ನೀರಿನ ಯೋಜನಾ ವರದಿ ತಯಾರಿಸಲು ನಿರ್ಧಾರ

7
ನಿಡಗುಂದಿ: ಪಟ್ಟಣ ಪಂಚಾಯಿತಿ ಸಭೆ

ನೀರಿನ ಯೋಜನಾ ವರದಿ ತಯಾರಿಸಲು ನಿರ್ಧಾರ

Published:
Updated:
ನಿಡಗುಂದಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮೌಲಾಸಾಬ್‌ ಅತ್ತಾರ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ಜರುಗಿತು

ನಿಡಗುಂದಿ: ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಅಳವಡಿಕೆ ಹಾಗೂ ಪ್ರತಿ ಮನೆಗೂ 24X7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಿ ವರದಿ ಸಲ್ಲಿಸಲು ಗುರುವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಮೌಲಾಸಾಬ್ ಅತ್ತಾರ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಎರಡು ಯೋಜನೆಗಳ ಡಿಪಿಆರ್ ತಯಾರಿಸಲು ₹15 ಲಕ್ಷ ಮೀಸಲಿರಿಸಲು ಸಭೆ ಒಮ್ಮತದಿಂದ ನಿರ್ಧರಿಸಿತು.

ವಿಸ್ತೃತ ಯೋಜನಾ ವರದಿ ಬಂದ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿ, ಅವರಿಂದ ಈ ಎರಡು ಯೋಜನೆಗಳ ಜಾರಿಗೆ ವಿಶೇಷ ಅನುದಾನ ಮಂಜೂರಿ ಮಾಡಿಸಲಾಗುವುದು ಎಂದು ಅಧ್ಯಕ್ಷ ಮೌಲಾಸಾಬ್ ಅತ್ತಾರ ಹೇಳಿದರು. ನೀರು ಪೂರೈಕೆ ಯೋಜನೆ ಹಾಗೂ ಯುಜಿಡಿ ನಿರ್ಮಾಣದ ಅನುದಾನದ ಶೇ 15ರಷ್ಟು ಹಣ ಕಟ್ಟಿದರೆ ಯೋಜನೆ ಮಂಜೂರಿಯಾಗುವ ಸಾಧ್ಯತೆಯೂ ಇದೆ ಎಂದರು.

ಪಟ್ಟಣದ ನಾನಾ ಕಡೆ ಇರುವ ಉದ್ಯಾನದ ಜಾಗದ ಒತ್ತುವರಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ, ಅದನ್ನು ಪಂಚಾಯಿತಿ ಕಬ್ಜಾ ಪಡೆದು ಶೀಘ್ರವೇ ಅವುಗಳಿಗೆ ತಂತಿ ಬೇಲಿ ಅಳವಡಿಸುವುದು, ನಂತರ ಉದ್ಯಾನಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಸಭೆ ನಿರ್ಧರಿಸಿತು.

ಉಳಿತಾಯ ಬಜೆಟ್ ಮಂಡನೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನ ಹಾಗೂ 14ನೇ ಹಣಕಾಸು ಯೋಜನೆಯಡಿ ಬರುವ ಅನುದಾನದ ಬಗ್ಗೆ 2018–19ನೇ ಸಾಲಿನ ಬಜೆಟ್‌ ಅನ್ನು  ಮೌಲಾಸಾಬ್ ಅತ್ತಾರ ಮಂಡಿಸಿ, ಸದಸ್ಯರ ಅನುಮೋದನೆಯನ್ನು ಪಡೆದರು.

ಉಪಾಧ್ಯಕ್ಷೆ ಅನ್ನಪೂರ್ಣ ವಡವಡಗಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಎನ್.ತಹಸೀಲ್ದಾರ್, ಪಟ್ಟಣ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !