ಧಾರವಾಡ ಕ್ಷೇತ್ರ: ಸ್ಪರ್ಧಿಗಳು 19; ನಿರ್ಣಾಯಕರು 17ಲಕ್ಷ

ಸೋಮವಾರ, ಮೇ 27, 2019
29 °C

ಧಾರವಾಡ ಕ್ಷೇತ್ರ: ಸ್ಪರ್ಧಿಗಳು 19; ನಿರ್ಣಾಯಕರು 17ಲಕ್ಷ

Published:
Updated:

ಧಾರವಾಡ: ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರಕ್ಕೆ ಮಂಗಳವಾರ ಮತದಾನ ನಡೆಯಲಿದ್ದು, 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗೆಯೇ 8 ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಈ ಕ್ಷೇತ್ರದಲ್ಲಿ 17,25,335 ಮತದಾರರು ಇದ್ದಾರೆ.

ಬೆಳಿಗ್ಗೆ 7ರಿಂದ ಸಂಜೆ 6ರವೆಗೆ ಮತದಾನ ನಡೆಯಲಿದೆ. ಕ್ಷೇತ್ರದಲ್ಲಿ 8,75,479 ಪುರುಷ ಮತದಾರರು, 8,49,750 ಮಹಿಳಾ ಮತದಾರರು ಮತ್ತು 106 ತೃತೀಯ ಲಿಂಗಿಗಳು ಇದ್ದಾರೆ. ಇದೇ ಮೊದಲ ಬಾರಿಗೆ ಮತದಾನದಲ್ಲಿ ಪಾಲ್ಗೊಳ್ಳುತ್ತಿರುವ 18ರಿಂದ 19ರ ವಯೋಮಾನದ 33,144 ಮತದಾರರು ಇದ್ದಾರೆ.

ಮತದಾನಕ್ಕೆ ಕೊಂಡೊಯ್ಯಬೇಕಾದ ದಾಖಲೆಗಳು: ಕೇಂದ್ರ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಆಯೋಗ ಸೂಚಿಸಿರುವ ಈ 11 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು. ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಅಥವಾ ರಾಜ್ಯ ಸರ್ಕಾರ ಇಲ್ಲವೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ಭಾವಚಿತ್ರವಿರುವ ಪಾಸ್‌ಬುಕ್, ಪಾನ್‌ಕಾರ್ಡ್, ಕಾರ್ಮಿಕ ಸಚಿವಾಲಯದ ಸ್ಮಾರ್ಟ್ ಕಾರ್ಡ್, ನರೇಗಾ ಜಾಬ್‌ಕಾರ್ಡ್, ಇಎಸ್‌ಐ ಆರೋಗ್ಯ ವಿಮೆ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಆಧಾರ ಕಾರ್ಡ್ ಅಥವಾ ಸಂಸದರು, ಶಾಸಕರಿಗೆ ನೀಡಿರುವ ಗುರುತಿನ ಚೀಟಿ ಬಳಸಬಹುದಾಗಿದೆ. ಜಿಲ್ಲೆಯ ಮತದಾರರು ತಮ್ಮ ಹಕ್ಕು ಚಲಾಯಿಸಿ ಉತ್ತಮ ಮತದಾನ ದಾಖಲಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ.ಸತೀಶ ಕೋರಿದ್ದಾರೆ.

ಮತದಾನಕ್ಕೆ ಮೊಬೈಲ್ ಒಯ್ಯಬೇಡಿ: ಲೋಕಸಭಾ ಕ್ಷೇತ್ರದ ಮತದಾನದ ವೇಳೆ ಮತಗಟ್ಟೆ ಒಳಗೆ ಮೊಬೈಲ್ ಬಳಕೆಯನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ, ಮತಗಟ್ಟೆಯ ಅಧಿಕಾರಿ, ಪಿಆರ್‌ಓ ಅವರನ್ನು ಹೊರತುಪಡಿಸಿ ಉಳಿದವರಿಗೆ ಮೊಬೈಲ್ ಫೋನ್, ಟ್ಯಾಬ್ಲೆಟ್, ಕಾರ್ಡ್‌ಲೆಸ್ ಫೋನ್ ಬಳಕೆಗೆ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಸೆಲ್ಫಿ ತೆಗೆದು ವಾಟ್ಸ್‌ಆ್ಯಪ್ ಮಾಡಿ: ಜಿಲ್ಲೆಯಲ್ಲಿ 18 ವರ್ಷ ತುಂಬಿದ ಹೊಸ ಮತದಾರರು, ಇದೇ ಮೊದಲ ಬಾರಿಗೆ ಮತದಾನಕ್ಕೆ ಅರ್ಹತೆ ಪಡೆದಿರುವ ಯುವಜನರು ಅಧಿಕ ಪ್ರಮಾಣದಲ್ಲಿ ಮತದಾನ ಮಾಡುವುದನ್ನು ಪ್ರೋತ್ಸಾಹಿಸಲು ಜಿಲ್ಲಾ ಸ್ವೀಪ್ ಸಮಿತಿ ಸೆಲ್ಫಿ ಫೋಟೋ ಸ್ಪರ್ಧೆ ಏರ್ಪಡಿಸಿದೆ.

ಮತಗಟ್ಟೆಗೆ ಮೋಬೈಲ್ ನಿಷೇಧಿಸಿರುವುದರಿಂದ ಮತ ಚಲಾಯಿಸಿ, ಬೆರಳಿಗೆ ಹಾಕಿಸಿಕೊಂಡ ಶಾಹಿ ಮತ್ತು ಮತಗಟ್ಟೆಯಿಂದ 100 ಮೀ ದೂರದಲ್ಲಿ ಹೊರಗೆ ಮತಗಟ್ಟೆ ಕಾಣುವಂತೆ ಸೆಲ್ಫಿ ಫೋಟೋ ತೆಗೆದು 9606539555, 9606549555 ಸಂಖ್ಯೆಗಳಿಗೆ ಕಳುಹಿಸಬಹುದು.

ಈ ಸ್ಪರ್ಧೆಯು ವೈಯಕ್ತಿಕ ಮತ್ತು ಗುಂಪು ಎರಡು ವಿಭಾಗಗಳಲ್ಲಿ ನಡೆಯಲಿದೆ. ಆಸಕ್ತರು ಉತ್ತಮ ಸೆಲ್ಫಿ ತೆಗೆದುಕೊಂಡು ತಮ್ಮ ಹೆಸರು, ಊರು, ಮತಗಟ್ಟೆ, ಸಂಪರ್ಕ ಸಂಖ್ಯೆ ವಿವರಗಳನ್ನು ವಾಟ್ಸಾಪ್ ಸಂಖ್ಯೆಗೆ ಕಳಿಸಬೇಕು ಉತ್ತಮ ಚಿತ್ರಗಳಿಗೆ ಬಹುಮಾನ ಸಿಗಲಿದೆ ಎಂದು  ಡಾ.ಬಿ.ಸಿ. ಸತೀಶ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !