ಭಾನುವಾರ, ಜೂನ್ 13, 2021
21 °C

ಶಾಸಕರ ಮೇಲೆ ದಾಳಿ; ಬಿಜೆಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬೆಂಗಳೂರಿನ ಪುಲಕೇಶಿ ನಗರದ ವಿಧಾನಸಭಾ ಕ್ಷೇತ್ರದ ದಲಿತ ಸಮಾಜದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೇಲೆ ದಾಳಿ ಮಾಡಿದ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿ ಎಸ್‌.ಸಿ. ಮೋರ್ಚಾ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ, ಪಕ್ಷದ ಪ್ರಮುಖರಾದ ಬಸವರಾಜ ಅಮ್ಮನಬಾವಿ ಮತ್ತು ವೀರಭದ್ರಪ್ಪ ಹಾಲಹರವಿ ಮಾತನಾಡಿ ’ಶ್ರೀನಿವಾಸ ಮೂರ್ತಿ ಅವರ ಕುಟುಂಬವನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಉದ್ದೇಶದಿಂದ ಹಿಂಸಾಚಾರ ನಡೆಸಲಾಗಿದೆ. ಅಲ್ಪಸಂಖ್ಯಾತರ ತುಷ್ಠೀಕರಣಕ್ಕಾಗಿ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ’ ಎಂದು ಆರೋಪಿಸಿದರು.

’ದಲಿತರ ಮೇಲಿನ ದೌರ್ಜನ್ಯಗಳಿಗೆ ಪೂರ್ಣ ವಿರಾಮ ಹಾಕಲು ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಾನಿ ಮಾಡಿದವರಿಂದಲೇ ನಷ್ಟ ವಸೂಲಿ ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಶ್ರೀನಿವಾಸಮೂರ್ತಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು. ಬಳಿಕ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ತಹಶೀಲ್ದಾರ್‌ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಪಕ್ಷದ ಪ್ರಮುಖರಾದ ಪುಂಡಲೀಕ ತಳವಾರ, ಡಿ.ಕೆ. ಚವ್ಹಾಣ, ಚಂದ್ರಶೇಖರ ಗೋಕಾಕ, ದತ್ತಮೂರ್ತಿ ಕುಲಕರ್ಣಿ, ಲಕ್ಷ್ಮಣ ಬೀಳಗಿ, ಹನುಮಂತ ಚಲವಾದಿ, ರವಿ ನಾಯಕ, ಕಿಟ್ಟು ಬಿಜವಾಡ, ಮಂಜುನಾಥ ಎಂ. ಬಿಜವಾಡ, ಹನುಮಂತ ನಾಯಕ, ಶಶಿಕಾಂತ ಬಿಜವಾಡ, ಮಾರುತಿ ಸೊನಾದ, ಶ್ರೀಧರ ಹಳ್ಳಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.