ಬುಧವಾರ, ನವೆಂಬರ್ 20, 2019
20 °C

262 ಖಾತೆಗೆ ಜಮೆಯಾಗದ ಬೆಳೆ ವಿಮೆ: ರೈತರು ಕಂಗಾಲು

Published:
Updated:

ದೇವರಹಿಪ್ಪರಗಿ: ಮುಂಗಾರು ಮಳೆ ಅಭಾವದಿಂದ ಬೆಳೆ ಬೆಳೆಯದೇ ಕಂಗಾಲಾಗಿರುವ ರೈತರಿಗೆ ಬೆಳೆ ವಿಮೆಯಾದರೂ ಆಸರೆಯಾಗಬಲ್ಲದು ಎಂಬ ಮಾತು ಸುಳ್ಳಾಗಿದ್ದು, 2018-19ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವಂತಿಗೆ ಪಾವತಿಸಿದ್ದರೂ ವಿಮೆ ಹಣ ಕೈಸೇರದಂತಾಗಿದೆ.

ಇದು ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ವಾಸ್ತವಿಕ ಸ್ಥಿತಿ.

ಮುಂಗಾರು ಹಂಗಾಮಿನಲ್ಲಿ ಪಟ್ಟಣದ ಒಟ್ಟು 507 ಜನ ರೈತರು ತೊಗರಿ, ಶೇಂಗಾ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಕಂದಾಯ ಇಲಾಖೆಯ ಬೆಳೆ ದೃಢೀಕರಣ ಪತ್ರದೊಂದಿಗೆ ಬ್ಯಾಂಕ್‌ಗಳ ಮೂಲಕ ಪ್ರೀಮಿಯಂ ಹಣ ಸಂದಾಯ ಮಾಡಿದ್ದರು. ಈಗ ವಿಮೆ ಕಂಪನಿಯ ವರದಿ ಪ್ರಕಾರ ಕೇವಲ 245 ಜನ ರೈತರಿಗೆ ₹1.27 ಕೋಟಿ ಹಣವನ್ನು ಜಮೆ ಮಾಡಲಾಗಿದ್ದು, ಇನ್ನುಳಿದ 262 ರೈತರ ಖಾತೆಗೆ ಹಣ ಜಮೆಯಾಗಿಲ್ಲ.

‘ಕಂದಾಯ ಇಲಾಖೆ ಅಧಿಕಾರಿಗಳು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಸರ್ಕಾರಕ್ಕೆ ಸಲ್ಲಿಸುವಾಗ ಸರ್ವೆ ನಂ. 499 ರಿಂದ 600 ರವರೆಗಿನ ಜಮೀನುಗಳ ಬೆಳೆ ಸಮೀಕ್ಷೆಯ ವರದಿ ಬಿಟ್ಟು ಸಲ್ಲಿಸಿದ್ದು, ಇದರಲ್ಲಿ 45 ಜನ ರೈತರ ಜಮೀನುಗಳು ಸೇರಿವೆ. ಇವರು ಪ್ರೀಮಿಯಂ ಹಣ ತುಂಬಿದ್ದರೂ ಸಮೀಕ್ಷೆ ವರದಿ ಸಲ್ಲಿಸದ ಕಾರಣ ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ’ ಎಂದು ರೈತರಾದ ಶಿವಾನಂದ ಬುದ್ನಿ, ಶಾಂತಗೌಡ ಬಿರಾದಾರ ಹೇಳುತ್ತಾರೆ.

‘ಬೆಳೆ ಸಮೀಕ್ಷೆ ಸಮಯದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಿಆರ್‌ಗಳು ಬೆಳೆಗಳ ಭಾವಚಿತ್ರ ತೆಗೆದು ಸರ್ಕಾರದ ಎಪಿಪಿಯಲ್ಲಿ ಭಾವಚಿತ್ರ ಕಳಿಸಿ, ಬೆಳೆಯ ವಿವರದಲ್ಲಿ ಕೃಷಿಯೇತರ ಭೂಮಿ ಅಂತ ನಮೂದಿಸಿದ್ದೇ ಈ ಎಲ್ಲ ಅವಾಂತರಗಳಿಗೆ ಕಾರಣವಾಗಿದೆ’ ಎಂದು ದೂರುತ್ತಾರೆ.

‘ವಿಮೆ ನೀಡುತ್ತಿರುವ ಯುನೈಟೆಡ್ ಇನ್‌ಶ್ಯೂರನ್ಸ್‌ ಕಂಪನಿಯನ್ನು ಸಂಪರ್ಕಿಸಿದಾಗ ಬೆಳೆ ವರದಿ ಸಮೀಕ್ಷೆ ಸರಿಪಡಿಸಿ ಕಳುಹಿಸಿದರೆ ಬಾಕಿ ಇರುವ ರೈತರಿಗೂ ವಿಮೆ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ’ ಎಂದು ಹೇಳುತ್ತಾರೆ.

‘ವಿಮೆ ಪಡೆಯದ ರೈತರು ಈಗಾಗಲೇ ಎರಡು ಬಾರಿ ಶಾಂತಿಯುತ ಮೆರವಣಿಗೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ನಾನು ಕಂದಾಯ ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡಿ, ಆಕ್ರೋಶ ವ್ಯಕ್ತಪಡಿಸಿದ್ದೇನೆ ಎಂದು ಬಿಂಬಿಸಲಾಗಿದೆ. ವಾಸ್ತವಿಕವಾಗಿ ನಾನು ಅಂತಹ ಯಾವುದೇ ಮಾತನ್ನು ಆಡದೇ ಅಲ್ಲಿನ ತಹಶೀಲ್ದಾರರು ಸೇರಿದಂತೆ ಇತರ ಅಧಿಕಾರಿಗಳಿಗೆ ಅಂಕಿ ಅಂಶಗಳ ಸಮೇತ ವಿವರಣೆ ನೀಡಿದ್ದೇನೆ. ವಿಮೆ ಹಣ ಬಿಡುಗಡೆಯಾಗದೇ ಇರುವುದರ ಬಗ್ಗೆ ಯಾರನ್ನೂ ದೂರುವ ಅವಶ್ಯಕತೆಯಿಲ್ಲ’ ಎಂದು ನಿವೃತ್ತ ಕೃಷಿ ಅಧಿಕಾರಿ ಹಾಗೂ ಪ್ರಗತಿಪರ ರೈತ ಸಿ.ಕೆ.ಕುದರಿ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)