ಶುಕ್ರವಾರ, ಸೆಪ್ಟೆಂಬರ್ 20, 2019
21 °C

‘ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ’

Published:
Updated:
Prajavani

ಕೊಲ್ಹಾರ: ‘ಪ್ರವಾಹಕ್ಕೆ ತುತ್ತಾಗಿ ನಿರಾಶ್ರಿತರಾದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಶ್ರೀಶೈಲ ಪೀಠದಿಂದ ₹5 ಕೋಟಿ ವೆಚ್ಚದಲ್ಲಿ 100 ಮನೆಗಳನ್ನು ನಿರ್ಮಿಸಿ ಕೊಡುವ ಸಂಕಲ್ಪ ಮಾಡಲಾಗಿದೆ’ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಕೂಡಗಿಯ ಆರಾಧ್ಯದೈವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಶತಮಾನೋತ್ಸವ ಹಾಗೂ ಸಹಸ್ರ ಕುಂಭೋತ್ಸವ ನಿಮಿತ್ತ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಧರ್ಮ, ದೈವಭಕ್ತಿ ಹಾಗೂ ದೇವಸ್ಥಾನ ಸಂಸ್ಕೃತಿಯು ಭಾರತ ದೇಶದ ಜೀವಾಳ. ಭಾರತವು ಧರ್ಮ ಪ್ರಧಾನ ರಾಷ್ಟ್ರ ಎಂಬುದು ಜಗತ್ತಿಗೆ ತಿಳಿದಿರುವ ಸಂಗತಿ. ಶ್ರೀಶೈಲವು ಭೌಗೋಳಿಕವಾಗಿ ಆಂಧ್ರದಲ್ಲಿದ್ದರೂ ಭಾವನಾತ್ಮಕವಾಗಿ ಕರ್ನಾಟಕದವರಿಗೆ ಹೆಚ್ಚು ಸಂಬಂಧಪಟ್ಟಿದೆ’ ಎಂದು ಹೇಳಿದರು.

‘ನೂರು ವರ್ಷಗಳಿಂದ ಮಲ್ಲಿಕಾರ್ಜುನ ದೇವಾಲಯವನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವ ಕೂಡಗಿ ಗ್ರಾಮವು ಪುರಸ್ಕಾರಕ್ಕೆ ಯೋಗ್ಯವಾಗಿದೆ. ಪ್ರವಾಹ ಸಂತ್ರಸ್ತರಿಗೆ ಎಲ್ಲರೂ ತಾತ್ಕಾಲಿಕವಾಗಿ ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಶಾಸಕ ಶಿವಾನಂದ ಪಾಟೀಲರ ಕುಟುಂಬಸ್ಥರು ಶ್ರೀಶೈಲಕ್ಕೆ ಬಂದಾಗ ನೆರವಿನ ಕಾರ್ಯಕ್ಕೆ ಕೈಜೋಡಿಸಿ ಒಂದು ಮನೆ ನಿರ್ಮಿಸಿ ಕೊಡುವುದಾಗಿ ವಾಗ್ದಾನ ಮಾಡಿರುವುದು ಶ್ಲಾಘನೀಯ ಕಾರ್ಯ’ ಎಂದರು.

ಶಾಸಕ ಶಿವಾನಂದ ಪಾಟೀಲ ಮಾತನಾಡಿ, ‘ಧರ್ಮ ಸಹಿಷ್ಣುತೆ ಭಾವ ನಮ್ಮ ದೇಶದ ಬಹುದೊಡ್ಡ ಕೊಡುಗೆ. ಕೂಡಗಿ ಜನತೆ ಜಾತ್ಯಾತೀತ ಮನೋಭಾವ ಹೊಂದಿದ್ದಾರೆ’ ಎಂದು ಹೇಳಿದರು.

ಗಿರಿಸಾಗರ ಕಲ್ಯಾಣಮಠದ ರುದ್ರಮುನಿ ಶಿವಾಚಾರ್ಯ, ಯರನಾಳ ವಿರಕ್ತ ಮಠದ ಗುರುಸಂಗನಬಸವ ಸ್ವಾಮೀಜಿ, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಜೈನಾಪುರ ಹಿರೇಮಠದ ರೇಣುಕಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.

Post Comments (+)