ಶನಿವಾರ, ಜನವರಿ 22, 2022
16 °C
ಆಶಾ ಕಾರ್ಯಕರ್ತೆಯರಿಗೆ ನೀಡಿದ ಭತ್ಯೆಯನ್ನು ಅಂಗನವಾಡಿ ನೌಕರರಿಗೆ ನೀಡದ ಸರ್ಕಾರ

ಕೋವಿಡ್‍ ಭತ್ಯೆ: ತಾರತಮ್ಯ ಆರೋಪ

ಗೋವರ್ಧನ ಎಸ್‌.ಎನ್‌. Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‍ ನಿಯಂತ್ರಣಕ್ಕಾಗಿ ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ ಕೋವಿಡ್‍ ಅಪಾಯ ಭತ್ಯೆ ನೀಡುತ್ತಿರುವ ಸರ್ಕಾರ, ಅಂಗನವಾಡಿ ಕಾರ್ಯಕರ್ತೆಯರನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿಬಂದಿದೆ.

ಕೋವಿಡ್‍ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಸಹ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್‍ ಆರಂಭದಿಂದಲೂ ಆಶಾ ಕಾರ್ಯಕರ್ತೆಯರಿಗೆ ಅಪಾಯ ಭತ್ಯೆಯಾಗಿ ಮಾಸಿಕ ₹1,000 ನೀಡಲಾಗುತ್ತಿದೆ. ಆದರೆ, ಈವರೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಭತ್ಯೆ ನೀಡಿಲ್ಲ.

‘ಕೋವಿಡ್‍ ಸಂದರ್ಭದಲ್ಲಿ ಮನೆ-ಮನೆ ಸಮೀಕ್ಷೆ, ವಿವಿಧೆಡೆ ಕ್ಯಾಂಪ್ ಮಾಡಿ ಜನರ ತಪಾಸಣೆ ಮಾಡಿಸುವುದು, ಕೋವಿಡ್‍ ಪಾಸಿಟಿವ್ ಇದ್ದವರನ್ನು ಆಸ್ಪತ್ರೆಗೆ ಕಳುಹಿಸುವುದು ಸೇರಿದಂತೆ ಲಸಿಕಾ ಕಾರ್ಯಕ್ರಮದಲ್ಲಿ ಈಗಲೂ ಕೆಲಸ ಮಾಡುತ್ತಿದ್ದೇವೆ. ಸೋಂಕು ತಗುಲುವ ಭೀತಿ ಇದ್ದರೂ ಪ್ರಾಣ ಲೆಕ್ಕಿಸದೆ ಶ್ರಮಿಸಿದ್ದೇವೆ. ಆ ಸಂದರ್ಭದಲ್ಲಿ ಗೌರವಧನವನ್ನೂ ವಿಳಂಬ ಮಾಡಲಾಗುತ್ತಿತ್ತು’ ಎಂದು ನವಲಗುಂದ ತಾಲ್ಲೂಕು ಘಟಕದ ಸಿಐಟಿಯು ಅಧ್ಯಕ್ಷೆ, ಅಂಗನವಾಡಿ ಕಾರ್ಯಕರ್ತೆ ಬಸವ್ವ ನಾಗಪ್ಪ ಕಳಸದ ದೂರಿದರು.

‘ಆಶಾ ಕಾರ್ಯಕರ್ತೆಯರಂತೆ ನಮಗೂ ಕೋವಿಡ್‍ ಅಪಾಯ ಭತ್ಯೆ ಸಿಗುವುದೆಂಬ ನಿರೀಕ್ಷೆಯಲ್ಲಿದ್ದೆವು. ಈವರೆಗೆ ಭತ್ಯೆ ಸಿಕ್ಕಿಲ್ಲ. ಕೋವಿಡ್‍ ಪರಿಹಾರವಾಗಿ ಒಂದು ಬಾರಿಗೆ ₹2,000 ನೀಡಿದ್ದು ಬಿಟ್ಟರೆ, ಬೇರಾವ ನೆರವು ದೊರೆತಿಲ್ಲ. ಜೀವನ ನಿರ್ವಹಣೆಗೆ ಸದ್ಯ ನೀಡುತ್ತಿರುವ ಗೌರವಧನವೂ ಸಾಲುವುದಿಲ್ಲ. ನಮ್ಮ ಕೆಲಸ ಪರಿಗಣಿಸಿ ಈವರೆಗಿನ ಒಟ್ಟು ಭತ್ಯೆಯನ್ನು ಇನ್ನಾದರೂ ನೀಡಿದರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.

‘ಪ್ರತಿ ತಿಂಗಳು ₹5,000 ಗೌರವಧನ ಸಿಗುತ್ತಿದೆ. ಒಂದು ಬಾರಿ ಪರಿಹಾರವಾಗಿ ಅಂಗನವಾಡಿ ಸಹಾಯಕಿಯರಿಗೆ ₹1,000 ಮಾತ್ರ ನೀಡಿದ್ದಾರೆ. ಅಂಗನವಾಡಿ ಆರಂಭವಾಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ. ಕೋವಿಡ್‍ ಭತ್ಯೆ ನೀಡಿದರೆ ಜೀವನ ನಿರ್ವಹಣೆಗೆ ಸಹಾಯಕವಾಗುತ್ತದೆ’ ಎಂದು ಅಂಗನವಾಡಿ ಸಹಾಯಕಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು