ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಖಾದಿ ಧ್ವಜಕ್ಕೆ ಕುತ್ತು ತಂದ ತಿದ್ದುಪಡಿ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಸಿದ ಕೇಂದ್ರ ಸರ್ಕಾರದ ನಿರ್ಧಾರ
Last Updated 13 ಜುಲೈ 2022, 2:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರವು ‘ಧ್ವಜ ಸಂಹಿತೆ-2002’ಕ್ಕೆ ತಿದ್ದುಪಡಿ ತಂದು ಪಾಲಿಸ್ಟರ್‌ ತ್ರಿವರ್ಣ ಧ್ವಜಗಳ ತಯಾರಿಕೆಗೆ ಅನುಮತಿ ನೀಡಿರುವುದರಿಂದ,ದೇಶದಲ್ಲಿ ಖಾದಿ ಧ್ವಜಗಳನ್ನು ತಯಾರಿಸುವ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಏಕೈಕ ಖಾದಿ ಗ್ರಾಮೋದ್ಯೋಗ ಕೇಂದ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆಯಿಂದ (ಬಿಐಎಸ್‌) ಮಾನ್ಯತೆ ಪಡೆದಿರುವ ಈ ಕೇಂದ್ರದಲ್ಲಿ, ಪ್ರತಿ ವರ್ಷ ₹3 ಕೋಟಿಯಿಂದ ₹3.5 ಕೋಟಿವರೆಗೆ ವಹಿವಾಟು ನಡೆಯುತ್ತಿತ್ತು.ಅಂದಾಜು 70 ಸಾವಿರ ತ್ರಿವರ್ಣ ಧ್ವಜಗಳು ಮಾರಾಟವಾಗುತ್ತಿದ್ದವು.ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಈ ವಹಿವಾಟು ಏರಿಕೆಯಾಗುವ ನಿರೀಕ್ಷೆ ಇತ್ತು.

ತಲೆ ಕೆಳಗಾದ ಲೆಕ್ಕಾಚಾರ: ‘ಬೇಡಿಕೆ ಹೆಚ್ಚುವ ಸಾಧ್ಯತೆಯಿದ್ದು, ಧ್ವಜ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ನಿರ್ದೇಶನ ನೀಡಿತ್ತು. ವಹಿವಾಟು ₹5 ಕೋಟಿಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ತಂದಿರುವ ತಿದ್ದುಪಡಿಯು ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗಾಗಿಸಿದೆ. ಇದರಿಂದಾಗಿ ಗ್ರಾಮೋದ್ಯೋಗದ ವಹಿವಾಟು ಕಳೆದ ವರ್ಷಕ್ಕಿಂತಲೂ ಕುಸಿತ ಕಂಡಿದೆ’ಎಂದು ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಭೆ ಬಳಿಕ ತೀರ್ಮಾನ: ‘ಪಾಲಿಸ್ಟರ್ ತ್ರಿವರ್ಣ ಧ್ವಜಕ್ಕೆ ಅವಕಾಶ ಕಲ್ಪಿಸಿರು
ವುದನ್ನು ವಿರೋಧಿಸಿ ಮುಂದೆ ಯಾವ ರೀತಿಯ ಹೋರಾಟ ಮಾಡಬೇಕು ಎನ್ನುವುದನ್ನು ಫೆಡರೇಷನ್‌ ಸಭೆ ನಡೆಸಿ, ನಿರ್ಧರಿಸಲಾಗುವುದು.ಸತ್ಯಾಗ್ರಹ ಮಾಡಬೇಕೇ, ಸುಪ್ರೀಂ ಕೋರ್ಟ್‌ನ‌ಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಬೇಕೇ ಅಥವಾ ಕೇಂದ್ರ ಸರ್ಕಾರಕ್ಕೆ ನಿಯೋಗ ಹೋಗಿ ಭೇಟಿ ಮಾಡುವುದು ಸೂಕ್ತವೇ ಎನ್ನುವುದರ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

‘ಕೇಂದ್ರ ಸರ್ಕಾರದ ತಿದ್ದುಪಡಿಯಿಂದ ಮುಂದಿನ ದಿನಗಳಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ. ಬೆಂಗೇರಿ ಕೇಂದ್ರವೊಂದರಲ್ಲೇ 1,200 ಸಿ‌ಬ್ಬಂದಿ ಕೆಲಸ ಮಾಡುತ್ತಿದ್ದು, ಎಲ್ಲರೂ ಆತಂಕದಲ್ಲಿದ್ದಾರೆ’ ಎಂದು ರಾಷ್ಟ್ರಧ್ವಜ ತಯಾರಿಕೆ ಕೇಂದ್ರದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದರು.

ವಹಿವಾಟು ಕುಸಿತ; ಮಾರಾಟವಾಗದ ₹80 ಲಕ್ಷ ಮೌಲ್ಯದ ಧ್ವಜಗಳು

‘ಸಾಮಾನ್ಯವಾಗಿ ಪ್ರತಿ ವರ್ಷ ಜೂನ್‌ ನಂತರ ಹೆಚ್ಚಿನ ಪ್ರಮಾಣದಲ್ಲಿ ರಾಷ್ಟ್ರಧ್ವಜಕ್ಕೆ ಬೇಡಿಕೆ ಬರುತ್ತಿತ್ತು. ಆದರೆ, ಈ ವರ್ಷ ಬೇಡಿಕೆ ಬಂದಿಲ್ಲ. ಏಪ್ರಿಲ್‌ನಿಂದ ಜೂನ್‌ ಅಂತ್ಯದವರೆಗೆ ₹70 ಲಕ್ಷ ವಹಿವಾಟು ನಡೆದಿದೆ. ಇತ್ತೀಚಿನ ವರ್ಷಗಳಲ್ಲಾದ ಅತ್ಯಂತ ಕಡಿಮೆ ವಹಿವಾಟು ಇದಾಗಿದೆ. ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸರಕು ಉಳಿಯುತ್ತಿರಲಿಲ್ಲ. ಬೇಡಿಕೆ ಬಂದಂತೆ ಸರಬರಾಜು ಮಾಡುತ್ತಿದ್ದೆವು. ಇದೀಗ ₹80 ಲಕ್ಷ ಮೌಲ್ಯದ ತ್ರಿವರ್ಣ ಧ್ವಜಗಳು ಗೋದಾಮಿನಲ್ಲೇ ಉಳಿದಿವೆ. ಅಲ್ಲದೆ, ₹1 ಕೋಟಿಗೂ ಹೆಚ್ಚು ಕಚ್ಚಾವಸ್ತು ಸಿದ್ಧವಿದೆ’ಎಂದು ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT