ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ: ನವದುರ್ಗೆಯರಿಗೆ ನವಖಾದ್ಯ ನೈವೇದ್ಯ

ತುಪ್ಪ, ಸಕ್ಕರೆ, ಹಾಲು, ಬಾಳೆಹಣ್ಣು, ಜೇನು, ಎಣ್ಣೆ, ಬೆಲ್ಲ, ಕೊಬ್ಬರಿ, ಎಳ್ಳು ಬಳಕೆ
Last Updated 28 ಸೆಪ್ಟೆಂಬರ್ 2022, 5:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದುರ್ಗಾಮಾತೆಯನ್ನು ಒಂಬತ್ತು ಶಕ್ತಿರೂಪಗಳಲ್ಲಿ ಪೂಜಿಸಿ ಭಜಿಸುವ ಆರಾಧನೆಯೇ ನವರಾತ್ರಿ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕುಶ್ಮಾಂಡ ದೇವಿ, ಸ್ಕಂದಮಾತೆ, ಕಾತ್ಯಾಯಿನಿ, ಕಾಳಿಮಾತೆ, ಮಹಾ
ಗೌರಿ, ಸಿದ್ಧಿದಾತ್ರಿ ಎಂಬ ಹೆಸರಿನಿಂದ ಪೂಜಿಸುವುದು ನವರಾತ್ರಿಯ ವಿಶೇಷ.

ಒಂಬತ್ತು ದಿನಗಳೂ ದುರ್ಗಾದೇವಿಯನ್ನು ಪ್ರತಿನಿತ್ಯ ಒಂದೊಂದು ಬಣ್ಣದ ಸೀರೆಯಿಂದ ಅಲಂಕರಿಸಿ, ವಿಶೇಷ ಖಾದ್ಯ ಪದಾರ್ಥದ ನೈವೇದ್ಯ ಮಾಡುವುದು ಸಂಪ್ರದಾಯ. ಮೊದಲ ದಿನ ಶೈಲಪುತ್ರಿದೇವಿಗೆ ಹಳದಿ ಬಣ್ಣದ ಸೀರೆಯಿಂದ ಅಲಂಕರಿಸಿದರೆ ತುಪ್ಪದಿಂದ ತಯಾರಿಸಿದ ಖಾದ್ಯವನ್ನು ನೈವೇದ್ಯವಾಗಿ ಅರ್ಪಿಸಲಾಗುವುದು.

ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ ಹಸಿರು ಬಣ್ಣದ ಸೀರೆಯಿಂದ ಅಲಂಕಾರ ಮಾಡಿ ಸಕ್ಕರೆಯಿಂದ ಸಿದ್ಧ
ಪಡಿಸುವ ಸಿಹಿ ಪದಾರ್ಥವನ್ನು ಸಿದ್ಧಪಡಿಸಿ ಅರ್ಪಿಸಲಾಗುವುದು. ಮೂರನೇ ದಿನಚಂದ್ರಘಂಟಾ ದೇವಿಗೆ ಬಿಳಿ ಬಣ್ಣದ ಸೀರೆ ಅಲಂಕಾರದೊಂದಿಗೆ ಹಾಲಿನಿಂದ ತಯಾರಿಸಲಾಗುವ ಖಾದ್ಯದ ಅರ್ಪಣೆ ಮಾಡಲಾಗುವುದು. ನಾಲ್ಕನೇ ದಿನ ಕುಶ್ಮಾಂಡ ದೇವಿಗೆ ಕೇಸರಿ ಬಣ್ಣದ ಅಲಂಕಾರ, ಕರಿದ ಪದಾರ್ಥಗಳ ನೈವೇದ್ಯ. ಐದನೇ ದಿನ ಸ್ಕಂದಮಾತೆಗೆ ಮತ್ತೆ ಬಿಳಿ ಮಣ್ಣದ ಸೀರೆ ಅಲಂಕಾರ, ಬಾಳೆಹಣ್ಣಿನಿಂದ ತಯಾರಿಸುವ ತಿನಿಸಿನ ಅರ್ಪಣೆ; ಆರನೇ ದಿನ ಕಾತ್ಯಾಯಿನಿಗೆ ಕೆಂಪು ಬಣ್ಣದ ಸೀರೆ ಅಲಂಕಾರದೊಂದಿಗೆ ಜೇನುತುಪ್ಪದ ಅಭಿಷೇಕ ಅಥವಾ ಜೇನು ತುಪ್ಪದಿಂದ ತಯಾರಿಸುವ ಭಕ್ಷ್ಯದ ನೈವೇದ್ಯ ಮಾಡ
ಲಾಗುವುದು.

ಏಳನೇ ದಿನ ಕಾಳಿಮಾತೆಗೆ ನೀಲಿ ಬಣ್ಣದ ಸೀರೆಯ ಅಲಂಕಾರ ಹಾಗೂ ಬೆಲ್ಲದಿಂದ ಸಿದ್ಧಪಡಿಸುವ ಹೋಳಿಗೆ, ಖರ್ಚಿಕಾಯಿ, ಕಡುಬನ್ನು ಅರ್ಪಿಸಲಾಗುವುದು. ಎಂಟನೇ ದಿನ ಮಹಾಗೌರಿಗೆ ದಟ್ಟಹಸಿರು ಬಣ್ಣದ ಸೀರೆಯನ್ನುಡಿಸಿ, ತೆಂಗಿನ ಕಾಯಿಯಿಂದ ತಯಾರಿಸಲಾಗುವ ಖಾದ್ಯವನ್ನು ನೈವೇದ್ಯಕ್ಕಿಡಲಾಗುವುದು. ಒಂಬತ್ತನೇ ದಿನ ಸಿದ್ಧಿದಾತ್ರಿಗೆ ನೇರಳೆ ಬಣ್ಣದ ಸೀರೆ ತೊಡಿಸಿ, ಎಳ್ಳಿನಿಂದ ತಯಾರಿಸುವ ಪದಾರ್ಥಗಳನ್ನು ಅರ್ಪಿಸುವುದು ಸಂಪ್ರದಾಯ ಎಂದು ಪಂಡಿತ ಸುಘೋಶ ಆಚಾರ್ಯ ಕೊರ್ಲಹಳ್ಳಿ, ಗಿರೀಶ ಗಲಗಲಿ ಮಾಹಿತಿಯಲ್ಲಿ ತಿಳಿಸಿದರು.

ಮೂಲ ಹುಬ್ಬಳ್ಳಿಗರ ಜೊತೆ ರಾಜಸ್ಥಾನಿಗಳು, ಗುಜರಾತಿಗಳೂ ನೆಲೆಕಂಡುಕೊಂಡಿರುವುದರಿಂದ ಅವರೂ ಕೂಡ ತಮ್ಮದೇ ಸಂಪ್ರದಾಯದ ಮೂಲಕ ದುರ್ಗಾಮಾತೆಯನ್ನು ಪೂಜಿಸುತ್ತಾರೆ. ರಾಜಸ್ಥಾನಿಗಳು ಕೂಡ ಹುಗ್ಗಿ, ಶೀರಾ, ದಾಲ್‌ ರೋಟಿ ಕುರ್ಮಾ, ಖೀರ್, ಅನ್ನದ ಕೇಸರಿಬಾತ್‌, ದಾಲ್‌ ಸೀರಾವನ್ನು ನೈವೇದ್ಯವಾಗಿ ಸಲ್ಲಿಸುತ್ತಾರೆ. ಕೆಲವು ಸಮಾಜದವರು ಒಂಬತ್ತು ದಿನ ಒಂಬತ್ತು ಬಗೆಯ ಹೋಳಿಗೆಗಳನ್ನು (ಶೇಂಗಾ, ಖರ್ಜೂರ, ಅನಾನಸ್‌, ಕೊಬ್ಬರಿ, ಕಡ್ಲೆಬೇಳೆ–ಬೆಲ್ಲ, ತೊಗರಿ
ಬೇಳೆ, ಅಂಜೂರ, ಖಾವಾ, ಬದಾಮ ಹೋಳಿಗೆ) ಸಿದ್ಧಪಡಿಸಿ ಅರ್ಪಿಸುವರು ಎಂದು ಹುಬ್ಬಳ್ಳಿಯ ಭವಾನಿ ನಗರ ನಿವಾಸಿ ರಶ್ಮಿ ನಾರಾಯಣ ಹೇಳಿದರು.

ಒಂಬತ್ತು ದಿನ ಒಂಬತ್ತು ಬಗೆಯ ಖಾದ್ಯಗಳನ್ನು ದೇವಿಗೆ ಅರ್ಪಿಸುವುದರಿಂದ ಪೂಜಿಸಿದವರಿಗೆ ಒಳ್ಳೆಯದಾಗ
ಲಿದೆ ಎಂಬುದು ಭಕ್ತರ ನಂಬಿಕೆ.

ಈರುಳ್ಳಿ, ಬೆಳ್ಳುಳ್ಳಿ ಬಳಕೆ ಇಲ್ಲ

ನವರಾತ್ರಿಯಲ್ಲಿ ಉಪವಾಸ ವ್ರತ ಕೈಗೊಳ್ಳುವವರೂ ಒಂಬತ್ತು ದಿನ ಒಂಬತ್ತು ಬಗೆಯ ಆಹಾರವನ್ನು ಸೇವಿಸುತ್ತಾರೆ. ಆದರೆ ಉಪವಾಸಕ್ಕಾಗಿ ಸಿದ್ಧಪಡಿಸಲಾಗುವ ಪದಾರ್ಥಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಬಳಸುವುದಿಲ್ಲ.

ಹುರುಳಿ ಕಾಳಿನ ಪರೋಟಾ, ಅವಲಕ್ಕಿ ಉಪ್ಪಿಟ್ಟು, ಫ್ರೂಟ್‌ ಸಲಾಡ್‌, ಚಪಾತಿ–ಫ್ರೈ ಆಲೂ ಸಬ್ಜಿ, ಬಾಳೆಕಾಯಿ ಮಸಾಲ ಗ್ರೇವಿ, ಕಡಲೆ ಕಾಳಿನ ಉಸುರುಳ್ಳಿ, ಬಾಳೆ ಹಣ್ಣಿ ಬರ್ಫಿ, ಹೆಸರು ಬೇಳೆ ಹಲ್ವಾ, ಗೋದಿ ಹಲ್ವಾಗಳನ್ನು ಸೇವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT