ಮಂಗಳವಾರ, ಸೆಪ್ಟೆಂಬರ್ 28, 2021
23 °C
ನಾಯಕರ ಮನೆಗಳಿಗೆ ಆಕಾಂಕ್ಷಿಗಳ ದುಂಬಾಲು

ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಉಸ್ತುವಾರಿಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನಾಂಕ ಆರಂಭವಾಗಲು ಒಂದು ದಿನ ಬಾಕಿ ಉಳಿದಿರುವಂತೆ ಎಲ್ಲ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇದರ ನಡುವೆಯೇ ಬಿಜೆಪಿ ಮತ್ತು ಕಾಂಗ್ರೆಸ್‌ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿವೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರನ್ನು ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿದೆ.

ಶಾಸಕ ಆರ್‌.ವಿ. ದೇಶಪಾಂಡೆ ಅವರು ಕಾಂಗ್ರೆಸ್‌ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದು, ಶಿವಾನಂದ ಪಾಟೀಲ ಮತ್ತು ತನ್ವೀರ್‌ ಸೇಠ್‌ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವ ನಾರಾಯಣ ಅವರು ಸಂಯೋಜಕರಾಗಿದ್ದಾರೆ. ಜೆಡಿಎಸ್‌ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಐದು ಜನರನ್ನು ಉಸ್ತುವಾರಿಗಳನ್ನು ನೇಮಿಸಿದೆ.

ಟಿಕೆಟ್‌ಗಾಗಿ ದುಂಬಾಲು: ತಮ್ಮ ನೆಚ್ಚಿನ ನಾಯಕನಿಗೆ ಟಿಕೆಟ್‌ ಕೊಡಬೇಕು ಎಂದು ಕೆಲವು ವಾರ್ಡ್‌ಗಳ ನಾಯಕರು, ಮಹಿಳೆಯರು ಮತ್ತು ಅವರ ಬೆಂಬಲಿಗರು ಶನಿವಾರ ತಂಡೋಪತಂಡವಾಗಿ ಶಾಸಕ ಜಗದೀಶ ಶೆಟ್ಟರ್‌ ಅವರಿಗೆ ಮನೆಗೆ ಹೋಗಿ ಮನವಿ ಸಲ್ಲಿಸಿದರು. ಮಹೇಶ ಟೆಂಗಿನಕಾಯಿ ಅವರಿಗೂ ಮನವಿ ಕೊಟ್ಟರು.

ಬೆಳಿಗ್ಗೆಯಿಂದಲೇ ಬರುತ್ತಿದ್ದ ಕಾರ್ಯಕರ್ತರು ಮನವಿ ಸಲ್ಲಿಸಿದ ಬಳಿಕ ಹೇಗಾದರೂ ಮಾಡಿ ಟಿಕೆಟ್‌ ಕೊಡಿಸಲೇಬೇಕು ಎಂದು ಶೆಟ್ಟರ್‌ ಅವರನ್ನು ದುಂಬಾಲು ಬೀಳುತ್ತಿದ್ದ ಚಿತ್ರಣ ಕಂಡುಬಂತು. ಶೆಟ್ಟರ್‌ ಮನೆಯಲ್ಲಿ ಮನವಿ ಸಲ್ಲಿಸಿ ಹೊರಬಂದು ಕಾರ್ಯಕರ್ತರು ಅವರಿಗೆ ಜೈಕಾರ ಹಾಕುತ್ತಿದ್ದದ್ದು ಕಂಡು ಬಂದಿತು.

ನಾಯಕರ ಸಭೆ: ಸೋಮವಾರ ನಗರದಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಂದ ಜನಾಶೀರ್ವಾದ ಯಾತ್ರೆ ನಡೆಯಲಿದ್ದು, ಒಂದು ದಿನ ಮೊದಲೇ ಅವರು ಇಲ್ಲಿಗೆ ಬರಲಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಭಾನುವಾರವೇ ಹುಬ್ಬಳ್ಳಿಗೆ ಬರಲಿದ್ದಾರೆ. ಕಟೀಲ್‌ ಅವರು ಸೋಮವಾರ ಸ್ಥಳೀಯ ಮುಖಂಡರ ಜೊತೆ ಧಾರವಾಡದಲ್ಲಿ, ಮಂಗಳವಾರ ಹುಬ್ಬಳ್ಳಿಯಲ್ಲಿ ಕೋರ್‌ ಕಮಿಟಿ ಸಭೆ ನಡೆಸಲಿದ್ದಾರೆ.

ಕಾಂಗ್ರೆಸ್‌ನಲ್ಲಿಯೂ ಚುರುಕು: ಇನ್ನೊಂದೆಡೆ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಕಾರ್ಯ ಜೋರಾಗಿತ್ತು. ಎರಡನೇ ದಿನವಾದ ಶನಿವಾರ 220 ಅರ್ಜಿಗಳು ಸಲ್ಲಿಕೆಯಾಗಿವೆ. ಕೆಲವರು ನೇರವಾಗಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರಿಗೆ ಅರ್ಜಿ ಕೊಟ್ಟು ಪರಿಗಣಿಸುವಂತೆ ಕೋರಿದರು.

ಸೋಮವಾರ ಸಭೆ: ಅರ್ಜಿ ಸಲ್ಲಿಕೆಗೆ ಭಾನುವಾರ (ಆ.15) ಕೊನೆಯ ದಿನವಾಗಿದ್ದು, ಸೋಮವಾರ ಬೆಳಿಗ್ಗೆ 11 ಗಂಟೆಗೆ ಧ್ರುವನಾರಾಯಣ, ಚುನಾವಣಾ ಉಸ್ತುವಾರಿಗಳು ಮತ್ತು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಸಭೆ ನಡೆಯಲಿದೆ.

‘ಪಾಲಿಕೆ ಚುನಾವಣೆಗೆ ಟಿಕೆಟ್‌ ನೀಡುವ ಸಂಬಂಧ ನಡೆಯಲಿರುವ ಮೊದಲ ಸಭೆಯಲ್ಲಿ ಆಕಾಂಕ್ಷಿಗಳ ಶಾರ್ಟ್‌ ಲಿಸ್ಟ್‌ ತಯಾರಿಸಲಾಗುವುದು. ಎರಡ್ಮೂರು ದಿನಗಳಲ್ಲಿ ಅಭ್ಯರ್ಥಿಗಳಿಗೆ ಬಿ ಫಾರ್ಮ್‌ ನೀಡಲಾಗುವುದು’ ಎಂದು ಕಾಂಗ್ರೆಸ್‌ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ತಿಳಿಸಿದರು.

 

ಕಾಂಗ್ರೆಸ್‌, ಜೆಡಿಎಸ್‌ನಿಂದ ಶುಲ್ಕ ನಿಗದಿ

ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವವರು ಅರ್ಜಿ ನಮೂನೆಗೆ ₹100 ಮತ್ತು ಪಕ್ಷದ ಖಾತೆಗೆ ಡಿಡಿ ರೂಪದಲ್ಲಿ ₹5,000 ಪಾವತಿಸಬೇಕಾಗಿದೆ. ಹಿಂದಿನ ಚುನಾವಣೆಯಲ್ಲಿ ಸಾಮಾನ್ಯ ಆಕಾಂಕ್ಷಿಗೆ ₹10 ಸಾವಿರ, ಉಳಿದವರಿಗೆ ₹5,000 ಇತ್ತು. ಈ ಸಲ ಎಲ್ಲರಿಗೂ ಒಂದೇ ಮೊತ್ತದ ಶುಲ್ಕ ನಿಗದಿ ಮಾಡಲಾಗಿದೆ.

ಜೆಡಿಎಸ್‌ ಸಾಮಾನ್ಯ ಆಕಾಂಕ್ಷಿಗೆ ₹5,000, ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ವರ್ಗದವರಿಗೆ ₹2,500 ನಿಗದಿ ಮಾಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸೀಮರದ ‘ಅರ್ಜಿ ಸಲ್ಲಿಸಲು ₹500 ಅಥವಾ ₹1,000 ಮಾತ್ರ ನಿಗದಿ ಮಾಡಲು ಮೊದಲು ನಿರ್ಧರಿಸಲಾಗಿತ್ತು. ಅರ್ಜಿ ಶುಲ್ಕ ಕಡಿಮೆ ಎನ್ನುವ ಕಾರಣಕ್ಕೆ ಚುನಾವಣೆಯ ಬಗ್ಗೆ ಗಂಭೀರತೆ ಇಲ್ಲದವರೆಲ್ಲ ಅರ್ಜಿ ಸಲ್ಲಿಸುತ್ತಾರೆ. ಬಳಿಕ ಅರ್ಜಿ ಪರಿಶೀಲನೆಗೆ ಸವಾಲಾಗುತ್ತದೆ ಎಂದು ಶುಲ್ಕ ಹೆಚ್ಚಿಸಲಾಗಿದೆ. ಶುಲ್ಕವನ್ನು ಪಕ್ಷದ ಹೆಸರಿನಲ್ಲಿಯೇ ತೆಗೆದುಕೊಳ್ಳಲಾಗುತ್ತಿದೆ’ ಎಂದರು.

 

ಟಿಕೆಟ್‌ಗಾಗಿ ಆಕಾಂಕ್ಷಿಗಳ ಸ್ಪರ್ಧೆ ಜೋರಾಗಿದೆ. ಯಾವುದೇ ವಿವಾದಕ್ಕೆ ಆಸ್ಪದ ಕೊಡದಂತೆ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಟಿಕೆಟ್‌ ಅಂತಿಮಗೊಳಿಸಲಾಗುವುದು.
ಮಹೇಶ ಟೆಂಗಿನಕಾಯಿ
ಬಿಜೆಪಿ ಚುನಾವಣಾ ಉಸ್ತುವಾರಿ

 

ಹಿಂದಿನ ಎಲ್ಲ ಚುನಾವಣೆಗಳಿಗಿಂತ ಈ ಸಲ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಎಲ್ಲರೂ ನನಗೇ ಟಿಕೆಟ್‌ ಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಎಲ್ಲರನ್ನೂ ಸಂಭಾಳಿಸುವುದೇ ಸವಾಲಾಗಿದೆ.
ಅಲ್ತಾಫ್‌ ಹಳ್ಳೂರ
ಮಹಾನಗರ ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು