ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಎಸ್ಟೇಟ್‌ ಕಾರಲ್ಲಿ ಹಳ್ಳಿಹಳ್ಳಿ ಸಂಚರಿಸಿದ್ದೆವು: ಬೆಲ್ಲದ

Last Updated 12 ನವೆಂಬರ್ 2018, 15:43 IST
ಅಕ್ಷರ ಗಾತ್ರ

ಜಯಪ್ರಕಾಶ್‌ ನಾರಾಯಣ ಅವರ ಚಳವಳಿಯಿಂದ ಪ್ರಭಾವಿತನಾಗಿದ್ದ ನಾನು, ಜನತಾ ಪಕ್ಷ ತ್ಯಜಿಸಿ 1991ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದೆ. ನಂತರ ಪಕ್ಷವು ನನ್ನನ್ನು ಅಖಂಡ ಧಾರವಾಡ ಜಿಲ್ಲೆಯ ಅಧ್ಯಕ್ಷನನ್ನಾಗಿ ನೇಮಕ ಮಾಡಿತ್ತು. ಅನಂತಕುಮಾರ್‌ ಆಗಷ್ಟೇ ಎಬಿವಿಪಿಯಿಂದ ಬಿಜೆಪಿ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದರು ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸ್ಮರಿಸಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡ ಅವರು, ಹುಬ್ಬಳ್ಳಿಯ ಮೇದಾರ ಓಣಿಯ ಅಟ್ಟದ ಮೇಲೆ ಪಕ್ಷದ ಕಚೇರಿ ಇತ್ತು. ನಂತರ ನಡೆದ ಚುನಾವಣೆಯಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೆ. ಅನಂತಕುಮಾರ್‌ ತಾಯಿ ಗಿರಿಜಾಶಾಸ್ತ್ರಿ ಅವರು ಪಾಲಿಕೆ ಸದಸ್ಯರಾಗಿ ನಂತರ ಉಪಮೇಯರ್‌ ಆಗಿ ಆಯ್ಕೆಯಾಗಿದ್ದರು. ಹಾಗಾಗಿ, ಅನಂತಕುಮಾರ್‌ ಅವರಿಗೆ ರಾಜಕೀಯ ಪ್ರಜ್ಞೆ ತಾಯಿಯಿಂದಲೇ ಬೆಳೆದಿತ್ತು. ನಾನು ಪಕ್ಷದ ಅಧ್ಯಕ್ಷನೂ ಆಗಿದ್ದರಿಂದ ಅಟ್ಟದ ಮೇಲಿನ ಕಚೇರಿಯಲ್ಲಿ ಸಭೆ ನಡೆಸಿ ಪಕ್ಷದ ಸಂಘಟನೆಯ ಬಗ್ಗೆ ಶಾಸಕರಾದ ಜಗದೀಶ ಶೆಟ್ಟರ್‌, ಅಶೋಕ ಕಾಟವೆ ಹಾಗೂ ಹಲವು ಪಾಲಿಕೆ ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದೆ ಎಂದು ಸ್ಮರಿಸಿದರು.


‘ನಾನು ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡುವ ಉದ್ಯಮಿಯಾಗಿದ್ದರಿಂದ ಸಹಜವಾಗಿ ಬೇರೆ ಬೇರೆ ಊರುಗಳಿಗೆ ಓಡಾಡಬೇಕಿತ್ತು. ಅದಕ್ಕಾಗಿ, ನಾನೊಂದು ಟಾಟಾ ಎಸ್ಟೇಟ್‌ ಕಾರು ಹಾಗೂ ಮೆಟಡೋರ್‌ ಖರೀದಿಸಿ ಬಳಸುತ್ತಿದ್ದೆ. ಪಕ್ಷದ ಸಂಘಟನೆಗೆಂದು ಅನಂತಕುಮಾರ್‌ ಅವರನ್ನು ಕರೆದುಕೊಂಡು ಕಾರಿನಲ್ಲಿಯೇ ಹಳ್ಳಿ ಹಳ್ಳಿ ಸುತ್ತುತ್ತಿದ್ದೆ. ಅದಾಗಲೇ ಪ್ರಖಾಂಡ ಪಾಂಡಿತ್ಯವನ್ನು ಮೈಗೂಡಿಸಿಕೊಂಡಿದ್ದ ಅನಂತಕುಮಾರ್‌ ಅವರು ಉತ್ತಮ ಭಾಷಣ ಕಲೆಯಿಂದಾಗಿ ಜನರನ್ನು ತಮ್ಮತ್ತ ಸೆಳೆಯುತ್ತಿದ್ದರು’ ಎಂದರು.


‘ನಾನು ಶಾಸಕ ಸ್ಥಾನದಿಂದ ನಿವೃತ್ತಿ ಪಡೆದ ಬಳಿಕ ನನ್ನ ಮಗ ಅರವಿಂದನಿಗೆ ಟಿಕೆಟ್‌ ಕೊಡಿಸುವಲ್ಲಿ ಅನಂತಕುಮಾರ್‌ ಪಾತ್ರ ಬಹಳ ದೊಡ್ಡದು. ಭವಿಷ್ಯದ ಬಗ್ಗೆ ಅವರು ಮುಂಚಿತವಾಗಿಯೇ ಯೋಚನೆ ಮಾಡುತ್ತಿದ್ದರು. ಹೀಗಾಗಿ, ಅರವಿಂದ ಶಾಸಕ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಅವರು ಮನಗಂಡಿದ್ದರು’ ಎಂದು ಚಂದ್ರಕಾಂತ ಬೆಲ್ಲದ ಹೇಳಿದರು.

ಅತ್ಯಂತ ಚುರುಕಿನ ವ್ಯಕ್ತಿತ್ವ

ಅಟಲ್‌ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ನಾನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವನಾಗಿದ್ದರೆ ಅನಂತಕುಮಾರ್‌ ಅವರು ನಾಗರಿಕ ವಿಮಾನಯಾನ ಸಚಿವರಾಗಿದ್ದರು. ಏನೇ ಕೆಲಸವನ್ನು ವಹಿಸಿದ್ದರೂ ಆಸ್ಥೆಯಿಂದ ಮಾಡುವ ಮೂಲಕ ಸರ್ಕಾರದ ಒಬ್ಬ ಪ್ರಭಾವಿ ಸಚಿವರಾಗಿ ವಾಜಪೇಯಿ ಅವರ ಗಮನ ಸೆಳೆದಿದ್ದರು. ರಾಜ್ಯದ ಹಿತಾಸಕ್ತಿ ಕಾಯುವ ವಿಚಾರ ಬಂದಾಗಲೂ ಅವರು ಸದಾ ರಾಜ್ಯದ ಪರವಾಗಿ ನಿರ್ಣಯ ಕೈಗೊಳ್ಳುವಲ್ಲಿ ಪ್ರಭಾವ ಬೀರುತ್ತಿದ್ದರು.

–ಬಾಬಾಗೌಡ ಪಾಟೀಲ, ಕೇಂದ್ರದ ಮಾಜಿ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT