ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BJP ಕಾರ್ಯಕರ್ತನನ್ನು ಥಳಿಸಿದ ಆರೋಪ: ಇನ್‌ಸ್ಪೆಕ್ಟರ್‌ಗೆ ಪ್ರಲ್ಹಾದ ಜೋಶಿ ತರಾಟೆ

Published 12 ನವೆಂಬರ್ 2023, 16:26 IST
Last Updated 12 ನವೆಂಬರ್ 2023, 16:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಯುವಕನನ್ನು ಠಾಣೆಗೆ ಕರೆಸಿ ಥಳಿಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಧಾರವಾಡ ಶಹರ ಠಾಣೆ ಇನ್‌ಸ್ಪೆಕ್ಟರ್‌ ಎನ್‌.ಸಿ.ಕಾಡದೇವರಮಠ ಅವರನ್ನು ಭಾನುವಾರ ತಮ್ಮ ನಿವಾಸದಲ್ಲಿ ತರಾಟೆಗೆ ತೆಗೆದುಕೊಂಡರು.

ಕೆಲ ದಿನಗಳ ಹಿಂದೆ, ಇಸ್ಪೀಟ್‌ ಆಡುತ್ತಿದ್ದ ಆರೋಪದ ಮೇಲೆ ಧಾರವಾಡದ ಗೊಲ್ಲರ ಓಣಿ ನಿವಾಸಿ, ಬಿಜೆಪಿ ಕಾರ್ಯಕರ್ತ ರವಿ ಗೊಲ್ಲರ ಅವರನ್ನು ಕಾಡದೇವರಮಠ ಅವರು ಠಾಣೆಗೆ ಕರೆಸಿ ಥಳಿಸಿದ್ದರು ಎನ್ನಲಾಗಿದೆ.

ದೀಪಾವಳಿ ಹಬ್ಬಕ್ಕೆ ಶುಭ ಕೋರಲು ಭಾನುವಾರ ಜೋಶಿ ಅವರ ನಿವಾಸಕ್ಕೆ ಬಂದಿದ್ದ ಕಾಡದೇವರಮಠ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಜೋಶಿ, ‘ಇಸ್ಪೀಟ್ ಆಡುತ್ತಿದ್ದರೆ ದಾಳಿ ನಡೆಸಿ ಅವರನ್ನು ಬಂಧಿಸಬೇಕಿತ್ತು. ಅವರು ತಪ್ಪು ಮಾಡಿದ್ದರೆ ನಾನು ಪ್ರೋತ್ಸಾಹ ನೀಡುವುದಿಲ್ಲ. ಠಾಣೆಗೆ ಕರೆಸಿ ಹೊಡೆಯಲು ಏನು ಅಧಿಕಾರ ಇದೆ?’ ಎಂದು ಹರಿಹಾಯ್ದರು.

‘ಯುವಕ ತಿದ್ದಿಕೊಳ್ಳಲಿ ಎಂದು ಗಲ್ಲಕ್ಕೆ ಹೊಡೆದಿದ್ದೆ’ ಎಂದು ಇನ್‌ಸ್ಪೆಕ್ಟರ್‌ ಹೇಳಿದ್ದಕ್ಕೆ, ‘ನಾನು ನಿಮಗೆ ನಾಲ್ಕು ಗುದ್ದಿದರೆ ಅದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ಅವರು ತಪ್ಪು ಮಾಡಿದ್ದರೂ ನಿಮಗೆ ಹೊಡೆಯಲು ಏನು ಅಧಿಕಾರ ಇದೆ? ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಿತ್ತು’ ಎಂದರು.

‘ನೀವು ಹೊಡೆದಿದ್ದರ ಬಗ್ಗೆ ವಿಡಿಯೊ ರೆಕಾರ್ಡ್ ಇದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗ, ಆಯುಕ್ತರಿಗೆ ದೂರು ನೀಡುತ್ತೇನೆ. ಠಾಣೆ ಎದುರು ಬಂದು ಪ್ರತಿಭಟನೆ ಮಾಡುತ್ತೇನೆ. ಏನು ಆಗುತ್ತದೆ ನೋಡೋಣ’ ಎಂದು ಏರುಧ್ವನಿಯಲ್ಲಿ ಹೇಳಿದರು.

‘ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕೆ ಕಾಂಗ್ರೆಸ್‌ನವರ ಮಾತು ಕೇಳಿಕೊಂಡು ಈ ರೀತಿ ಮಾಡುತ್ತಿದ್ದೀರಾ? ಅವರ ಮೇಲೆ ಯಾವ ಹಳೆ ಪ್ರಕರಣಗಳು ಇವೆ? ಅವರ ಬಳಿ ಬಂದೂಕು ಸಿಕ್ಕಿದ್ದರೆ ಅದನ್ನು ಹಾಜರುಪಡಿಸಿ. ನಾನೂ ಹೋರಾಟ ಮಾಡಿ ಬಂದಿದ್ದೇವೆ. ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ’ ಎಂದು ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT