ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 Qualifier 1: SRH ವಿರುದ್ಧ ಭರ್ಜರಿ ಜಯ: ಫೈನಲ್‌ಗೆ ಲಗ್ಗೆ ಇಟ್ಟ KKR

ಮಿಚೆಲ್ ಸ್ಟಾರ್ಕ್‌ಗೆ ಮೂರು ವಿಕೆಟ್ l ಶ್ರೇಯಸ್, ವೆಂಕಟೇಶ್ ಅರ್ಧಶತಕ
Published 21 ಮೇ 2024, 17:42 IST
Last Updated 21 ಮೇ 2024, 17:42 IST
ಅಕ್ಷರ ಗಾತ್ರ

ಅಹಮದಾಬಾದ್‌: ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಈ ಬಾರಿಯ ಐಪಿಎಲ್‌ ಫೈನಲ್‌ಗೆ ಲಗ್ಗೆ ಇಟ್ಟಿತು.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಕೋಲ್ಕತ್ತ ತಂಡವು 8 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಎದುರು ಸುಲಭ ಜಯಸಾಧಿಸಿತು. ಇದರೊಂದಿಗೆ ತಂಡವು ಐಪಿಎಲ್‌ನಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿತು.

ಇಲ್ಲಿ ಸೋತ ಪ್ಯಾಟ್ ಕಮಿನ್ಸ್ ಬಳಗಕ್ಕೆ ಫೈನಲ್‌ ಪ್ರವೇಶಿಸಲು ಇನ್ನೂ ಒಂದು ಅವಕಾಶವಿದೆ. ಶುಕ್ರವಾರ ನಡೆಯಲಿರುವ ಕ್ವಾಲಿಫೈಯರ್ (2) ಪಂದ್ಯದಲ್ಲಿ ಆಡಲಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಜಯಿಸಿದ ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (4–0–34–3) ದಾಳಿಯಿಂದಾಗಿ ಸನ್‌ರೈಸರ್ಸ್ ತಂಡವು 19.3 ಓವರ್‌ಗಳಲ್ಲಿ 159 ರನ್ ಗಳಿಸಿ ಕುಸಿಯಿತು. ಇದಕ್ಕುತ್ತರವಾಗಿ ಕೋಲ್ಕತ್ತ ತಂಡವು 13.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 164 ರನ್ ಗಳಿಸಿತು. ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ ವೆಂಕಟೇಶ್ ಅಯ್ಯರ್ (ಅಜೇಯ 51) ಹಾಗೂ ಶ್ರೇಯಸ್ ಅಯ್ಯರ್ (ಔಟಾಗದೆ 58) 97 ರನ್‌ ಸೇರಿಸಿದರು.

ಸ್ಟಾರ್ಕ್ ಮಿಂಚು: ಸನ್‌ರೈಸರ್ಸ್‌ ತಂಡವು ಪವರ್‌ಪ್ಲೇ ಮುಗಿಯುವ ಮುನ್ನವೇ 39 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಅದಕ್ಕೆ ಕಾರಣರಾದವರು ಆಸ್ಟ್ರೇಲಿಯಾದ ಬೌಲರ್ ಸ್ಟಾರ್ಕ್. ಈ ಬಾರಿಯ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರ ಕೂಡ ಅವರಾಗಿದ್ದಾರೆ.

ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ ಹಾಗೂ ಶಾಬಾಜ್ ಅಹಮದ್ ವಿಕೆಟ್‌ಗಳನ್ನು ಸ್ಟಾರ್ಕ್ ಕಬಳಿಸಿದರು. ಹೆಡ್ ಮತ್ತು ಶಾಬಾಜ್ ಖಾತೆಯನ್ನೇ ತೆರೆಯಲಿಲ್ಲ.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ವೈಭವ್ ಅರೋರಾ ಎಸೆತದಲ್ಲಿ ಅಭಿಷೇಕ್ ಶರ್ಮಾ (3) ಅವರು ಆ್ಯಂಡ್ರೆ ರಸೆಲ್ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು.

ಸನ್‌ ತಂಡದ ರಾಹುಲ್ ತ್ರಿಪಾಠಿ (44; 35ಎ, 4X7, 6X1), ಹೆನ್ರಿಚ್ ಕ್ಲಾಸೆನ್ (32; 21ಎ) ಹಾಗೂ ನಾಯಕ ಪ್ಯಾಟ್ ಕಮಿನ್ಸ್ (30; 24ಎ) ಬಿಟ್ಟರೆ ಉಳಿದ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ.

ಆದರೆ, ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಕ್ಲಾಸೆನ್ ವಿಕೆಟ್ ಗಳಿಸಿದ್ದು ಕೂಡ ಸನ್‌ ತಂಡಕ್ಕೆ ಹಿನ್ನಡೆಯಾಯಿತು. ‌ಉಳಿದ ಬೌಲರ್‌ಗಳೂ ಈ ಹಂತದಲ್ಲಿ ವಿಜೃಂಭಿಸಿದರು. ರಸೆಲ್ ಮತ್ತು ಗುರ್ಬಾಜ್ ಅವರ ಚುರುಕಾದ ಫೀಲ್ಡಿಂಗ್‌ನಿಂದಾಗಿ ತ್ರಿಪಾಠಿ ರನ್‌ಔಟ್ ಆದರು. ಕೊನೆಯ ಹಂತದ ಓವರ್‌ಗಳಲ್ಲಿ ರನ್‌ ಗಳಿಸಲು ಪ್ರಯತ್ನಿಸಿದ ನಾಯಕ ಕಮಿನ್ಸ್‌ ಅವರ ವಿಕೆಟ್ ರಸೆಲ್ ಪಾಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT