ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಡಿ.13ರಂದು ಬೆಳಗಾವಿಯಲ್ಲಿ ಪ್ರತಿಭಟನೆ

Published 11 ಡಿಸೆಂಬರ್ 2023, 9:51 IST
Last Updated 11 ಡಿಸೆಂಬರ್ 2023, 9:51 IST
ಅಕ್ಷರ ಗಾತ್ರ

ಧಾರವಾಡ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ, ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳನ್ನು ಒಬಿಸಿಗೆ (ಹಿಂದುಳಿದ ಸಮುದಾಯ) ಸೇರಿಸುವಂತೆ ಶಿಫಾರಸು ಮಾಡಲು ಆಗ್ರಹಿಸಿ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿಲ್ಲ. ಮುಖ್ಯಮಂತ್ರಿಯ ನಿರ್ಲಕ್ಷ್ಯ ಧೋರಣೆಗೆ ಅಸಮಾಧಾನಗೊಂಡು ಡಿಸೆಂಬರ್‌ 13ರಂದು ಬೆಳಗಾವಿಯಲ್ಲಿ ಹೋರಾಟಕ್ಕೆ ನಿರ್ಧರಿಸಿದ್ದೇವೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭಿಸುತ್ತೇವೆ. ಅಲ್ಲಿಂದ ಸುವರ್ಣ ಸೌಧಕ್ಕೆ ತೆರಳಿ ಹಕ್ಕೋತ್ತಾಯ ಮಂಡಿಸಲು ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದರು.

‘ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮನವಿ ಮಾಡಿದ್ದೇವೆ. ಅವರು ಒಪ್ಪಿದ್ದಾರೆ. ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ಧ್ವನಿ ಎತ್ತಲು ಸಮುದಾಯದ ಶಾಸಕರು, ಸಚಿವರಿಗೆ ಕೋರಿದ್ದೇವೆ’ ಎಂದರು.

‘ಸಿದ್ದರಾಮಯ್ಯ ಅವರು ಹಾಲುಮತ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಹಾಗೂ ಕುಂಚಟಿಗ ಸಮುದಾಯವನ್ನು ‘ಒಬಿಸಿ‘ಗೆ ಸೇರಿಸಲು ಶಿಫಾರಸು ಮಾಡಿದ್ಧಾರೆ. ಅದೇ ರೀತಿ ಪಂಚಮಸಾಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳನ್ನು ಒಬಿಸಿಗೆ (ಹಿಂದುಳಿದ ಸಮುದಾಯ) ಸೇರಿಸಲು ಏನೂ ತೊಡಕಾಗಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಗಟ್ಟಿ ಮನಸ್ಸು ಮಾಡಬೇಕು. ಇನ್ನು ಎರಡು ದಿನ ಸಮಯ ಇದೆ. ಸಮುದಾಯದ ಶಾಸಕರ ಸಭೆ ನಡೆಸಿ ಕ್ರಮ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಬೆಳಗಾವಿಯಲ್ಲಿ ನಡೆಯುವ ಹೋರಾಟದಲ್ಲಿ ಸಮುದಾಯದ ಎಲ್ಲರೂ ಪಾಲ್ಗೊಳ್ಳಬೇಕು. ಸುವರ್ಣ ಸೌಧದ ಮುಂದಿರುವ ಅಂಬೇಡ್ಕರ್‌, ರಾಯಣ್ಣ, ಚೆನ್ನಮ್ಮ ಅವರ ಪ್ರತಿಮೆ ಮುಂದೆ ಹೋರಾಟ ನಡೆಸಲು ನಿರ್ಧರಿಸಿದ್ದೇವೆ. ಪೊಲೀಸರು ಅವಕಾಶ ಕಲ್ಪಿಸಬೇಕು, ಬಂದೋಬಸ್ತ್‌ ಮಾಡಬೇಕು. ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸಮುದಾಯದವರು ಅಸಮಾಧಾನ ತೋರುವ ಲಕ್ಷಣಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT