥಿತಿಯ ಲಾಭ ಮಾಡಿಕೊಳ್ಳುತ್ತಿರುವ ಟ್ಯಾಂಕರ್‌ ಮಾಲೀಕರು ಸುಲಿಗೆಗಿಳಿದಿದ್ದಾರೆ.

ವಾರದ ಹಿಂದಷ್ಟೇ ₹ 400ರಿಂದ ₹ 700ಕ್ಕೆ ಒಂದು ಲೋಡ್‌ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕರ್‌ ಮಾಲೀಕರು ಈಗ ದುಪ್ಟಟ್ಟು ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ. ದಿನದಿಂದ ದಿನಕ್ಕೆ ನೀರಿಗೆ ಬೇಡಿಕೆ ಹೆಚ್ಚುತ್ತಿದ್ದು, ಮನಸ್ಸಿಗೆ ಬಂದಷ್ಟು ಹಣ ಪೀಕುತ್ತಿದ್ದಾರೆ. ಇದು ಜನರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ನಿರಂತರ ಬರದಿಂದ ನಗರದ ಜನರಿಗೆ ನೀರು ಪೂರೈಸುವುದು ದಾವಣಗೆರೆಯ ಮಹಾನಗರ ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನೀರಿಗಾಗಿ ಜನರು ಕೊಡಪಾನಗಳೊಂದಿಗೆ ಕುಂದವಾಡ ಕೆರೆಗೇ ಲಗ್ಗೆ ಹಾಕಿದ್ದಾರೆ! ಇಂತಹ ವಿಷಮ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ಖಾಸಗಿ ಟ್ಯಾಂಕರ್‌ಗಳ ಕೆಲ ಮಾಲೀಕರು ನೀರು ಪೂರೈಸಲು ಜನರಿಂದ ಅಧಿಕ ಹಣ ವಸೂಲಿಗೆ ಮುಂದಾಗಿದ್ದಾರೆ. ಇದರ ನಡುವೆಯೂ ಪಾಲಿಕೆಯು  ಬಾಡಿಗೆ  ಟ್ಯಾಂಕರ್‌ಗಳ ಮೂಲಕ  ಜನರಿಗೆ  ಅಲ್ಪಮಟ್ಟಿಗೆ  ನೀರು  ಪೂರೈಸಲು  ಶ್ರಮಿಸುತ್ತಿದೆ.

ಕೃತಕ ಬೇಡಿಕೆ ಸೃಷ್ಟಿ: ‘ನಗರದಲ್ಲಿ ಸುಮಾರು 200 ಟ್ಯಾಂಕರ್‌ಗಳು ನಿತ್ಯವೂ ನೀರು ಸರಬರಾಜು ಮಾಡುತ್ತಿವೆ. ಪ್ರತಿ ಟ್ಯಾಂಕರ್‌ ದಿನಕ್ಕೆ ಎಂಟು ಬಾರಿ ನೀರು ಸರಬರಾಜು ಮಾಡಿದರೂ ಒಟ್ಟು 1,600 ಟ್ರಿಪ್‌ ನೀರು ನೀಡಬಹುದು. ಸದ್ಯದ ಸ್ಥಿತಿಯಲ್ಲಿ ನಗರಕ್ಕೆ ಇಷ್ಟು ನೀರು ಸಾಕಾಗುತ್ತದೆ. ಆದರೆ, ಟ್ಯಾಂಕರ್‌ ಮಾಲೀಕರು ಬೆಲೆ ಏರಿಸುವ ದುರುದ್ದೇಶದಿಂದ ಕೃತಕ  ಅಭಾವ ಸೃಷ್ಟಿಸುತ್ತಿದ್ದಾರೆ’ ಎನ್ನುತ್ತಾರೆ ಕೆ.ಬಿ. ಬಡಾವಣೆ ನಿವಾಸಿ ರವಿಕುಮಾರ್.

‘ಹಣ ಕೊಟ್ಟರೂ ಟ್ಯಾಂಕರ್‌ನವರು ಎರಡು ದಿನ ಬಿಟ್ಟು ನೀರು ತರುತ್ತಾರೆ. ನೀರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ನೀರು ಸಿಗುತ್ತಲೇ ಇಲ್ಲ. ಹೆಚ್ಚು ಹಣ ಕೊಟ್ಟರಷ್ಟೇ ನೀರು ತರುತ್ತೇವೆ ಎಂದು ಸತಾಯಿಸುತ್ತಾರೆ. ನಗರದಲ್ಲಿ ನೀರಿಗೆ ಹಾಹಾಕಾರ ಉಂಟಾಗಿರುವುದರಲ್ಲಿ ಟ್ಯಾಂಕರ್ ಮಾಲೀಕರ ಪಾಲೂ ಇದೆ’ ಎಂದು ದೂರುತ್ತಾರೆ ಅವರು.

‘ಶಾಮನೂರು, ಆವರಗೆರೆ ಯಲ್ಲಿರುವ ಕೊಳವೆಬಾವಿಗಳ ನೀರನ್ನು ಟ್ಯಾಂಕರ್‌ಗಳು ನಗರಕ್ಕೆ ಸರಬರಾಜು ಮಾಡುತ್ತಿವೆ. ಶಾಮನೂರು ಬಡಾವಣೆಯಲ್ಲಿರುವ ಕೊಳವೆಬಾವಿಗಳ ಮಾಲೀಕರು ₹ 50ಕ್ಕೆ ಒಂದು ಟ್ಯಾಂಕರ್‌ಗೆ ನೀರು ತುಂಬಿಸಿ ಕೊಡುತ್ತಾರೆ. ಆದರೆ, ಟ್ಯಾಂಕರ್ ಮಾಲೀಕರು 4 ಕಿ.ಮೀ ನಿಂದ 5 ಕಿ.ಮೀ. ದೂರದ ಸ್ಥಳಕ್ಕೆ ನೀರು ಸರಬರಾಜು ಮಾಡಲು ₹ 1,500 ದರ ಕೇಳುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ರವಿಕುಮಾರ್.



ಪಾಲಿಕೆಗೇ ಸೆಡ್ಡು: 34 ಟ್ಯಾಂಕರ್‌ಗಳ ಮೂಲಕ ನಗರದ 41 ವಾರ್ಡ್‌ಗಳಿಗೆ ಪಾಲಿಕೆ ನೀರು ಸರಬರಾಜು ಮಾಡು ತ್ತಿದೆ. ಇದುವರೆಗೂ ಕುಂದವಾಡ ಮತ್ತು ಟಿವಿ ಸ್ಟೇಷನ್‌ ಕೆರೆಯ ನೀರನ್ನೇ ಈ ಟ್ಯಾಂಕರ್‌ಗಳಿಗೆ ತುಂಬಿಸಲಾಗುತ್ತಿತ್ತು. ಆದರೆ, ಎರಡೂ ಕೆರೆಗಳ ನೀರು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹೀಗಾಗಿ ಇಲ್ಲಿ ಟ್ಯಾಂಕರ್‌ಗಳಿಗೆ ನೀರು ತುಂಬಿಸುತ್ತಿಲ್ಲ. ಖಾಸಗಿಕೊಳವೆಬಾವಿಗಳಲ್ಲೂ ಪಾಲಿಕೆ ಟ್ಯಾಂಕರ್‌ಗಳಿಗೆ ನೀರು ನೀಡುತ್ತಿಲ್ಲ. ಹೀಗಾಗಿ ಟ್ಯಾಂಕರ್‌ ನೀರು ಸರಬರಾಜಿನಲ್ಲೂ ವ್ಯತ್ಯಯವಾಗಿದೆ.

ಪಾಲಿಕೆಯ ಟ್ಯಾಂಕರ್‌ಗಳಿಗೆ ಶಾಮನೂರಿನ ಕೊಳವೆಬಾವಿ ನೀರು ತುಂಬಿಸಲು ಖಾಸಗಿ ಟ್ಯಾಂಕರ್‌ ಮಾಲೀಕರು ಅಡ್ಡಿಪಡಿಸುತ್ತಿದ್ದಾರೆ. ಖುದ್ದು ಪಾಲಿಕೆ ಅಧಿಕಾರಿಗಳೇ ನೀರು ನೀಡುವಂತೆ ಹೇಳಿದರೂ ಖಾಸಗಿ ಟ್ಯಾಂಕರ್ ಮಾಲೀಕರು ಮಣಿದಿಲ್ಲ.

‘ನೀನು ಇಲ್ಲಿಗೆ ಬಂದಿರುವುದೇ ತಪ್ಪು. ಇನ್ನು ನೀರು ಕೇಳುತ್ತಿದ್ದೀಯ. ಮೊದಲು ಟ್ರ್ಯಾಕ್ಟರ್‌ ತೆಗೆದುಕೊಂಡು ಹೋಗು ಎಂದು ಶಾಮನೂರಿನ ಖಾಸಗಿ ಟ್ಯಾಂಕರ್‌ ಮಾಲೀಕರು ಗದರಿದರು. ಹೀಗಾಗಿ, ಹಿಂತಿರುಗಿ ಬಂದೆ’ ಎಂದು ಪಾಲಿಕೆಯ ಟ್ಯಾಂಕರ್‌ ಚಾಲಕರಿಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ದರ ನಿಗದಿ  ಪಡಿಸಲು ಆಗ್ರಹ: ಇಷ್ಟು ದೊಡ್ಡ ಟ್ಯಾಂಕರ್‌ಗೆ ಇಂತಿಷ್ಟು ದೂರಕ್ಕೆ ಇಷ್ಟು ದರ ಎಂದು ನಗರಪಾಲಿಕೆ ದರ ನಿಗದಿಮಾಡಬೇಕು. ಯೋಚಿತ ಬೆಲೆ ಯಲ್ಲಿ ನೀರು ಸರಬರಾಜು ಮಾಡಲು ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಎಸ್.ಎಸ್. ಲೇ ಔಟ್‌ ‘ಎ’ ಬ್ಲಾಕ್‌ ನಿವಾಸಿ ಪ್ರಭು.

‘ಭದ್ರಾ ಜಲಾಶಯದಲ್ಲಿ ನೀರು ಖಾಲಿಯಾಗಿದೆ. ನಗರದ ಕೆರೆಗಳಿಗೆ ನೀರು ಹರಿಯಬೇಕಾದರೆ ಜಲಾಶಯ ತುಂಬಬೇಕು. ಇದಕ್ಕೆ ಕನಿಷ್ಠ ಮೂರು ತಿಂಗಳಾದರೂ ಬೇಕು. ಅಲ್ಲಿಯವರೆಗೂ ನಗರದಲ್ಲಿ ನೀರಿನ ಹಾಹಾಕಾರ ಮುಂದುವರಿಯಲಿದೆ. ಕೊಳವೆಬಾವಿ ಗಳಲ್ಲಿ ಎಷ್ಟು ದಿನ ನೀರು ಸಿಗುವುದೋ ಗೊತ್ತಿಲ್ಲ. ಸಿಗುವಷ್ಟು ನೀರನ್ನು ಸರಬರಾಜು ಮಾಡಬೇಕು. ನಿರ್ಮಾಣ ಕಾಮಗಾರಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು’ ಎಂದು ಆಗ್ರಹಿಸುತ್ತಾರೆ ಪ್ರಭು.

‘ನಿರ್ವಹಣೆ ಮರೆತ ಪಾಲಿಕೆ’
‘ಟಿವಿ ಸ್ಟೇಷನ್‌ ಮತ್ತು ಕುಂದವಾಡ ಕೆರೆಗಳಿಗೆ ಭದ್ರಾ ನಾಲೆ ನೀರು ತುಂಬಿಸುವ ಯೋಜನೆ ಆರಂಭವಾಗಿ ಹಲವು ವರ್ಷ ಕಳೆದಿದ್ದರೂ ಕೊಳವೆ ಮಾರ್ಗದ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ’ ಎಂದು ಹೇಳುತ್ತಾರೆ ಎಂಸಿಸಿ ‘ಎ’ ಬ್ಲಾಕ್‌ ನಿವಾಸಿ ಸ್ವಾಮಿ.

‘ನಾಲೆಯಲ್ಲಿ ಕೊಳವೆಮಾರ್ಗದ ಸಂಪರ್ಕ ಇರುವ ಸ್ಥಳದಲ್ಲಿ ಹೂಳು ತುಂಬಿಕೊಂಡಿದೆ. ಅಲ್ಲದೇ ಕೃಷಿ ಭೂಮಿಗೆ ನೀರು ಹಾಯಿಸಿಕೊಳ್ಳುವ ಉದ್ದೇಶದಿಂದ ಕೆಲ ರೈತರು ಕೊಳವೆಮಾರ್ಗದ ಬಾಯಿಯನ್ನು ಅರ್ಧ ಮುಚ್ಚುತ್ತಾರೆ. ಹೀಗಾಗಿ ನೀರಿನ ಹರಿವು ಕಡಿಮೆಯಾಗುತ್ತದೆ.

ಈ ಅಡ್ಡಿಗಳನ್ನೆಲ್ಲ ನಿವಾರಣೆ ಮಾಡಿದ್ದರೆ ಸುಮಾರು 1 ಮೀಟರ್‌ ವ್ಯಾಸದ ಕೊಳವೆಬಾವಿಯಲ್ಲಿ ಸಾಕಷ್ಟು ನೀರು ಹರಿಯುತ್ತಿತ್ತು. ಕೆರೆಗಳಲ್ಲಿ ಇನ್ನೂ ಎರಡು ತಿಂಗಳಿಗೆ ಸಾಲುವಷ್ಟು ನೀರು ಸಂಗ್ರಹಿಸಬಹುದಿತ್ತು’ ಎನ್ನುತ್ತಾರೆ ಅವರು.

ದರ ನಿಗದಿಗೆ ಜಿಲ್ಲಾಧಿಕಾರಿ ಸೂಚನೆ
ಖಾಸಗಿ ಟ್ಯಾಂಕರ್‌ಗೆ ದರ ನಿಗದಿಪಡಿಸುವಂತೆ ಆರ್‌ಟಿಒಗೆ ಸೂಚಿಸಲಾಗಿದೆ. 0–5 ಕಿ.ಮೀ.ವರೆಗೆ ಹಾಗೂ 5 ಕಿ.ಮೀ.ನಿಂದ 10 ಕಿ.ಮೀ.ವರೆಗೆ ದರ ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ. ಜತೆಗೆ ಟ್ಯಾಂಕರ್‌ ಗಾತ್ರವನ್ನೂ ಆಧರಿಸಿ ದರ ನಿಗದಿ ಮಾಡುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು.

ಕೊಳವೆಬಾವಿ ಮಾಲೀಕರು ಖಾಸಗಿ ಟ್ಯಾಂಕರ್‌ಗಳಿಗೆ ನೀರು ನೀಡಲು ಅಡ್ಡಿಯಿಲ್ಲ. ಆದರೆ, ಪಾಲಿಕೆಯ ಟ್ಯಾಂಕರ್‌ಗಳಿಗೂ ಕಡ್ಡಾಯವಾಗಿ ನೀರು ತುಂಬಿಸಿಕೊಡಬೇಕು ಎಂದು ಸೂಚಿಸಲಾಗುವುದು ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT