ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೀವ್ರ ರಕ್ತಸ್ರಾವ: ಎರಡು ವರ್ಷದ ಮಗು ಸಾವು- ವೈದ್ಯರ ವಿರುದ್ಧ ಪಾಲಕರ ಆಕ್ರೋಶ

Last Updated 18 ಫೆಬ್ರುವರಿ 2022, 7:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಹೆಮಾಂಜಿಯೋಮಾ(ರಕ್ತನಾಳ ಗಂಟು) ಕಾಯಿಲೆಯಿಂದ ಬಳಲುತ್ತಿದ್ದ ಎರಡು ವರ್ಷದ ಮಗು(ರಕ್ಷಾ)ವಿಗೆ ವೈದ್ಯರು ಸರಿಯಾಗಿ ಶಸ್ತ್ರಚಿಕಿತ್ಸೆ ನಡೆಸದೆ ಮರಣಕ್ಕೆ ಕಾರಣವಾಗಿದ್ದಾರೆ' ಎಂದು‌ ಆರೋಪಿಸಿ ಪಾಲಕರು, ಕುಟುಂಬದವರು ಶುಕ್ರವಾರ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

'ಹುಟ್ಟುತ್ತಲೇ ಮಗುವಿಗೆ ಬಾಯಲ್ಲಿ ಗಂಟು ಇತ್ತು. ಎರಡು ವರ್ಷದ ನಂತರ ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲು ವೈದ್ಯರು ಸೂಚಿಸಿದ್ದರು. ಅದರಂತೆ ಫೆ. 16 ರಂದು ಕಿಮ್ಸ್'ಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಸಂದರ್ಭ ವೈದ್ಯರ ನಿರ್ಲಕ್ಷದಿಂದ ಮಗು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದೆ' ಎಂದು ತಾಜನಗರದ ಮಗುವಿನ ತಂದೆ ಸಂಜೀವ ಚೌಧರಿ ಆರೋಪಿಸಿದರು.

'ನಮ್ಮಿಂದ ಅನುಮತಿ ಪಡೆಯದೇ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದರೆ ಮಗು ಬದುಕಿರುವ ಸಾಧ್ಯತೆ ಬಗ್ಗೆಯೂ ಯಾವ ಮಾಹಿತಿ ನೀಡಿಲ್ಲ. ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ಮಗಳು ಬೆಡ್ ಮೇಲೆ ನಗುತ್ತ, ಚಟುವಟಿಕೆಯಿಂದಲೇ ಇದ್ದಳು. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಅವಳು ಮೃತಪಟ್ಟಿದ್ದಾಳೆ' ಎಂದು ತಾಯಿ ಕೀರ್ತಿ ಚೌಧರಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, 'ಮಗುವಿನ ಬಾಯಲ್ಲಿ ಗಂಟು ದೊಡ್ಡದಾಗಿತ್ತು. ನಮ್ಮ ವೈದ್ಯರಾದ ರಾಜಶೇಖರ ಅವರು ಪರೀಕ್ಷೆಗೆ ಒಳಪಡಿಸಿ, ಅದನ್ನು ರಕ್ತನಾಳ ಗಂಟು ಎಂದು ಪತ್ತೆ ಹಚ್ಚಿದ್ದರು. ಅದಕ್ಕೆ ಪ್ರಾಥಮಿಕ ಚಿಕಿತ್ಸೆ ಎಂದು ಒಂದು ಇಂಜೆಕ್ಸನ್ ಮಾಡಲಾಗಿತ್ತು. ಆಗ ಅಧಿಕ ರಕ್ತಸ್ರಾವ ಆಗಿದೆ. ಸುಚಿರಾಯು ಆಸ್ಪತ್ರೆಗೆ ಕಳುಹಿಸಿ ಎಂಬೊಲೈಸ್ ಮಾಡಿ ರಕ್ತಸ್ರಾವ ನಿಲ್ಲಿಸಲಾಗಿತ್ತು. ನಂತರ ಪುನಃ ಕಿಮ್ಸ್'ಗೆ ತಂದು ಐಸಿಯುನಲ್ಲಿ ದಾಖಲಿಸಿದ್ದೇವೆ. 24 ಗಂಟೆ ನಂತರ ಎಂಬೋಲೈಸ್ ತೆಗೆದಾಗ ಮತ್ತೆ ರಕ್ತ ಸ್ರಾವವಾಗಿದೆ. ಮಗುವಿಗೆ ಆರು ಬಾಟಲಿ ರಕ್ತ ನೀಡಿದ್ದೇವೆ. ನಮ್ಮಿಂದ‌ ಯಾವುದೇ ನಿರ್ಲಕ್ಷ್ಯ ಆಗಿಲ್ಲ' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT