90 ವರ್ಷದವರೆಗೆ ಬದುಕುತ್ತೀನಿ ಅಂದಿದ್ದ ಅನಂತಕುಮಾರ್‌!

7
ದೆಹಲಿಯಲ್ಲಿ ಅವರನ್ನು ಭೇಟಿಯಾದಾಗಿನ ಘಟನೆಯನ್ನು ಹಂಚಿಕೊಂಡ ಲಿಂಗರಾಜ ಪಾಟೀಲ

90 ವರ್ಷದವರೆಗೆ ಬದುಕುತ್ತೀನಿ ಅಂದಿದ್ದ ಅನಂತಕುಮಾರ್‌!

Published:
Updated:
Deccan Herald

ಹುಬ್ಬಳ್ಳಿ: ನನ್ನ ಜಾತಕ, ಕುಂಡಲಿಯ ಪ್ರಕಾರ ನಾನು 90 ವರ್ಷದವರೆಗೂ ಬದುಕುತ್ತೀನಿ. 74 ವರ್ಷದವರೆಗೂ ರಾಜಕೀಯದಲ್ಲಿ ಇರ್ತೀನಿ. ಇನ್ನೂ ಎರಡು ಹಂತ ರಾಜಕೀಯದಲ್ಲಿ ಮೇಲೇರುತ್ತೀನಿ. ಆ ನಂತರ ನನ್ನ ಜೀವನದ ಸ್ವರೂಪವೇ ಬದಲಾಗಲಿದೆ...

–ಆಗಸ್ಟ್‌ನಲ್ಲಿ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದ ವೇಳೆ ದೆಹಲಿಯ ಅವರ ಕಚೇರಿಗೆ ಭೇಟಿ ನೀಡಿದ್ದ ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರ ಎದುರು ಅನಂತಕುಮಾರ್‌ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದರು.

ಆ ಭಾವನಾತ್ಮಕ ಘಟನಾವಳಿಯನ್ನು ಲಿಂಗರಾಜ ಪಾಟೀಲ ಅವರು ‘ಪ್ರಜಾವಾಣಿ’ ಎದುರು ಬಿಚ್ಚಿಟ್ಟಿದ್ದಾರೆ.

ಆಗಸ್ಟ್‌ ತಿಂಗಳ ಕೊನೆಯ ವಾರ ಅಧಿವೇಶನ ನಡೆಯುತ್ತಿದ್ದ ವೇಳೆಯೇ ನಾವು ಅನಂತಕುಮಾರ್‌ ಅವರ ಕಚೇರಿಗೆ ಹೋದೆವು. ಆ ಸಂದರ್ಭದಲ್ಲಿ ಸದನದಲ್ಲಿ ಪಕ್ಷದ ಸದಸ್ಯರನ್ನು ಒಂದೆಡೆ ಸೇರಿಸಿ ಕೋರಂ ಅಭಾವವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇತ್ತು. ಯಾರಾದರೂ ಸಚಿವರು ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಅನಂತಕುಮಾರ್‌ ನೆರವು ನೀಡಬೇಕಿತ್ತು. ಹೀಗಾಗಿ, ನಮ್ಮನ್ನು ಕಚೇರಿಯಲ್ಲೇ ಕೂರಿಸಿ ಸಂಸತ್‌ ಸಭಾಂಗಣಕ್ಕೆ ತೆರಳಿ ಮಾಹಿತಿ ನೀಡಿ ಬರುತ್ತಿದ್ದರು. ಅಂದು ಮಧ್ಯಾಹ್ನ ಊಟ ಮಾಡಿದ ಬಳಿಕ ನಮ್ಮೊಂದಿಗೆ ಹರಟೆ ಹೊಡೆಯಲು ಶುರು ಮಾಡಿದರು. ಜನ್ಮಕುಂಡಲಿ ಪ್ರಕಾರ ನನ್ನ ಆಯಸ್ಸು 90 ವರ್ಷ. ನಾನು ಸಕ್ರಿಯವಾಗಿ 74 ವರ್ಷದವರೆಗೂ ರಾಜಕೀಯದಲ್ಲಿ ಇರುತ್ತೇನೆ. ಇನ್ನೂ ಎರಡು ಹಂತ ಮೇಲಕ್ಕೆ ಹೋಗ್ತೀನಿ ಎಂದರು. ಆಗ ಮಧ್ಯಪ್ರವೇಶಿಸಿದ ಗೋವಿಂದ ಕಾರಜೋಳರು, ಸರ್‌ ನೀವು ಇನ್ನೂ ರಾಜ್ಯದ ಮುಖ್ಯಮಂತ್ರಿಯಾಗಬೇಕು. ದೇಶದ ಪ್ರಧಾನಮಂತ್ರಿಯಾಗಬೇಕು ಎಂದರು. ತೀರಾ ಖುಷಿ ಬಂದ ಸಂದರ್ಭದಲ್ಲಿ ಅನಂತಕುಮಾರ್‌ ಕೈ ಮೇಲಕ್ಕೆತ್ತಿ ನಕ್ಕು ಬಿಡುತ್ತಿದ್ದರು. ಅಂದು ಸಹ ಕಾರಜೋಳರ ಮಾತಿಗೆ ಕೈ ಎತ್ತಿ ನಕ್ಕುಬಿಟ್ಟರು. ರಾಜಕೀಯದಿಂದ ನಿವೃತ್ತಿ ಪಡೆದ ಬಳಿಕ ಅಧ್ಯಾತ್ಮ ಜೀವನ ನಡೆಸಬೇಕು ಎಂದು ಬಯಸಿದ್ದರು. ಆದರೆ, ವಿಧಿ ಅವರನ್ನು ಬೇಗನೇ ಕರೆಸಿಕೊಂಡು ಬಿಟ್ಟಿತು’ ಎಂದು ಪಾಟೀಲ ಮೌನಕ್ಕೆ ಜಾರಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !