ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಮಿತ್, ಮರಿಯಪ್ಪನ್‌, ಏಕ್ತಾಗೆ ಚಿನ್ನ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ಪದಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಭಾರತ
Published 21 ಮೇ 2024, 16:08 IST
Last Updated 21 ಮೇ 2024, 16:08 IST
ಅಕ್ಷರ ಗಾತ್ರ

ಕೊಬೆ, ಜಪಾನ್ (ಪಿಟಿಐ): ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಅಂತಿಲ್‌ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಪುರುಷರ ಜಾವೆಲಿನ್‌ ಥ್ರೋ (ಎಫ್ 64) ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.

ಭಾರತದ ತಂಗವೇಲು ಮರಿಯಪ್ಪನ್ ಮತ್ತು ಏಕ್ತಾ ಭಯಾನ್ ಅವರೂ ತಮ್ಮ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಈ ಮೂಲಕ ಭಾರತವು ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. 

ಕೂಟದ ಐದನೇ ದಿನವಾದ ಮಂಗಳವಾರ ಐದು ಪದಕಗಳು ಭಾರತದ ಪಾಲಾದವು. ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ಭಾರತ ಗೆದ್ದುಕೊಂಡಿದೆ. ಚೀನಾ (15 ಚಿನ್ನ, 13 ಬೆಳ್ಳಿ, 13 ಕಂಚು) ಮತ್ತು ಬ್ರೆಜಿಲ್‌ (14 ಚಿನ್ನ, 6 ಬೆಳ್ಳಿ, 5 ಕಂಚು) ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ ಮತ್ತು 2023ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ಸುಮಿತ್‌ ಈ ಬಾರಿ 69.50 ಮೀಟರ್‌ ದೂರ ಜಾವೆಲಿನ್‌ ಎಸೆದು ಮತ್ತೆ ಅಗ್ರಸ್ಥಾನಿಯಾದರು. ಹರಿಯಾಣದ 25 ವರ್ಷದ ಅಥ್ಲೀಟ್‌ ಎಫ್‌64 ವಿಭಾಗದಲ್ಲಿ ಪ್ರಾಬಲ್ಯವನ್ನು ಮುಂದುವರಿಸಿದರು. ಕಳೆದ ವರ್ಷ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಅವರು 73.29 ಮೀ ಸಾಧನೆ ಮಾಡಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.

ಇದೇ ಸ್ಪರ್ಧೆಯಲ್ಲಿ ಸ್ವದೇಶದ ಸಂದೀಪ್ 60.41 ಮೀಟರ್‌ ದೂರ ಜಾವೆಲಿನ್‌ ಎಸೆದು ಕಂಚು ಗೆದ್ದರು. ಶ್ರೀಲಂಕಾದ ದುಲಾನ್ ಕೊಡಿತುವಕ್ಕು (66.49 ಮೀ) ಬೆಳ್ಳಿ ಪಡೆದರು.

ಟೋಕಿಯೊ ಪ್ಯಾರಾಲಿಂಪಿಕ್ಸ್ ಬೆಳ್ಳಿ ವಿಜೇತ ಮರಿಯಪ್ಪನ್ ಅವರು ಪುರುಷರ ಟಿ63 ಹೈಜಂಪ್‌ನಲ್ಲಿ 1.88 ಮೀ ಸಾಧನೆಯೊಂದಿಗೆ ಚಿನ್ನ ಗೆದ್ದರು. ಎಂಟು ವರ್ಷಗಳ ನಂತರ ಪ್ರಮುಖ ಕೂಟವೊಂದರಲ್ಲಿ ದೊರೆತ ಮೊದಲ ಚಿನ್ನ ಇದಾಗಿದೆ.

ತಮಿಳುನಾಡಿನ 28 ವರ್ಷದ ಮರಿಯಪ್ಪನ್ 2016ರ ರಿಯೊ ಪ್ಯಾರಾಲಿಂಪಿಕ್ಸ್‌ನ ಟಿ42 ಹೈಜಂಪ್‌ನಲ್ಲಿ ಚಿನ್ನ ಮತ್ತು 2021ರ ಟೋಕಿಯೊ ಆವೃತ್ತಿಯ ಟಿ63 ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ಕಳೆದ ವರ್ಷ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲೂ ಬೆಳ್ಳಿ ಜಯಿಸಿದ್ದರು. ಅಮೆರಿಕದ ಎಜ್ರಾ ಫ್ರೆಚ್ ಮತ್ತು ಸ್ಯಾಮ್ ಗ್ರೂವ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಇದಕ್ಕೂ ಮೊದಲು ಏಕ್ತಾ ಅವರು ಮಹಿಳೆಯರ ಎಫ್‌51 ಕ್ಲಬ್‌ ಥ್ರೋ ಸ್ಪರ್ಧೆಯಲ್ಲಿ 20.12 ಮೀಟರ್‌ ಸಾಧನೆಯೊಂದಿಗೆ ಚಿನ್ನ ಗೆದ್ದರು. ಸ್ವದೇಶದ ಕಾಶಿಶ್ ಲಾಕ್ರಾ (14.56 ಮೀಟರ್‌) ಬೆಳ್ಳಿ ಪದಕ ಜಯಿಸಿದರು. ಹರಿಯಾಣ ನಾಗರಿಕ ಸೇವೆಯ ಅಧಿಕಾರಿಯಾಗಿರುವ 38 ವರ್ಷದ ಏಕ್ತಾ ಅವರು, ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಜಕಾರ್ತಾದಲ್ಲಿ ನಡೆದ 2018ರ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT