ಪ್ರಾಧಿಕಾರಗಳಿಗಿಲ್ಲ ಅಧ್ಯಕ್ಷರ ನೇಮಕ: ಆಕಾಂಕ್ಷಿಗಳಲ್ಲಿ ತಳಮಳ

7
ಆರೇಳು ತಿಂಗಳಿಂದ ಹುದ್ದೆ ಖಾಲಿ

ಪ್ರಾಧಿಕಾರಗಳಿಗಿಲ್ಲ ಅಧ್ಯಕ್ಷರ ನೇಮಕ: ಆಕಾಂಕ್ಷಿಗಳಲ್ಲಿ ತಳಮಳ

Published:
Updated:

ರಾಮನಗರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವು ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಜಿಲ್ಲೆಯ ವಿವಿಧ ಸ್ಥಳೀಯ ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರು ನೇಮಕಗೊಂಡಿಲ್ಲ. ಇದರಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಆಗಿದ್ದರೆ, ಹುದ್ದೆ ಆಕಾಂಕ್ಷಿಗಳೂ ನಿರಾಸೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ, ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ, ಮಾಗಡಿ ಯೋಜನಾ ಪ್ರಾಧಿಕಾರ ಮತ್ತು ಕನಕಪುರ ಯೋಜನಾ ಪ್ರಾಧಿಕಾರಗಳಿವೆ. ಈ ಪೈಕಿ ಕನಕಪುರ ಪ್ರಾಧಿಕಾರಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಕೆ. ಶಿವಕುಮಾರ್‌ ಅವರನ್ನು ನೇಮಿಸಿ ಸರ್ಕಾರ ಈಚೆಗೆ ಆದೇಶ ನೀಡಿದೆ. ಆದರೆ ಉಳಿದ ಮೂರು ಪ್ರಾಧಿಕಾರಗಳ ಅಧ್ಯಕ್ಷರ ಖುರ್ಚಿ ಖಾಲಿಯಾಗಿಯೇ ಉಳಿದಿದೆ.

ರಾಜ್ಯದಲ್ಲಿ ಕಳೆದ ವರ್ಷ ಮಾರ್ಚ್‌–ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಈ ನಾಲ್ಕೂ ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು ಹಾಗೂ ನಿರ್ದೇಶಕರು ಅಧಿಕಾರ ಕಳೆದುಕೊಂಡಿದ್ದರು. ಹೊಸ ಸರ್ಕಾರ ರಚನೆಯಾದ ಬಳಿಕ ಹೊಸಬರ ನೇಮಕವಾಗಬೇಕಿದೆ. ಆದರೆ ರಾಜ್ಯದಲ್ಲಿ ಸದ್ಯ ನಿಗಮ–ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಪೈಪೋಟಿ ನಡೆದಿದ್ದು, ಅದರ ಬಳಿಕವಷ್ಟೇ ಸ್ಥಳೀಯ ಮಟ್ಟದಲ್ಲಿ ನೇಮಕ ಪ್ರಕ್ರಿಯೆಗಳಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.

ಜೆಡಿಎಸ್‌ಗೆ ಸಿಗುತ್ತಾ ಸಿಂಹಪಾಲು: ಕಳೆದ ಒಂದು ದಶಕದ ಕಾಲ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಅಧಿಕಾರ ನಡೆಸಿದ್ದವು. ಆ ಸಂದರ್ಭದಲ್ಲಿ ಪಕ್ಷದ ಮುಖಂಡರು, ನಿಷ್ಠಾವಂತ ಕಾರ್ಯಕರ್ತರಿಗೆ ಆಯಾಕಟ್ಟಿನ ಹುದ್ದೆಗಳನ್ನು ನೀಡಿ ಸಂತೈಸಲಾಗಿತ್ತು. ಕಳೆದ ಐದು ವರ್ಷದಲ್ಲಿ ಜಿಲ್ಲೆಯ ಪ್ರಾಧಿಕಾರಗಳಿಗೆ ಕಾಂಗ್ರೆಸ್‌ನವರೇ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು.

ಇದೀಗ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದು, ಎರಡೂ ಪಕ್ಷಗಳಿಗೂ ಸಮನಾಗಿ ಅಧಿಕಾರ ಹಂಚುವ ಹೊಣೆಗಾರಿಕೆ ಮುಖಂಡರ ಹೆಗಲಿಗೆ ಬಿದ್ದಿದೆ. ಕನಕಪುರ ಯೋಜನಾ ಪ್ರಾಧಿಕಾರವು ಈಗಾಗಲೇ ಕಾಂಗ್ರೆಸ್ ಪಾಲಾಗಿದೆ. ಜಿ.ಪಂ. ಸದಸ್ಯ ಶಿವಕುಮಾರ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದರು. ಅವರಿಗೆ ಆ ಹುದ್ದೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರನ್ನು ಸಂತೈಸಲು ಪ್ರಾಧಿಕಾರದ ಅಧ್ಯಕ್ಷ ಹುದ್ದೆಯನ್ನು ವರಿಷ್ಠರು ನೀಡಿದ್ದಾರೆ.

ಉಳಿದ ಮೂರು ಕಡೆಗಳಲ್ಲಿ ಜೆಡಿಎಸ್‌ನವರಿಗೇ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಈಗಾಗಲೇ ಪೈಪೋಟಿ ನಡೆದಿದೆ. ‘ಈ ಮೂರು ಕಡೆಗಳಲ್ಲಿ ನಮ್ಮವರೇ ಶಾಸಕರಾಗಿದ್ದಾರೆ. ಹೀಗಾಗಿ ನಮಗೆ ಅವಕಾಶ ಸಿಗಬೇಕು’ ಎನ್ನುವುದು ಜೆಡಿಎಸ್ ಮುಖಂಡರ ವಾದ.

ಅಧ್ಯಕ್ಷ ಹುದ್ದೆಗಾಗಿ ಈಗಾಗಲೇ ನಾಯಕರ ಮಟ್ಟದಲ್ಲಿ ಲಾಬಿ ಸಹ ಆರಂಭವಾಗಿದೆ. ಚುನಾವಣೆ ಸಂದರ್ಭದಲ್ಲಿ ತಮ್ಮ ನಿಷ್ಠೆಯನ್ನು ನೆನಪಿಸಿ ಹುದ್ದೆ ಗಿಟ್ಟಿಸಿಕೊಳ್ಳಲು ಕಾರ್ಯಕರ್ತರು ಮುಂದಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸಂಸದ ಡಿ.ಕೆ. ಸುರೇಶ್ ಮೂಲಕ ಬೇಡಿಕೆ ಇಡುತ್ತಿದ್ದಾರೆ.

ಕಳೆದ ಉಪ ಚುನಾವಣೆಯಲ್ಲಿ ಸುರೇಶ್ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿ ಬೆವರು ಹರಿಸಿದ್ದಾರೆ. ಹೀಗಾಗಿ ಅವರ ಮಾತಿಗೆ ಮನ್ನಣೆ ಸಿಗುವ ಸಾಧ್ಯತೆ ಇದೆ. ಉಳಿದ ಮೂರರಲ್ಲಿ ಒಂದು ಸ್ಥಾನ ಕಾಂಗ್ರೆಸ್, ಉಳಿದ ಎರಡು ಕಡೆ ಜೆಡಿಎಸ್‌ ಕಾರ್ಯಕರ್ತರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಚುನಾವಣೆ ಘೋಷಣೆಯಾದರೆ ಕಷ್ಟ
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಲೋಕಸಭೆ ಚುನಾವಣೆಯು ಸಮೀಪಿಸುತ್ತಿದ್ದು, ಅದರ ಘೋಷಣೆಯ ಒಳಗೆ ಈ ಪ್ರಾಧಿಕಾರಗಳಿಗೆ ನೇಮಕವಾಗಬೇಕಿದೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾದಲ್ಲಿ ನೀತಿಸಂಹಿತೆ ಜಾರಿಯಾಗಲಿದೆ. ಅದರ ಬೆನ್ನಿಗೆ ಲೋಕಸಭೆ ಚುನಾವಣೆ ಬರಲಿದೆ. ಹಾಗೇನಾದರೂ ಆದಲ್ಲಿ ಹುದ್ದೆ ಆಕಾಂಕ್ಷಿಗಳು ಇನ್ನೂ ನಾಲ್ಕೈದು ತಿಂಗಳು ಕಾಯುವುದು ಅನಿವಾರ್ಯ ಆಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !