ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಮರೆಮಾಚಲು ಬಿಜೆಪಿ ವಿರುದ್ಧ ಆರೋಪ

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ
Last Updated 13 ಜುಲೈ 2017, 4:57 IST
ಅಕ್ಷರ ಗಾತ್ರ

ದಾವಣಗೆರೆ: ‘ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾದ ರಾಷ್ಟ್ರದ್ರೋಹಿ ಸಂಘಟನೆಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದರು.

ಉದ್ಯಮಿ ಎಂ.ಆನಂದ ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ಶಿವಯೋಗಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸರ್ವಧರ್ಮೀಯರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಂಟ್ವಾಳದಲ್ಲಿ ಕೆಲ ದಿನಗಳ ಹಿಂದೆ ಅಮಾಯಕ ವ್ಯಕ್ತಿಗಳ ಮೇಲೆ ಹಲ್ಲೆ ಹಾಗೂ ಚೂರಿ ಇರಿತದ ಘಟನೆಗಳು ನಡೆದಿವೆ. ಗೃಹಖಾತೆ ಹೊಂದಿರುವ ಮುಖ್ಯಮಂತ್ರಿ ಅವರು, ಕೊಲೆಗಡುಕ ರನ್ನು ಹಿಡಿಯಲು ಯಾವ ಕ್ರಮಗಳನ್ನಾದರೂ ಕೈಗೊಳ್ಳಬಹುದು.  ಇದನ್ನು ಮಾಡದೆ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸುತ್ತಿರುವ ಸಂಘಟನೆಗಳನ್ನು ದೂರುವುದು ಸರಿಯಲ್ಲ’ ಎಂದರು. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳಿಗೆ ಯಾರು ಕಾರಣರು ಎನ್ನುವುದು ರಾಜ್ಯ ಸರ್ಕಾರಕ್ಕೆ ಗೊತ್ತಿದೆ. ಇದರಿಂದ ನುಣುಚಿಕೊಳ್ಳಲು ಬಿಜೆಪಿ ನಾಯಕರ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ’ ಎಂದರು.

ಸಿದ್ದರಾಮಯ್ಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿ ಹುದ್ದೆಯ ಗೌರವ ಕಾಪಾಡಬೇಕು. ರಾಜ್ಯ ದಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ಕೇಂದ್ರ ಸರ್ಕಾರ ಗಮನಿಸುತ್ತಿದೆ. ಕೇಂದ್ರ ಸರ್ಕಾರವು ಕೂಡ ರಾಜ್ಯಪಾಲರ ಮೂಲಕ ವರದಿ ತರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವನ್ನು ಯಾವುದೇ ಕಾರಣಕ್ಕೂ ವಜಾ ಮಾಡಬಾರದು. ಸಿದ್ದರಾಮಯ್ಯ ಅವರಿಗೆ ಐದು ವರ್ಷ ಆಡಳಿತ ನಡೆಸಲು ಜನರು ಅಧಿಕಾರ ನೀಡಿದ್ದಾರೆ. ಈ ಅವಧಿಯನ್ನು ಅವರು ಮುಗಿಸಲಿ. ಒಂದು ವೇಳೆ ಅವರಾಗಿಯೇ ಸರ್ಕಾರ ವಿಸರ್ಜನೆ ಮಾಡಿದರೆ ನಾವು ಏನೂ ಮಾಡಲು ಸಾಧ್ಯವಿಲ್ಲ’ ಎಂದರು.

ಮಾನಹಾನಿ ದೂರು ದಾಖಲು: ‘ರಾಜ್ಯದಲ್ಲಿ ಕೆಲವರು ಬ್ಲ್ಯಾಕ್‌ಮೇಲ್‌ ಮಾಡುವುದನ್ನೇ ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ನಮ್ಮನ್ನು ಅಪಮಾನ ಮಾಡಿರುವ ವಿನೋದ್‌ ಅವರ ವಿರುದ್ಧ ₹ 5 ಕೋಟಿ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮಾನಹಾನಿ ದೂರು ದಾಖಲಿಸಿದ್ದೇನೆ’ ಎಂದರು.

ಸಾಮೂಹಿಕ ವಿವಾಹದಲ್ಲಿ 27 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ಸಂಸದ ಜಿ.ಎಂ.ಸಿದ್ದೇಶ್ವರ, ಎಸ್‌.ಎ. ರವೀಂದ್ರನಾಥ, ಡಾ.ಎ.ಎಚ್‌. ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜನಾಯ್ಕ, ಬಿಜೆಪಿಯ ಹಲವು ಮುಖಂಡರು ಆನಂದ ಅವರಿಗೆ  ಶುಭಾಶಯ ಕೊರಿದರು.

ಹೆಬ್ಬಾಳು ವಿರಕ್ತ ಮಠದ ಮಹಾಂತರುದ್ರೇಶ್ವರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಪಾಲಿಕೆ ಸದಸ್ಯ ಕುಮಾರ್‌, ಐರಣಿ ಬಸವರಾಜ್‌, ವಿರೇಶ್‌ ಹನಗವಾಡಿ, ಬಿ.ಎಸ್. ಜಗದೀಶ್‌, ಮುಕುಂದ್‌, ಕಡ್ಲೆಬಾಳು ಧನಂಜಯ, ಬಿ.ಎಂ.ಸತೀಶ್‌, ಪತ್ರಕರ್ತ ಬಸವರಾಜ ದೊಡ್ಮನಿ, ಕೆ.ಎನ್‌. ಓಂಕಾರಪ್ಪ, ಎಂ.ಎಸ್.ರಾಮೇಗೌಡ, ಎಸ್‌.ಟಿ.ವೀರೇಶ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT